ಬೆಂಗಳೂರು: ಅಗ್ನಿ ಪಥ ಯೋಜನೆ ಜಾರಿ ವಿರೋಧಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ “ಆಕ್ರೋಶ ರ್‍ಯಾಲಿ’ ನಡೆಸಿದರು.
ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮದ್ ನಲಪಾಡ್ ನೇತೃತ್ವದಲ್ಲಿ ರಾಜ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ರಾಷ್ಟ್ರೀಯ ಯುವ ಕಾಂಗ್ರೆಸ್‌ನ ಉಸ್ತುವಾರಿ ಕೃಷ್ಣ ಅಲ್ಲವರು, ಮಹಾರಾಷ್ಟ್ರ ಯೂತ್ ಕಾಂಗ್ರೆಸ್ ಅಧ್ಯಕ್ಷ ಜಿಶಾನ್ ಸಿದ್ಧಕಿ, ದಿಲ್ಲಿ ಘಟಕದ ಅಧ್ಯಕ್ಷ ರಣ ವಿಜಯ್, ಛತ್ತೀಸ್‌ಗಡದ ಅಧ್ಯಕ್ಷ ಪೂರ್ಣಚಂದ್ರ ಪಧಿ ಮತ್ತಿತರರು ಭಾಗವಹಿಸಿದ್ದರು.
ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶ್ರೀನಿವಾಸ್, ಕೇಂದ್ರ ಸರಕಾರ ಈಗ ಸೇನೆಯನ್ನು ಕೂಡ ವ್ಯಾಪಾರಿ ಮನೋಭಾವದಿಂದ ನೋಡ ತೊಡಗಿದೆ. ಭಾರತೀಯ ಸೇನೆಯನ್ನು ಮುಗಿಸುವ ಕೆಲಸ ಮಾಡಲಾಗುತ್ತಿದೆ. ಅಗ್ನಿಪಥ ಹೆಸರಿಗೆ ಅಪಮಾನಿಸುವ ಯೋಜನೆ ಇದಾಗಿದೆ ಎಂದರು.
ಮಹಮದ್ ನಲಪಾಡ್ ಮಾತನಾಡಿ, ಮೋದಿ ಅಧಿಕಾರ ನಡೆಸಿ 8 ವರ್ಷ ಕಳೆದಿದೆ.
ಸುಮಾರು 16 ಕೋಟಿ ಯುವಕರಿಗೆ ಉದ್ಯೋಗ ಕಲ್ಪಿಸಬೇಕಾಗಿತ್ತು. ಆದರೆ ಕೋವಿಡ್ ವೇಳೆ ಸಾವಿರಾರು ಯುವಕರು ಕೆಲಸವಿಲ್ಲದೆ ಬೀದಿ ಪಾಲಾಗಿದ್ದಾರೆ. ಈಗ ಅಗ್ನಿಪಥದ ಮೂಲಕ ಯುವಕರ ಭವಿಷ್ಯತ್ತಿನಲ್ಲಿ ಚೆಲ್ಲಾಟ ವಾಡುತ್ತಿದ್ದಾರೆ ಎಂದು ದೂರಿದರು.