Advertisement

ಮೇಲುಕೋಟೆ ಎಂಬುದು ಬಯಲಿನ ಸ್ವರ್ಗ!

08:15 PM Nov 08, 2019 | Lakshmi GovindaRaju |

ಮೇಲುಕೋಟೆಯಲ್ಲಿ ಅಕ್ಟೋಬರ್‌ ಹದಿಮೂರರಂದು ನಡೆದ, ಕವಿ ಪುತಿನ ಅವರ “ಪುಣ್ಯಸ್ಮರಣೆ’ಯಲ್ಲಿ ಭಾಗಿಯಾಗುವ ಸದವಕಾಶವನ್ನು ಪುತಿನ ಟ್ರಸ್ಟ್ನ ಅಧ್ಯಕ್ಷರಾದ ಹಿರಿಯ ಕವಿ ಎಚ್‌.ಎಸ್‌. ವೆಂಕಟೇಶಮೂರ್ತಿಯವರು ಒದಗಿಸಿದ್ದು ನನ್ನ ಸೌಭಾಗ್ಯವೆಂದೇ ಭಾವಿಸುತ್ತೇನೆ. ಸಂಜಯ್‌ ಹೋದಿಗೆರೆ ಅವರು ಅತ್ಯಂತ ಆತ್ಮೀಯವಾಗಿ ಕಂಡು, ನಾನು ನೋಡಲು ಆಸೆಪಟ್ಟಿದ್ದ ಪುತಿನ ಅವರ ಮನೆ, ಮಲೆದೇಗುಲ, ಚೆಲುವ ನಾರಾಯಣನ ಗುಡಿ, ತೊಣ್ಣೂರಿನ ಕೆರೆ, ತೊಣ್ಣೂರಿನ ಇತಿಹಾಸ ಪ್ರಸಿದ್ಧವಾದ ದೇವಾಲಯ ಎಲ್ಲವನ್ನೂ ನೋಡಲು ಕಾರು ಮಾಡಿ ಕಳಿಸಿದರು.

Advertisement

“ಮಲೆದೇಗುಲ’ದ ಬಗ್ಗೆ ನನಗಿದ್ದ ವಿಚಿತ್ರ ಸೆಳೆತಕ್ಕೆ ನೂರು ಕಾರಣಗಳಿದ್ದವು. ಬೆಟ್ಟವೇರುವುದು ಪ್ರಯಾಸದ ಕೆಲಸವೆಂದು ಎಚ್ಚೆಸ್ವಿ ಅವರು ಎಚ್ಚರಿಸಿದ್ದರೂ, ಮಲೆದೇಗುಲವನ್ನು ನೋಡದೆ ಹಿಂತಿರುಗಲು ಮನಸ್ಸಿರಲಿಲ್ಲ. ಅನಾರೋಗ್ಯದಿಂದ ತಕ್ಕಮಟ್ಟಿಗೆ ಚೇತರಿಸಿಕೊಳ್ಳುತ್ತಿರುವವಳಿಗೆ ಬೆಟ್ಟ ಹತ್ತುವುದರ ಬಗ್ಗೆ ಒಳಗೊಳಗೇ ಸಂದೇಹವಿದ್ದರೂ, ಸಂಕಲ್ಪ ಮಾಡಿಯಾಗಿತ್ತಲ್ಲ, ಹಟ ಮಾಡಿಕೊಂಡು ಹೋದೆ! ಮಲೆಯ ನಾರಸಿಂಗನ ಬಗ್ಗೆ ಪುತಿನ ಕವನಗಳನ್ನು, ಪ್ರಬಂಧಗಳನ್ನು ಓದಿಕೊಂಡಿದ್ದೆ, ಪಾಠ ಮಾಡಿದ್ದೆ.

ಮೂವತ್ತು ವರ್ಷಗಳ ಹಿಂದೆ ಕಾಲೇಜಿನ ಸಹೋದ್ಯೋಗಿಗಳೊಂದಿಗೆ ಮೇಲುಕೋಟೆಗೆ ಹೋಗಿದ್ದೆ ಕೂಡ. ಆದರೆ ಆಗಿನ ಮನಸ್ಥಿತಿಗೂ, ಈಗಿನದಕ್ಕೂ ಅದೆಷ್ಟು ಅಂತರವಿತ್ತು ! ಅದೊಂದು “ಬಿಲಸ್ವರ್ಗ’! ಈಗ ಬಯಲಿನ ಸ್ವರ್ಗ! ವೃದ್ಧರೊಬ್ಬರು ಹೆಗಲ ಮೇಲೆ ಕೊಡವನ್ನು ಇಟ್ಟು ತುಂಬು ಉತ್ಸಾಹದಲ್ಲಿಯೇ ಬೆಟ್ಟ ಹತ್ತುವುದನ್ನು ಕಂಡೆ. ದಿನವೂ ಕೆಳಗಿನ ಕಲ್ಯಾಣಿಯಿಂದ ಮಲೆಯ ನಾರಸಿಂಗನ ಅಭಿಷೇಕಕ್ಕೆ ಹೀಗೆ ನೀರು ಒಯ್ಯುತ್ತಾರಂತೆ. ಏದುಸಿರು ಬಿಡುತ್ತ, ಅಲ್ಲಲ್ಲೇ ಕೂತು, ನಿಂತು ಬೆಟ್ಟ ಹತ್ತುತ್ತಿದ್ದವಳಿಗೆ ಅವರನ್ನು ಕಂಡು ಕೊಂಚ ಕಸಿವಿಸಿ, ನಾಚಿಕೆಯಾಯಿತು.

ನಾನು ಧಾರ್ಮಿಕ ವಾತಾವರಣದಲ್ಲಿ ಬೆಳೆದವಳೇ ಅಲ್ಲ. ದೇವರು ದಿಂಡರು, ಬೆಟ್ಟ ಹತ್ತುವುದು, ಅಭಿಷೇಕ ಮಾಡುವುದು, ಅಲಂಕರಿಸುವುದು ಇತ್ಯಾದಿಗಳೊಂದೂ ತಿಳಿಯದಿದ್ದರೂ ಜನರ ನಂಬಿಕೆ, ಶ್ರದ್ಧೆ. ಸಂಭ್ರಮ, ಉತ್ಸಾಹ, ಉಲ್ಲಾಸಗಳು ಸದಾ ನನ್ನನ್ನು ಬೆರಗುಗೊಳಿಸುತ್ತವೆ. ಯದುಗಿರಿಯಲ್ಲಿ ಒಮ್ಮೆ ಮಳೆ ಬಾರದಿದ್ದಾಗ , ಕೆರೆ, ನೀರು ಬಾವಿಗಳು ಬತ್ತಿ ಹೋದಾಗ ಮಲೆಯ ನಾರಸಿಂಗನಿಗೆ ಸಹಸ್ರ ಕುಂಭಾಭಿಷೇಕ ಮಾಡಿದ ಘಟನೆಯೊಂದರ ಬಗ್ಗೆ ಪುತಿನ ಬರೆಯುತ್ತಾರೆ. ಊರಿನವರೆಲ್ಲ ತಾಮ್ರದ ಬಿಂದಿಗೆಗಳನ್ನು ಹೊಳಪಾಗಿ ಬೆಳಗಿಕೊಂಡು ಊರಿಗೆ ಎರಡು ಮೈಲಿ ದೂರದಲ್ಲಿರುವ ಒಂಭತ್ತು ಕಲ್ಲಿನ ಬಾವಿಯ ಚಿಲುಮೆಯಿಂದ ಸೀನೀರು ತುಂಬಿಕೊಂಡು, ತಮಗೆ ಬಂದ ಸ್ತೋತ್ರಗಳನ್ನು ಹೇಳುತ್ತಾ ಬೆಟ್ಟಕ್ಕೆ ಒಂಬತ್ತೋ ಹತ್ತೋ ದಿನ ನೀರು ಹೊತ್ತ ಪ್ರಸಂಗವದು.

ಕವಿಗೆ ನೀರನ್ನು ಹೊತ್ತು ಅಭಿಷೇಕ ಮಾಡುವುದರ ಬಗ್ಗೆ ಅನೇಕ ಗೊಂದಲಗಳು ಹುಟ್ಟಿದವಂತೆ. “ಈ ನೀರನ್ನು ಹೊರುವುದು ಯಾವ ಸಮಾರಾಧನೆಗೂ ಅಲ್ಲ, ಪಾನಕಕ್ಕೂ ಅಲ್ಲ, ಕಷ್ಟಪಟ್ಟು ಮೇಲೇರಿ, ದೇವರ ಹೆಸರು ಹೇಳಿ ವೃಥಾ ಸುರಿದುಬಿಡುತ್ತೇವಲ್ಲ! ಈ ನಿಷ್ಪ್ರಯೋಜಕತೆಯ ವಿನೋದಕ್ಕೆ ಮನಸ್ಸೇಕೆ ಒಲಿದಿದೆ’ ಎಂದುಕೊಂಡರೂ, ಮುಂದೆ ಮಂಗಳವಾದಾಗ ತನಗೆ ಮನಶಾಂತಿ ದೊರೆಯಲಿ ಎಂದು ಹೆಗಲ ಮೇಲೆ ಕೊಡ ಹೊತ್ತು ನಡೆದರಂತೆ. ಕವಿಗಳ ಜೊತೆ ವೃದ್ಧರೊಬ್ಬರು ನರಸಿಂಹದೇವರ ಪವಾಡದ ಕತೆಗಳನ್ನು ಹೇಳುತ್ತ ನಡೆಯುತ್ತಿದ್ದರಂತೆ. ನನ್ನ ಪಕ್ಕ ನೀರನ್ನು ಹೆಗಲ ಮೇಲೆ ಹೊತ್ತು ನಡೆಯುತ್ತಿದ್ದ ವೃದ್ಧರು ಅದೇಕೋ ನನ್ನ ಕಣ್ಣಿಗೆ ಅವರ ಹಾಗೆಯೇ ಕಂಡರು!

Advertisement

ನಾನು ಮಾತ್ರ ಪುತಿನ ಅವರ ಗೊಂದಲದ ಮನಸ್ಥಿತಿಯಲ್ಲಿದ್ದೆ! ಯೋಗಾನರಸಿಂಹನ ಮುಂದೆ ಹತ್ತು ನಿಮಿಷ ನಿಲ್ಲಲು ಸ್ಥಳೀಯರೊಬ್ಬರು ಅವಕಾಶ ಮಾಡಿಕೊಟ್ಟರು. ಭಾನುವಾರವಾದ್ದರಿಂದ ದೇವಸ್ಥಾನಕ್ಕೆ ನೂಕು ನುಗ್ಗುಲು. ಯೋಗಾನರಸಿಂಹನನ್ನು ಕಾಣುತ್ತಲೇ ಭಕ್ತಿ ಪರವಶತೆಗೆ ಒಳಗಾದವರ ಕಣ್ಣಿನ ಕಾಂತಿ, ಶರಣಾಗತ ಭಾವ, ಕೈಮುಗಿದು ಬೇಡಿಕೊಳ್ಳುವ ರೀತಿ ಇತ್ಯಾದಿಗಳನ್ನು ನೋಡುವುದರಲ್ಲಿಯೇ ನನಗೆ ಹೆಚ್ಚು ಆಸಕ್ತಿ ಮೂಡಿತು. ಪುತಿನ ಅವರ “ರಂಗವಲ್ಲಿ’ ಕವನದ ನೆನಪು ಚಿತ್ರವತ್ತಾಗಿ ಮೂಡಿತು. ಪುಟ್ಟ ಮಗುವಿನೊಂದಿಗೆ ಕವಿ ನಾರಸಿಂಗನ ಎದುರಿಗೆ ನಿಂತಾಗ, ಮಗು ದೇವರ ಸರಿಗೆ ಪಂಚೆ, ಕೊರಳ ಪದಕ, ಹೊನ್ನು ರನ್ನದೊಡವೆಗಳನ್ನು ನೋಡದೆ,

ಮುದುಕಿಯೊಬ್ಬಳು ದೇವನೆದುರು ಬಿಡಿಸುತ್ತಿದ್ದ ನೂರು ದಳದ ಪದ್ಮ, ಬಳ್ಳಿ ಮಾಡದ ರಂಗವಲ್ಲಿಯನ್ನು ಮಾತ್ರ ದಿಟ್ಟಿಸುತ್ತಿತ್ತಂತೆ. ಒಂದೇ ಒಂದು ಡೊಂಕು ಗೆರೆಯೆಳೆಯದ ಈ ಮುದುಕಿ ಮಲೆಯ ನಾರಸಿಂಗನ ಮುಂದೆ ರಂಗವಲ್ಲಿಯನ್ನು ಬಿಡಿಸಲು, ದಿನವೂ ಮಡಿಲಿನಲ್ಲಿ ಕಟ್ಟಿಕೊಂಡು ಬೆಟ್ಟ ಹತ್ತಿ ಬರುತ್ತಿದ್ದಳಂತೆ. ಆ ಮಗುವಿಗೆ “ದೇವನಲ್ಲ- ಮುದುಕಿ ಬರೆವ ಹಸೆಯೇ ಸೋಜಿಗ’ ಎನ್ನಿಸಿದರೆ, ಕವಿಗೆ “ದೇವ ಬೊಂಬೆ, ಪೂಜೆ ಆಟ, ಭಕ್ತಿ ಸೋಜಿಗ’ ಎನಿಸಿತಂತೆ. ನಾರಸಿಂಗನ ಮುಂದೆ ನಿಂತ ನನಗೂ ಈ ಭಕ್ತಿಯನ್ನು ಕಂಡು ಸೋಜಿಗದ ಭಾವ! ರಂಗವಲ್ಲಿಯನ್ನು ನೋಡುತ್ತಾ ನಿಂತ ಮಗುವಿನ ರೀತಿಯಾಗಿಬಿಟ್ಟಿದ್ದೆ!

ದೇವನ ಮುಂದೆ ನಿಂತ ಹತ್ತು ನಿಮಿಷಗಳಲ್ಲಿ ಪುತಿನ, ಮತ್ತವರ ಕವಿತೆಗಳು ತಲೆಯಲ್ಲಿ ಹೇಗೆ ಹಾದುಹೋದವೆಂದರೆ “ತೀರ್ಥ ತಗೊಳ್ಳಿ’ ಎಂದಾಗಲೇ ಎಚ್ಚರದ ಸ್ಥಿತಿಗೆ ಬಂದಿದ್ದು. ದೇವರನ್ನಾದರೂ ಸರಿಯಾಗಿ ನೋಡಿದೆನೋ ಇಲ್ಲವೋ ಎನ್ನುವ ಅನುಮಾನ ಈಗಲೂ ಇದೆ. ಪುತಿನ ಕವಿತೆಯ ಮತ್ತೂಂದು ಮಗು ನನ್ನ ಕಣ್ಣ ಮುಂದೆ ಸುಳಿಯಿತು. ಬಿಸಿಲನ್ನು ಲೆಕ್ಕಿಸದೆ ಬೆಟ್ಟದ ಮೇಲಿರುವ ಹೂಗಳನ್ನೆಲ್ಲ ಆಯುತ್ತಿದ್ದ ಮಗು! ಆ ಮಗುವನ್ನು ಕವಿ ಅಚ್ಚರಿಯಿಂದ ಪ್ರಶ್ನಿಸಿದಾಗ “ಮಲೆಯ ನಾರಸಿಂಗನಿಗೆ ಕೊಡುತ್ತೇನೆ’ ಎಂದು ಹೇಳಿತಂತೆ!

ಹತ್ತು ನಿಮಿಷಗಳ ನಂತರ ದೇಗುಲದಿಂದ ಹೊರಬಂದ ಮಗು ತಾನು ಆರಿಸಿ ಬೊಗಸೆಗೆ ತುಂಬಿಕೊಂಡಿದ್ದ ಹೂಗಳನ್ನೆಲ್ಲ ಆಚೆಗೆ ಎಸೆಯಿತಂತೆ. ಕುತೂಹಲದಿಂದ ಕವಿ ಕಾರಣವನ್ನು ಕೇಳಿದಾಗ, “ಅಷ್ಟು ಹೊತ್ತು ಬೊಗಸೆಯಲ್ಲಿ ಹಿಡಿದು ನಿಂತರೂ, ಆ ನಾರಸಿಂಗ ನನ್ನ ಕೈಯಿಂದ ಹೂಗಳನ್ನು ಕೊಳ್ಳಲಿಲ್ಲ. ಅವನನ್ನು ಕಂಡರಾಗದು’ ಎಂದು ಹೇಳಿ, ಒಲುಮೆಯ ಬಗ್ಗೆ ಹೊಸ ವ್ಯಾಖ್ಯಾನವೊಂದನ್ನು ನೀಡಿತಂತೆ! ನಿರಪೇಕ್ಷ ಭಾವದಿಂದ ನಿಂತಿದ್ದ ನನ್ನ ಬೊಗಸೆಯಲ್ಲಿ ಹೂಗಳಿರಲಿಲ್ಲ, ಅದನ್ನು ಸ್ವೀಕರಿಸಲಿಲ್ಲವೆಂಬ ದುಗುಡವೂ ಇರಲಿಲ್ಲ.

* ಎಂ.ಆರ್‌. ಕಮಲ

Advertisement

Udayavani is now on Telegram. Click here to join our channel and stay updated with the latest news.

Next