Advertisement
ನಗರದ 35 ವಾರ್ಡ್‌ಗಳಿಗೆ ಆಯ್ಕೆಯಾದ ಸದಸ್ಯರು ಇಂದಿಗೂ ನಾಮಕಾವಸ್ಥೆ ಸದಸ್ಯರಾಗೇ ಉಳಿದು ಕೊಂಡಿದ್ದಾರೆ. ಅವರಿಗೆ ಯಾವುದೇ ಅಧಿಕಾರವಿಲ್ಲ. ವಾರ್ಡ್‌ಗಳ ಕೆಲಸ ಮಾಡಲಾಗದೆ ಜನರಿಂದ ಸಹಸ್ರ ನಾಮಾರ್ಚನೆ ಮಾಡಿಸಿಕೊಳ್ಳುತ್ತಲೇ ದಿನ ದೂಡು ವಂತಹ ಸ್ಥಿತಿ ಸೃಷ್ಟಿಯಾಗಿದೆ. ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಗೆ ಮೀಸಲಾತಿ ವಿಘ್ನ ದೊಡ್ಡ ತೊಡಕಾಗಿ ಪರಿಣಮಿಸಿದ್ದು, ಅದಕ್ಕಿನ್ನೂ ಮುಕ್ತಿ ದೊರಕಿಲ್ಲ.
Related Articles
Advertisement
ಲೋಕಸಭೆ ಹಾಗೂ ವಿಧಾನಸಭಾ ಉಪ ಚುನಾವಣೆಗಳು ಮುಗಿದ ಬಳಿಕ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಸುವುದಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು. ಆದರೆ, ಧಾರವಾಡ ಹಾಗೂ ಇತರೆ ಜಿಲ್ಲೆಯವರು ನಗರಸಭೆ ವರಿಷ್ಠರ ಮೀಸಲು ಪಟ್ಟಿ ಪ್ರಶ್ನಿಸಿ ಮತ್ತೆ ಹೈಕೋರ್ಟ್ ಮೊರೆ ಹೋದರು. ಮತ್ತೆ ಚುನಾವಣೆಗೆ ಕೋರ್ಟ್ ತಡೆಯಾಜ್ಞೆ ನೀಡಿತು. ನಿರಂತರ ವಿಘ್ನಗಳಿಂದಾಗಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ವಿಳಂಬವಾಗುತ್ತಲೇ ಇದೆ.
ಅಭಿವೃದ್ಧಿ ಕಾರ್ಯಗಳು ಸ್ತಬ್ಧ: ಕಳೆದ ಹತ್ತು ತಿಂಗಳಿಂದ ನಗರಸಭೆಯಿಂದ ನಗರ ವ್ಯಾಪ್ತಿಯೊಳಗೆ ಯಾವುದೇ ಅಭಿವೃದ್ಧಿ ಕಾರ್ಯಗಳೂ ನಡೆಯುತ್ತಿಲ್ಲ. ನಗರದ ರಸ್ತೆಗಳೆಲ್ಲಾ ಹಾಳಾಗಿದೆ. ಕುಡಿಯುವ ನೀರು, ಕಸದ ಸಮಸ್ಯೆ ತೀವ್ರವಾಗಿದೆ. ಸ್ವಚ್ಛತೆಯೂ ಮಾಯ ವಾಗಿದೆ. ನಗರಸಭೆ ಆಡಳಿತದಲ್ಲಿ ಅಧಿಕಾರಿಗಳ ದರ್ಬಾರ್ ನಡೆದಿರುವುದರಿಂದ ಅವರನ್ನು ಹೇಳು ವವರು, ಕೇಳುವವರು ಯಾರೂ ಇಲ್ಲದಂತಾಗಿದೆ.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಸಮಯದಲ್ಲಿ ಮಂಡಿಸಿದ ಬಜೆಟ್‌ನಲ್ಲಿ ನಗರಾಭಿವೃದ್ಧಿಗೆ 50 ಕೋಟಿ ರೂ. ಹಣ ಬಿಡುಗಡೆ ಘೋಷಣೆ ಮಾಡಿತ್ತು. ಆ ಹಣ ಬಿಡುಗಡೆಯಾಗಿದೆಯೋ, ಇಲ್ಲವೋ ಗೊತ್ತಿಲ್ಲ. ನೂರಡಿ ರಸ್ತೆ ಹೊರತುಪಡಿಸಿದಂತೆ ಅವ್ಯವಸ್ಥಿತ ಸ್ವರೂಪ ಪಡೆದುಕೊಂಡಿರುವ ಉಳಿದ ಯಾವ ರಸ್ತೆಗಳ ಅಭಿವೃದ್ಧಿಯನ್ನೂ ಕೈಗೆತ್ತಿಕೊಂಡಿಲ್ಲ.
ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡರೆ ಕೆಲಸಗಳನ್ನು ಸುಸೂತ್ರವಾಗಿ ಮಾಡಿಕೊಂಡು ಹೋಗಬಹುದು. ಯಾವುದೇ ಕಾಮಗಾರಿಗಳ ಕ್ರಿಯಾಯೋಜನೆಗಳಿಗೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆಯಬೇಕು. ಆದರೆ, ಸ್ಥಳೀಯ ಸಂಸ್ಥೆಗಳ ವರಿಷ್ಠರ ಆಯ್ಕೆ ಪ್ರಕ್ರಿಯೆಯೇ ನಡೆದಿಲ್ಲ. ಹೀಗಾಗಿ ಸಾಮಾನ್ಯ ಸಭೆಗಳು ನಡೆದಿಲ್ಲ. ಹೊಸ ಕಾಮಗಾರಿಗಳು ಆರಂಭವಾಗಿಲ್ಲ. ಅಭಿವೃದ್ದಿ ಕಾರ್ಯಗಳು ನೆನೆಗುದಿಗೆ ಬಿದ್ದಿವೆ. ಚುನಾವಣಾ ನೀತಿ ಸಂಹಿತೆ ನೆಪದಲ್ಲಿ ಅಧಿಕಾರಿಗಳ ಅಂಧಾ ದರ್ಬಾರ್ ನಡೆದಿದೆ ಎನ್ನುವುದು ನಗರಸಭೆಗೆ ಆಯ್ಕೆಯಾಗಿರುವ ಜನಪ್ರತಿನಿಧಿಗಳ ಅನಿಸಿಕೆಯಾಗಿದೆ.
ಕಾಯದೇ ವಿಧಿ ಇಲ್ಲ: ಈ ಮಧ್ಯೆ ಮಾ.10ರಂದು ದಿಢೀರನೆ ಲೋಕಸಭೆ ಸಾರ್ವತ್ರಿಕ ಚುನಾವಣೆಯ ಅಧಿಸೂಚನೆಯೂ ಪ್ರಕಟವಾಗಿತು. ಈಗಾಗಲೇ ರಾಜ್ಯದಲ್ಲಿ ಎರಡು ಹಂತದ ಚುನಾವಣೆ (ಏ.18 ಮತ್ತು 23) ಮುಗಿದಿದೆ. ಮೇ 23ರಂದು ಮತ ಎಣಿಕೆಯೊಂದಿಗೆ ಫಲಿತಾಂಶ ಪ್ರಕಟಗೊಳ್ಳಲಿದೆ. ಆ ಬಳಿಕ ಐದು ದಿನಗಳ ನಂತರ ಮೇ 27ರಂದು ಚುನಾವಣಾ ನೀತಿ ಸಂಹಿತೆ ಅಂತ್ಯಗೊಳ್ಳಲಿದೆ. ಹೀಗಾಗಿ ಅಲ್ಲಿವರೆಗೆ ಕಾಯದೇ ವಿಧಿ ಇಲ್ಲ.
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆದ್ದಿರುವವರು ಹೆಸರಿಗಷ್ಟೇ ಸದಸ್ಯರು. ಆದರೆ, ಅವರಿಗೆ ಯಾವುದೇ ಅಧಿಕಾರವಿಲ್ಲ. ಅಧಿಕಾರಾವ ಧಿಯೂ ಆರಂಭವಾಗಿಲ್ಲ. ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಾಗಿ ನಂತರ ನಡೆಯುವ ಮೊದಲ ಸಾಮಾನ್ಯ ಸಭೆ ನಡೆಯುವ ದಿನದಿಂದ ಹೊಸ ಸದಸ್ಯರ ಅಧಿಕಾರವಧಿ ಅಧಿಕೃತವಾಗಿ ಆರಂಭವಾಗಲಿದೆ.
ಅಧಿಕಾರಿಗಳ ಕಾರ್ಯವೈಖರಿಗೆ ಕನ್ನಡಿ: ನಗರಸಭೆಗೆ ವರಿಷ್ಠರ ಆಯ್ಕೆ ನಡೆಯದಿರುವುದರಿಂದ ಬೃಹತ್ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗದಂತಾಗಿದೆ. ಹತ್ತು ತಿಂಗಳ ಹಿಂದೆ ಬಜೆಟ್‌ನಲ್ಲಿ ಘೋಷಣೆಯಾದ 50 ಕೋಟಿ ರೂ. ಹಣಕ್ಕೆ ಈಗ ಯೋಜನಾ ವರದಿ ಯನ್ನು ಸಿದ್ಧಪಡಿಸಲಾಗುತ್ತಿದೆ ಎಂದರೆ ಇದು ಅಧಿ ಕಾರಿಗಳ ಕಾರ್ಯವೈಖರಿಗೆ ಹಿಡಿದ ಕನ್ನಡಿಯಂತಾಗಿದೆ.
ಲೋಕಸಭೆ ಚುನಾವಣೆ ಘೋಷಣೆಯಾದ ನಂತರದಲ್ಲಿ ನಗರಸಭೆಯ ಮೂವರು ಆಯುಕ್ತರು ಬದಲಾಗಿದ್ದಾರೆ. ಯಾರೊಬ್ಬರಿಗೂ ನಗರಸಭೆ ಕಾಮಗಾರಿಗಳು ಯಾವ ಹಂತದಲ್ಲಿವೆ, ಯಾವ ಯಾವ ಯೋಜನೆಯಡಿ ಏನೇನು ಕೆಲಸ ನಡೆಯುತ್ತಿವೆ ಎಂಬುದರ ಅರಿವಿಲ್ಲ. ವರ್ಗಾವಣೆ ಯಾಗಿ ಬಂದ ನಂತರದಲ್ಲಿ ಚುನಾವಣಾ ಕೆಲಸ- ಕಾರ್ಯಗಳಿಗೆ ನಿಯೋಜನೆಗೊಂಡ ಅಧಿಕಾರಿಗಳಿಗೆ ಇಂದಿಗೂ ನಗರಸಭೆ ಆಡಳಿತದತ್ತ ಗಮನಹರಿಸುವುದಕ್ಕೆ ಸಾಧ್ಯವಾಗಿಲ್ಲ.
ಹದಿನಾಲ್ಕನೇ ಹಣಕಾಸು ಯೋಜನೆಯಡಿ ಕೆಲವೊಂದು ರಸ್ತೆ, ಚರಂಡಿ ಕಾಮಗಾರಿಗಳು ನಡೆಯುತ್ತಿರುವುದನ್ನು ಹೊರತುಪಡಿಸಿದರೆ ಬಹು ನಿರೀಕ್ಷೆಯ ಯೋಜನೆಗಳೆಲ್ಲವೂ ಹಳ್ಳ ಹಿಡಿದಿವೆ. ಹೊಸದಾಗಿ ಆಯ್ಕೆಯಾಗಿರುವ ಸದಸ್ಯರಿಗೆ ಅಧಿಕಾರಿಗಳು ಬೆಲೆ ಕೊಡುತ್ತಿಲ್ಲ. ವರಿಷ್ಠರ ಚುನಾವಣೆ ನಡೆಯದಿರುವುದು ಹಾಗೂ ಚುನಾವಣೆ ನೀತಿ ಸಂಹಿತೆಯೂ ಇದಕ್ಕೆ ಕಾರಣವಾಗಿರಬಹುದು. ವಾರ್ಡ್‌ಗಳಲ್ಲಿ ಬೀದಿ ದೀಪ ದುರಸ್ತಿ, ಶುಚಿತ್ವದ ಕೆಲಸವನ್ನಷ್ಟೇ ಮಾತ್ರ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ.
● ಮಂಡ್ಯ ಮಂಜುನಾಥ್