ಬೆಂಗಳೂರು: ಭತ್ಯೆ ದುರುಪಯೋಗ ಆರೋಪಕ್ಕೆ ಉತ್ತರ ನೀಡಲು ಎಂಟು ವಿಧಾನಪರಿಷತ್ ಸದಸ್ಯರು ನಾಲ್ಕು ವಾರಗಳ ಸಮಯ ಕೇಳಿದ್ದಾರೆ.
ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರ ಮೂರ್ತಿ ಅವರು ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಉತ್ತರ ನೀಡಲು ಸಮಯ ನೀಡುವಂತೆ ಮನವಿ ಮಾಡಿ ಪತ್ರ ಬರೆದಿದ್ದಾರೆ.
ಈ ಮಧ್ಯೆ, ಸಭಾಪತಿಯವರ ನೋಟಿಸ್‌ಗೆ ಆಕ್ಷೇಪ ಎತ್ತಿರುವ ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ವಿ.ಎಸ್.ಉಗ್ರಪ್ಪ, 1950ರ ಪ್ರಜಾ ಪ್ರತಿನಿಧಿ ಕಾಯ್ದೆಯಡಿ ದೇಶದ ಯಾವುದೇ ಭಾಗದಲ್ಲಿ ಮತದಾರರಾಗಲು ಅವಕಾಶವಿದೆ ಎಂದು ಪ್ರತಿಪಾದಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ವ್ಯಕ್ತಿಯು ಎಲ್ಲಿಯಾದರೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶವಿದೆ.
ಅಗತ್ಯವಿದ್ದಾಗ ಬದಲಾಯಿಸಕೊಳ್ಳಲು ಅವಕಾಶವಿದೆ. ಹೀಗಾಗಿ, ದೂರು ಊರ್ಜಿತವಾಗುವುದಿಲ್ಲ ಎಂದರು. ವಿಧಾನ ಪರಿಷತ್‌ನ ಎಂಟು ಸದಸ್ಯರು, ಬಿಬಿಎಂಪಿಯಿಂದ ಯಾವುದೇ ಟಿಎ, ಡಿಎ ಪಡೆದುಕೊಂಡಿಲ್ಲ. ಸಭಾಪತಿಗಳು ತಮಗೆ ಬಂದ ದೂರಿನ ಬಗ್ಗೆ ಪರಾಮರ್ಶಿಸಲು ನೀತಿ ನಿರೂಪಣಾ ಸಮಿತಿಗೆ ಕಳುಹಿಸಿಕೊಟ್ಟು ರಹಸ್ಯ ಕಾಪಾಡಿಕೊಳ್ಳಬೇಕು. ಅದರ ಬದಲು ಅವರು ಎಲ್ಲರ ಹೆಸರು ಬಹಿರಂಗ ಮಾಡಿ ಸದನದ ಗೌರವಕ್ಕೆ ಚ್ಯುತಿ ತರುವುದಲ್ಲದೇ, ಸದಸ್ಯರ ಹಕ್ಕುಚ್ಯುತಿ ಮಾಡಿದ್ದಾರೆ. ಈ ಮೂಲಕ ಸಭಾಪತಿ ನಿಯಮಗಳನ್ನು ಗಾಳಿಗೆ ತೂರಿ ವಿಷಯವನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂದು ಹೇಳಿದರು.
ಸಭಾಪತಿಯವರು ಈಗಾಗಲೇ ಸದನದ ಸದಸ್ಯರ ವಿಶ್ವಾಸ ಕಳೆದುಕೊಂಡಿದ್ದಾರೆ. ಹೀಗಾಗಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ನೋಟಿಸ್ ನೀಡಿದ್ದೇವೆ. ಅವಿಶ್ವಾಸ ನಿರ್ಣಯ 14 ದಿನದಲ್ಲಿ ಬರಲಿದ್ದು, ಅವರು ವಾಸ್ತವ ಅರಿತು ರಾಜಿನಾಮೆ ನೀಡಬೇಕು. ಇಲ್ಲದಿದ್ದರೆ, ಚುನಾವಣೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ತಿಳಿಸಿದರು.