ಶ್ರೀನಗರ : ಕಾಶ್ಮೀರದಲ್ಲಿ ಅಲ್ಪಸಂಖ್ಯಾತರ ನಿರಂತರ ಹತ್ಯೆಗಳನ್ನು ಖಂಡಿಸಿ ಶುಕ್ರವಾರ ಹಿಂದೂ ಮತ್ತು ಸಿಖ್ ಸಂಘಟನೆಗಳು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.
ಸಿಖ್ ಸಮುದಾದಯದ ಸರಕಾರಿ ಉದ್ಯೋಗಿಗಳು ಕರ್ತವ್ಯ ಬಹಿಷ್ಕರಿಸಿ ಪ್ರತಿಭಟನೆಗೆ ಇಳಿದಿದ್ದಾರೆ. ಸರಕಾರ ನಮ್ಮ ಭದ್ರತೆಯ ಕುರಿತಾಗಿ ಭರವಸೆ ನೀಡುವ ವರೆಗೆ ಉದ್ಯೋಗಿಗಳು ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಸಿಖ್ ಸಂಘಟನೆಗಳ ನಾಯಕ ಜಗಮೋಹನ್ ಸಿಂಗ್ ರೈನಾ ಹೇಳಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ ಸುಮಾರು 50,000ದಷ್ಟು ಸಿಖ್ ಸಮುದಾಯದ ಜನರು ವಾಸಿಸುತ್ತಿದ್ದು, ಪುಲ್ವಾಮಾ, ಬಾರಾಮುಲ್ಲಾ, ಬಡಗಾಮ್ ಮತ್ತು ಶ್ರೀನಗರದಲ್ಲಿ ನೆಲೆಸಿದ್ದಾರೆ.
ಸಿಖ್ ಸಮುದಾಯದ ಜನರ ಹತ್ಯೆಗಳನ್ನು ಶಿರೋಮಣಿ ಅಕಾಲಿದಳದ ನಾಯಕ ಸುಖ್ಬೀರ್ ಸಿಂಗ್ ಬಾದಲ್ ಬಲವಾಗಿ ಖಂಡಿಸಿದ್ದಾರೆ.
ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಲಷ್ಕರ್-ಎ-ತಯ್ಯಬಾದ ಸಹವರ್ತಿ ಸಂಘಟನೆ “ದ ರೆಸಿಸ್ಟೆನ್ಸ್ ಫ್ರಂಟ್ ಉಗ್ರರು 5 ದಿನಗಳಲ್ಲಿ 7 ಅಲ್ಪಸಂಖ್ಯಾತ ಹಿಂದೂ ಮತ್ತು ಸಿಖ್ ಸಮುದಾಯದ ಜನರನ್ನು ಹತ್ಯೆಗೈದು ಅಟ್ಟಹಾಸ ಮೆರೆದಿದ್ದಾರೆ. ಶ್ರೀನಗರದ ಈದ್ಗಾ ಎಂಬಲ್ಲಿ ಸರಕಾರಿ ಶಾಲೆಯ ಪ್ರಾಂಶುಪಾಲೆ ಮತ್ತು ಶಿಕ್ಷಕರೊಬ್ಬರನ್ನು ಗುರುವಾರ ಗುಂಡು ಹಾರಿಸಿ ಕೊಲ್ಲಲಾಗಿತ್ತು.
ಉಗ್ರರ ಕೃತ್ಯದಿಂದ್ದಾಗಿ ಕಾಶ್ಮೀರದ ಪ್ರವಾಸೋದ್ಯಮದ ಮೇಲೂ ದುಷ್ಪರಿಣಾಮ ಬೀರಿದ್ದು, ಜನರು ಜಮ್ಮು ಮತ್ತು ಕಾಶ್ಮೀರದತ್ತ ತೆರಳಲು ಭಯಗೊಂಡಿದ್ದಾರೆ. ಕಾಶ್ಮೀರದ ಆರ್ಥಿಕತೆಯ ಮೇಲೆ ಹೊಡೆತ ಬೀಳುವ ಹಾಗಾಗಿದೆ.
ಸೇನಾ ಪಡೆಗಳು ಭಾರಿ ಸಿದ್ಧತೆಗಳೊಂದಿಗೆ ಉಗ್ರರ ಸದ್ದಡಗಿಸಲು ಕಾರ್ಯಾಚರಣೆಗೆ ಸನ್ನದ್ಧವಾಗಿವೆ. ಆಯಕಟ್ಟಿನ ಸ್ಥಳಗಳಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ.