Advertisement

ಹಸಿರು ಶಾಲು ಗರ್ಜನೆ; ರಾಜ್ಯಾದ್ಯಂತ ರೈತರಿಂದ ಭಾರೀ ಪ್ರತಿಭಟನೆ

06:00 AM Jul 10, 2018 | Team Udayavani |

ಬೆಂಗಳೂರು: ಸಂಪೂರ್ಣ ಸಾಲಮನ್ನಾಗೆ ಒತ್ತಾಯಿಸಿ ರಾಜಧಾನಿ ಸೇರಿದಂತೆ ರಾಜ್ಯಾದ್ಯಂತ ರೈತರು ಬೀದಿಗಿಳಿದು ಪ್ರತಿಭಟಿಸಿದ್ದಾರೆ. ಬೆಂಗಳೂರಿನಲ್ಲಿ ಸಾವಿರಾರು ರೈತರು ಬೃಹತ್‌ ರ್ಯಾಲಿ ನಡೆಸಿ ರಾಜ್ಯದ ರೈತರ ಎಲ್ಲ ಸಾಲಮನ್ನಾ ಮಾಡಬೇಕು ಎಂದು ಒಕ್ಕೊಲರ ಆಗ್ರಹ ಮಾಡಿದರು. ಉಳಿದಂತೆ ಬೆಳಗಾವಿ, ಮಂಡ್ಯ, ಮೈಸೂರು, ಗುಂಡ್ಲುಪೇಟೆ ಸೇರಿದಂತೆ ಹಲವೆಡೆ ರೈತ ಸಂಘಟನೆಗಳು ರಸ್ತೆ ತಡೆ ನಡೆಸಿ ಪ್ರತಿಭಟಿಸಿವೆ.

Advertisement

ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ನಗರ ಜಿಲ್ಲೆಗಳಿಂದ ನಗರಕ್ಕೆ ಆಗಮಿಸಿದ್ದ ರೈತರು ಸ್ವಾತಂತ್ರ್ಯ ಉದ್ಯಾನದಲ್ಲಿ ಜಮಾವಣೆಗೊಂಡು ನಂತರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ರೈತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ತಳ್ಳಾಟ-ನೂಕಾಟದಲ್ಲಿ ಕೆಲವು ರೈತರಿಗೆ ಸಣ್ಣಪುಟ್ಟ ಗಾಯಗಳೂ ಆಗಿವೆ. ಈ ಸಂದರ್ಭದಲ್ಲಿ ರೈತರು ಹಾಗೂ ಪೊಲೀಸರ ನಡುವೆ ವಾಗ್ವಾದವೂ ನಡೆಯಿತು. ಕೆಲವು ರೈತರನ್ನು ಬಂಧಿಸಿ,  ಬಿಡುಗಡೆ ಮಾಡಲಾಯಿತು.

ಮುಖ್ಯಮಂತ್ರಿ ಭೇಟಿ ಮಾಡಿಸುವುದಾಗಿ ಭರವಸೆ ನೀಡಿ ಪೊಲೀಸ್‌ ಅಧಿಕಾರಿಗಳು ಕೋಡಿಹಳ್ಳಿ ಚಂದ್ರಶೇಖರ್‌ ಹಾಗೂ ಮುಖಂಡರನ್ನು ಕರೆದೊಯ್ದು ಭೇಟಿ ಮಾಡಿಸದೆ ವಾಪಸ್‌ ಕಳುಹಿಸಿದರು. ಇದರಿಂದ ಮತ್ತಷ್ಟು ಕೆರಳಿದ ರೈತರು ಮತ್ತೆ ಸ್ವಾತಂತ್ರ್ಯ ಉದ್ಯಾನದ ಬಳಿ ಪ್ರತಿಭಟನೆ ನಡೆಸಿ ಸಿಎಂ ಬರುವವರೆಗೂ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ಸಂಜೆ ಸಹಕಾರ ಸಚಿವ ಬಂಡೆಪ್ಪ ಕಾಂಶಪುರ್‌, ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಿ, ಮುಖ್ಯಮಂತ್ರಿ ಭೇಟಿಗೆ ಸಮಯ ನಿಗದಿಪಡಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್‌ ಪಡೆಯಲಾಯಿತು.

ಮುಖ್ಯಮಂತ್ರಿಯವರ ಜತೆ ಮಾತುಕತೆ ನಂತರ ನಮ್ಮ ಹೋರಾಟದ ಮುಂದಿನ ರೂಪು-ರೇಷೆ ನಿರ್ಧರಿಸಲಾಗುವುದು ಎಂದು ಕೋಡಿಹಳ್ಳಿ ಚಂದ್ರಶೇಖರ್‌ ತಿಳಿಸಿದರು.

ಏನಾಯ್ತು?: ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ನೇತೃತ್ವದಲ್ಲಿ ರೈತರು ಸೋಮವಾರ ಬೆಳಗ್ಗೆ ಫ್ರೀಡಂ ಪಾರ್ಕ್‌ನಿಂದ ಮೆರವಣಿಗೆ ಆರಂಭಿಸಿ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಸಮಾವೇಶಗೊಂಡರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್‌, ಮುಖ್ಯಮಂತ್ರಿ ಎಚ್‌.ಡಿ.ಕುಮಾರ ಸ್ವಾಮಿ ಅಧಿಕಾರಕ್ಕೆ ಬರುವ ಮೊದಲು  ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಅಲ್ಲದೆ, ಪ್ರಣಾಳಿಕೆಯಲ್ಲೂ ಕೂಡ ಈ ಬಗ್ಗೆ ಪ್ರಸ್ತಾಪ ಮಾಡಿದ್ದರು. ಆದರೆ, ಅಧಿಕಾರ ಸ್ವೀಕರಿಸಿದ ಮೇಲೆ ಉಲ್ಟಾ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

54 ಸಾವಿರ ಕೋಟಿ ರೂ.ಬೆಳೆೆ ಸಾಲ:
ಬಜೆಟ್‌ಗೂ ಮುನ್ನಾ ರೈತ‌ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಸಿಎಂ ಕುಮಾರಸ್ವಾಮಿ, ರೈತರ ಸಂಪೂರ್ಣ ಸಾಲಮನ್ನಾದ ಬಗ್ಗೆ ಭರವಸೆ ನೀಡಿದ್ದರು. ಆದರೆ, ಈಗ 54 ಸಾವಿರ ಕೋಟಿ ರೂ. ಬೆಳೆೆ ಸಾಲದಲ್ಲಿ ಕೇವಲ 34 ಕೋಟಿ ರೂ. ಸುಸ್ತಿ ಬೆಳೆ ಸಾಲ ಮಾತ್ರಮನ್ನಾ ಮಾಡಿದ್ದಾರೆ. ಹಲವು ಷರತ್ತುಗಳನ್ನು ಹಾಕಿ ರೈತರ ಬೆಳೆ ಸಾಲಮನ್ನಾ ಮಾಡಿರುವ ಸರ್ಕಾರದ ಕ್ರಮ ಸರಿಯಲ್ಲ ಎಂದು ದೂರಿದರು.

ರಾಜ್ಯದ ರೈತರ ಸಾಲ, 1ಲಕ್ಷ 20 ಸಾವಿರ ಕೋಟಿ ರೂ.ಇದೆ. ಇದರಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಸಮಿಶ್ರ ಸರ್ಕಾರ 34 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದೆ. ಉಳಿದ, 86 ಕೋಟಿ ರೂ.ಗಳನ್ನು ಯಾರು ತೀರಿಸಬೇಕು. ನಾವು ರೈತರ ಪರ ಎಂದು ಅಬ್ಬರಿಸುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಂಕಷ್ಟ ದಲ್ಲಿರುವ ರಾಜ್ಯದ ರೈತರ ನೆರವಿಗೆ ಬರಬೇಕು, ಸಂಪೂರ್ಣ ಸಾಲ ಮನ್ನಾ ಸಂಬಂಧ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.

ರೈತರ ಸಾಲವನ್ನ ಸಂಪೂರ್ಣ ಮನ್ನಾ ಮಾಡುವ ಸಂಬಂಧ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ಗಳು ಮತ್ತಷ್ಟು ನಡೆಯಲಿವೆ. ಇದೇ 21ರಂದು ಹಾವೇರಿಯಲ್ಲಿ  ಬೃಹತ್‌ ರೈತ ಸಮಾವೇಶ ಆಯೋಜಿಸಲಾಗಿದೆ ಎಂದು ಹೇಳಿದರು. 

ವರದಿ ಜಾರಿಗೆ ಒತ್ತಾಯ:
ಸಂಘದ ಕಾರ್ಯಾಧ್ಯಕ್ಷ ಹೆಚ್‌.ಆರ್‌. ಬಸವರಾಜಪ್ಪ  ಮಾತನಾಡಿ, ಕೇಂದ್ರ ಸರ್ಕಾರ ಕೂಡ ರೈತರನ್ನು ಮರೆತಿದೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮೊದಲು ಡಾ.ಸ್ವಾಮಿನಾಥನ್‌ ಆಯೋಗದ ವರದಿ ಜಾರಿ ಮಾಡುವ ಬಗ್ಗೆ ಭರವಸೆ ನೀಡಿತ್ತು. ಆದರೆ ಅಧಿಕಾಕ್ಕೆ ಬಂದ ನಾಲ್ಕು ವರ್ಷ ಕಳೆದರೂ, ಈ ಬಗ್ಗೆ ಮಾತನಾಡುತ್ತಿಲ್ಲ. ರೈತರ ಬಗ್ಗೆ ಕಾಳಜಿ ಇದ್ದರೆ ಕೇಂದ್ರ ಸರ್ಕಾರ, ಕೂಡಲೇ ಉತ್ಪಾದನ ವೆಚ್ಚವನ್ನು ಆಧಾರಿಸಿ ಬೆಲೆಯನ್ನು ನಿಗದಿ ಪಡಿಸಬೇಕು ಎಂದು ಒತ್ತಾಯಿಸಿದರು. ಮಾಜಿ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಮೊಮ್ಮಗಳು ವಸಂತಾರೆಡ್ಡಿ ಸೇರಿದಂತೆ ಹಲವು ರೈತ ಮುಖಂಡರುಗಳು ಪ್ರತಿಭಟೆಯಲ್ಲಿ ಪಾಲ್ಗೊಂಡಿದ್ದರು.

ಮಾನವ ಸರಪಳಿ, ಸಂಸದರಿಗೆ ಮುತ್ತಿಗೆ
ರೈತರ ಸಾಲಮನ್ನಾ, ಕಬ್ಬಿನ ಬಾಕಿ ಬಿಲ್‌ ಪಾವತಿಗೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿಯಲ್ಲಿ ರೈತ ಸಂಘದ ವತಿಯಿಂದ ಸೋಮವಾರ ನಡೆದ ಬೃಹತ್‌ ಪ್ರತಿಭಟನೆ ವೇಳೆ ನಗರದ ಚನ್ನಮ್ಮ ವೃತ್ತದಲ್ಲಿ ಎರಡೂವರೆ ತಾಸಿಗೂ ಹೆಚ್ಚು ಕಾಲ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆದು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಸಂಚಾರ ದಟ್ಟಣೆಯಿಂದ ಸಾರ್ವಜನಿಕರು ಕಿರಿಕಿರಿ ಅನುಭವಿಸಿದರು. ಟ್ರಾಫಿಕ್‌ ಜಾಮ್‌ನಿಂದ ವಾಹನಗಳು ಸುತ್ತು ಹಾಕಿ ಸಂಚರಿಸಬೇಕಾಯಿತು. ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಅಪರ ಜಿಲ್ಲಾಧಿಕಾರಿ ಎ.ಬಿ. ಬೂದೆಪ್ಪ ಸ್ಥಳಕ್ಕಾಗಮಿಸಿ ಮನವಿ ಸ್ವೀಕರಿಸಿದರು. ಆದರೆ ಸಮಾಧಾನಗೊಳ್ಳದ ರೈತರು, ಜಿಲ್ಲಾಧಿಕಾರಿಯೇ ಬಂದು ನಮ್ಮ ಅಳಲು ಕೇಳಬೇಕು ಎಂದು ಪಟ್ಟು ಹಿಡಿದರು.

ಹೋರಾಟ ಬೆಂಬಲಿಸಿ ರಸ್ತೆಗಿಳಿದ ಸಂಸದ
ಸಂಸದ ಸುರೇಶ ಅಂಗಡಿ ನಗರದ ಕಾಡಾ ಕಚೇರಿಯಲ್ಲಿ ಇರುವುದನ್ನು ತಿಳಿದ ರೈತ ಮುಖಂಡರು ಅಲ್ಲಿಗೆ ಹೋಗಿ ಸಂಸದರಿಗೆ ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡರು. ಜತೆಗೆ, ಪ್ರತಿಭಟನಾ ಸ್ಥಳಕ್ಕೆ ಸಂಸದರನ್ನು ಕರೆದುಕೊಂಡು ಬಂದರು. ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಮಾಡಲು ರಾಜ್ಯದ ಸಂಸದರು ಪ್ರಧಾನಿ ಗಮನಕ್ಕೆ ಏಕೆ ತರುತ್ತಿಲ್ಲ ಎಂದು ಪ್ರಶ್ನಿಸಿದಾಗ, ಮೊದಲು ರಾಜ್ಯ ಸರಕಾರ ಸಂಪೂರ್ಣ ಸಾಲಮನ್ನಾ ಮಾಡುವಂತೆ ನಾನೂ ಹೋರಾಟಕ್ಕೆ ಇಳಿಯುತ್ತೇನೆ ಎಂದು ತಾವೇ ಖುದ್ದಾಗಿ ರೈತರ ಹೋರಾಟ ಬೆಂಬಲಿಸಿ ಪ್ರತಿಭಟನೆ ನಡೆಸಿದರು. ನಂತರ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಜಿಯಾವುಲ್ಲಾ ಎಸ್‌. ಹಾಗೂ ನಗರ ಪೊಲೀಸ್‌ ಆಯುಕ್ತ ಡಾ| ಡಿ.ಸಿ. ರಾಜಪ್ಪ ಅವರು ರೈತರ ಮನವಿ ಆಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next