Advertisement

ಬಂಗೇರಕಟ್ಟೆ ಕೆರೆ ಸಂರಕ್ಷಣೆ, ಅಭಿವೃದ್ಧಿಗೆ ಸದಸ್ಯತ್ವ ಅಭಿಯಾನ 

01:25 PM Jan 03, 2018 | |

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದಲ್ಲಿ ಉದ್ದೇಶಿಸಲಾಗಿರುವ ಬಂಗೇರಕಟ್ಟೆ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಸುವ್ಯವಸ್ಥಿತವಾಗಿ ನಡೆಸುವ ಸಲುವಾಗಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಸದಸ್ಯತ್ವದ ಅಭಿಯಾನ ಪ್ರಾರಂಭಿಸಲಾಗಿದೆ. ಕೆರೆ ಉಳಿಸಲು ಆರಂಭವಾದ ವಿನೂತನ ಅಭಿಯಾನ ಇದು.

Advertisement

ಸದಸ್ಯರಾಗಿ ಕೆರೆ ಅಭಿವೃದ್ಧಿಪಡಿಸಿ
ಕೆರೆ ಅಭಿವೃದ್ಧಿಗಾಗಿ 2 ವಿಧಗಳಲ್ಲಿ ಸದಸ್ಯತ್ವ ಅಭಿಯಾನ ನಡೆಸಲಾಗುತ್ತಿದೆ. ವಾರ್ಷಿಕವಾಗಿ ಒಬ್ಬ ಸದಸ್ಯರಿಂದ 250 ರೂ.ಸಂಗ್ರಹಿಸಲು ಉದ್ದೇಶಿಸಲಾಗಿದೆ. ಖಾಯಂ ಸದಸ್ಯತ್ವ ಬಯಸುವವರು 2,000 ರೂ. ನೀಡಿ ಕೆರೆ ಅಭಿವೃದ್ಧಿಗೆ ಸಹಕರಿಸಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಕೆರೆ ಅಭಿವೃದ್ಧಿ ಸಮಿತಿ ಸದಸ್ಯರು ಜನರನ್ನು ಸಮಿತಿಗೆ ನೋಂದಾಯಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಜನರು ಸ್ವಯಂ ಪ್ರೇರಿತರಾಗಿ ಸದಸ್ಯರಾಗಿ ಕೆರೆಯ ಅಭಿವೃದ್ಧಿ ಯಲ್ಲಿ ಪಾಲುದಾರರು ಆಗಬೇಕೆಂಬ ಆಶಯ ಸಮಿತಿಯವರದ್ದು.

ನಿಸರ್ಗಧಾಮಕ್ಕೆ ಡಾ| ಕಲಾಂ ಹೆಸರು
ಬಂಗೇರಕಟ್ಟೆ ಕೆರೆ ಅಭಿವೃದ್ಧಿ ಜತೆ ಜತೆಗೆ ನಿಸರ್ಗಧಾಮವನ್ನು ಲೋಕಾರ್ಪಣೆಗೊಳಿಸಲು ಉದ್ದೇಶಿಸಲಾಗಿದ್ದು, ಡಾ| ಎ.ಪಿ.ಜೆ. ಅಬ್ದುಲ್‌ ಕಲಾಂ ನಿಸರ್ಗಧಾಮ ಎಂದು ಹೆಸರಿಡಲು ಚಿಂತಿಸಲಾಗಿದೆ. ಎಲ್ಲ ಕಾಮಗಾರಿಗಳ ಬಗ್ಗೆ ಊರ-ಸ್ಥಳೀಯರಿಗೆ, ಸಂಘ-ಸಂಸ್ಥೆಗಳಿಗೆ ಮನದಟ್ಟು ಮಾಡಿಸಿ ಜತೆಯಾಗಿ ಸಹಕರಿಸಲು ಸದಸ್ಯತ್ವದ ಅಭಿಯಾನ ಕೈಗೊಳ್ಳಲಾಗುತ್ತಿದೆ.

ಕೇಂದ್ರಕ್ಕೆ ಮನವಿ
ಈಗಾಗಲೇ ಶಾಸಕರ ನಿಧಿ, ಸಂಸದರ ನಿಧಿ ಹಾಗೂ ರಾಜ್ಯ ಸರಕಾರದ ಅನುದಾನಕ್ಕೆ ಪ್ರಯತ್ನಿಸಲಾಗುತ್ತಿದೆ. ಸ್ಥಳೀಯ ಶಾಸಕ ಕೆ. ವಸಂತ ಬಂಗೇರ ಅವರು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಯವರಿಗೂ ಕೆರೆ ಅಭಿವೃದ್ಧಿಗೆ ಒಪ್ಪಿಗೆ ಪತ್ರ ಹಾಗೂ ಅನುದಾನಕ್ಕಾಗಿ ಬೇಡಿಕೆ ಪತ್ರ ಸಲ್ಲಿಸಲಾಗಿದೆ. ಪುರಾತನ ಕೆರೆಯನ್ನು ಅಭಿವೃದ್ಧಿಪಡಿಸಲು ಅನುದಾನ ಒದಗಿಸುವಂತೆ ಕೇಂದ್ರ ಸರಕಾರಕ್ಕೂ ಮನವಿ ಸಲ್ಲಿಸಲಾಗಿದೆ.

ಪಾರೆಂಕಿಯಲ್ಲಿ ಸಭೆ
ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವಠಾರದಲ್ಲಿ ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬಿ. ರಾಜಶೇಖರ್‌ ಶೆಟ್ಟಿ ಭಂಡಾರಿಗುಡ್ಡೆ ನೇತೃತ್ವದಲ್ಲಿ ಸಭೆ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದ ಅಭಿಯಂತ ಪುಷ್ಪರಾಜ ಭಾಗವಹಿಸಿ, ಕೆರೆಯ ಪ್ರಸ್ತುತ ಸ್ಥಿತಿ ಅವಲೋಕಿಸಿದರು. ಕೆರೆಯಲ್ಲಿ ನೀರು ಯಥೇತ್ಛವಾಗಿ ತುಂಬಿದ್ದು, ಮುಂಬರುವ ಮಾರ್ಚ್‌ – ಎಪ್ರಿಲ್‌ ತಿಂಗಳಿನಲ್ಲಿ ನೀರು ಕಡಿಮೆಯಾದಾಗ ಕೆರೆಯ ಸರಿಸುಮಾರು ಅರ್ಧದಷ್ಟು ಹೂಳೆತ್ತಲು ಕ್ರಮದ ಬಗ್ಗೆ ನಿರ್ಣಯಿಸಲಾಯಿತು. ಸಮಿತಿಯ ಉಪಾಧ್ಯಕ್ಷ ಕಾಂತಪ್ಪ ಗೌಡ, ಮಡಂತ್ಯಾರು ಗ್ರಾಪಂ ಉಪಾಧ್ಯಕ್ಷೆ ಜಯಂತಿ ಪಿ. ಸಮಿತಿಯ ಸದಸ್ಯರು ಮೊದಲಾದವರು ಭಾಗವಹಿಸಿದ್ದರು. ಡಾ| ಹೆಗ್ಗಡೆ ಅಪೇಕ್ಷೆ 2018ರ ಮಾರ್ಚ್‌ ಒಳಗೆ ಹೂಳೆತ್ತುವ ಕಾಮಗಾರಿ ಮುಗಿಯಬೇಕು ಎಂಬುದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅವರ ಅಪೇಕ್ಷೆಯಾಗಿದ್ದು, ಎಲ್ಲ ರೀತಿಯ ಸಹಕಾರ ಒದಗಿಸುವುದಾಗಿ ಹೇಳಿದ್ದಾರೆಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದರು.

Advertisement

ಕೆರೆಯ ಪುನಶ್ಚೇತನ, ಅಭಿವೃದ್ಧಿಗೆ ಸದಸ್ಯತ್ವ ಅಭಿಯಾನ ನಡೆಸುವ ತೀರ್ಮಾನವನ್ನು ಕೈಗೊಂಡಿರುತ್ತೇವೆ. ಕೆರೆಯ ಅಭಿವೃದ್ಧಿಯಿಂದ ಸರ್ವಋತು ನೀರು ಒದಗುವುದು. ಬೇಸಗೆ ಕಾಲದಲ್ಲಿ ಮಡಂತ್ಯಾರು ಬಂಗೇರಕಟ್ಟೆ ಮತ್ತು ಬಳ್ಳಮಂಜ ಪೇಟೆವರೆಗೆ ಮತ್ತು ಆಸುಪಾಸಿನ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಸಾಧ್ಯವಾಗುವುದು.
-ಕೆ.ಎಸ್‌. ಶೆಟ್ಟಿ
ಸಮಿತಿಯ ಸಂಯೋಜಕ

 -ಚಂದ್ರಶೇಖರ್‌ ಎಸ್‌. ಅಂತರ 

Advertisement

Udayavani is now on Telegram. Click here to join our channel and stay updated with the latest news.

Next