Advertisement

ಯುವಜನರಲ್ಲಿ ಭಾವೈಕ್ಯತೆ ಮೂಡಿಸುವ ಗುರಿ

03:57 PM Feb 20, 2020 | Naveen |

ಮೇಲುಕೋಟೆ: ವಿಭಿನ್ನ ಸಂಸ್ಕೃತಿ, ಭಾಷೆ, ಆಚಾರ-ವಿಚಾರ, ಉಡುಗೆ-ತೊಡುಗೆ ಹೊಂದಿರುವ ಭಾರತದ ಯುವಜನರಲ್ಲಿ ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವ ಉದ್ದೇಶದಿಂದ ಏಕ್‌ ಭಾರತ್‌ ಶ್ರೇಷ್ಠ ಭಾರತ್‌ ಎಂಬ ಭಾವೈಕ್ಯತಾ ಕಾರ್ಯಕ್ರಮಗಳನ್ನು ದೇಶಾದ್ಯಂತ ನಡೆಸುತ್ತಿದೆ ಎಂದು ನವದೆಹಲಿಯ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಉಪಾಧ್ಯಕ್ಷ ವಿಷ್ಣುವರ್ಧನ್‌ ರೆಡ್ಡಿ ಹೇಳಿದರು.

Advertisement

ಮೇಲುಕೋಟೆಯಲ್ಲಿ ನೆಹರು ಯುವಕ ಕೇಂದ್ರ ಹಮ್ಮಿಕೊಂಡಿರುವ 5 ದಿನಗಳ ರಾಷ್ಟ್ರಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಮತ್ತು ಜಾನಪದ ಸಾಂಸ್ಕೃತಿಕ ಹಬ್ಬ ಉದ್ಘಾಟಿಸಿ ಮಾತನಾಡಿದರು.

28 ಕೇಂದ್ರಗಳಲ್ಲಿ ರಾಷ್ಟ್ರಮಟ್ಟದ ಕಾರ್ಯಕ್ರಮ: ಗ್ರಾಮೀಣ ಹಾಗೂ ಬುಡಕಟ್ಟು ಜನಾಂಗವೂ ಸೇರಿದಂತೆ ಭಾರತದ ಎಲ್ಲಾ ಪ್ರದೇಶ ಮತ್ತು ಸಂಸ್ಕೃತಿಯ ಜನಾಂಗದವರೂ ಒಂದೆಡೆ ಸೇರಿ ತಮ್ಮ ಕಲೆ ಅನಾವರಣ ಮಾಡುವ ಜೊತೆಗೆ ರಾಷ್ಟ್ರೀಯ ಭಾವೈಕ್ಯತೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂಬ ಮಹತ್ತರ ಉದ್ದೇಶದಿಂದ ಪ್ರಧಾನಿ ಮೋದಿ ಅವರ ಕನಸಿನ ಏಕ್‌ ಭಾರತ ಶ್ರೇಷ್ಠ ಭಾರತ್‌ ರೂಪುಗೊಂಡಿದೆ. ಭಾರತಾದ್ಯಂತ 268 ಸ್ಥಳಗಳಲ್ಲಿ ಜಿಲ್ಲಾಮಟ್ಟದ ಭಾವೈಕ್ಯತಾ ಶಿಬಿರದ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಭವ್ಯ ಇತಿಹಾಸವಿರುವ ಮೇಲುಕೋಟೆಯಂತಹ 28
ಕೇಂದ್ರಗಳಲ್ಲಿ ರಾಷ್ಟ್ರಮಟ್ಟದ ಕಾರ್ಯಕ್ರಮ ನಡೆಸಲಾಗುತ್ತಿದೆ. ಪ್ರತಿ ಶಿಬಿರದಲ್ಲೂ 25ಕ್ಕೂ ರಾಜ್ಯಗಳ ಯುವ ಪ್ರತಿನಿಧಿಗಳು ಕಲಾ ನೈಪುಣ್ಯತೆಯೊಂದಿಗೆ ಭಾಗವಹಿಸುತ್ತಿದ್ದಾರೆ ಎಂದು ನುಡಿದರು.

ಶ್ರೇಷ್ಠ ಭಾರತ ನಿರ್ಮಾಣಕ್ಕೆ ಮುಂದಾಗಿ: ವಿಭಿನ್ನ ಸಂಸ್ಕೃತಿ ಹೊಂದಿದ ವಿವಿಧ ರಾಜ್ಯಗಳ ಪ್ರತಿಯೊಬ್ಬರೂ ತಮ್ಮ ವಿಶೇಷತೆಯೊಂದಿಗೆ ಶ್ರೇಷ್ಠ ಭಾರತ ನಿರ್ಮಾಣಕ್ಕೆ ಮುಂದಾಗಬೇಕೆಂಬ ಕನಸು ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರದ್ದಾಗಿತ್ತು. ಅದೇ ಮಾದರಿಯಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಷ್ಟ್ರೀಯ ಭಾವೈಕ್ಯತೆಯನ್ನು ಬೆಳೆಸುತ್ತಿದೆ ಎಂದರು.

ವಿಭಿನ್ನ ಭಾಷೆ, ಕಲೆ, ಆಚಾರ-ವಿಚಾರದ ದೇಶ: ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಮಾತನಾಡಿ, 5000 ವರ್ಷ ಇತಿಹಾಸ ಹೊಂದಿದ ಭಾರತ ಸಮೃದ್ಧ ಸಂಸ್ಕೃತಿ ಹೊಂದಿರುವ, ಅತಿಥಿ ದೇವೋಭವ ಮತ್ತು ವೈಸುದೈವ ಕುಟುಂಬಕಂ ಎಂಬ ಶ್ರೇಷ್ಠ ಮಾನವೀಯ ಮೌಲ್ಯ ಹೊಂದಿದ ಜಗತ್ತಿನ ಏಕೈಕ ದೇಶವಾಗಿದೆ. ಶ್ರೇಷ್ಠ ಸಂವಿಧಾನವನ್ನು ಹೊಂದುವ ಮೂಲಕ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ಸಮರ್ಥವಾಗಿ ನಿಂತಿದೆ. ವಿಭಿನ್ನ ಭಾಷೆ, ಕಲೆ, ಆಚಾರ-ವಿಚಾರಗಳನ್ನು ಹೊಂದಿದ್ದರೂ ರಾಷ್ಟ್ರೀಯ ಭಾವೈಕ್ಯತೆಯನ್ನು ಹೊಂದುವ ಮೂಲಕ ಭಾರತಾಂಬೆಯ ಪುತ್ರರಾಗಬೇಕು. ಮೊದಲು ನಾನೊಬ್ಬ ಭಾರತೀಯ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

Advertisement

ವಿಶಿಷ್ಟ ಅನುಭವ ಪಡೆಯಿರಿ: ಭಾರತದ ಶ್ರೇಷ್ಠ  ಸಂಸ್ಕೃತಿ ಹೊಂದಿದ ಭವ್ಯತಾಣ. ಮೇಲುಕೋಟೆಯ ಶಿಬಿರದಲ್ಲಿ ಭಾಗವಹಿಸುತ್ತಿರುವ ವಿವಿಧ ರಾಜ್ಯದ ಯುವ ಪ್ರತಿನಿಧಿಗಳಾದ ನೀವು ವಿಶಿಷ್ಟ ಅನುಭವ ಪಡೆಯುತ್ತಿದ್ದೀರಿ. ಶಿಬಿರದಲ್ಲಿ ಮೇಲುಕೋಟೆಯ ಶ್ರೇಷ್ಠ ಸಂಸ್ಕೃತಿ ಪರಿಚಯಿಸುವ ಜೊತೆಗೆ ನಿಮಗೆ ಜಿಲ್ಲೆಯ ಸಂಸ್ಕೃತಿಯನ್ನೂ ಪರಿಚಯಿಸುವ ಕೆಲಸವನ್ನು
ಜಿಲ್ಲಾಡಳಿತ ಮಾಡುತ್ತದೆ ಎಂದರು. ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಯಾಲಕ್ಕೀಗೌಡ, ಎನ್‌.ವೈ.ಕೆ ರಾಜ್ಯ ನಿರ್ದೇಶಕ ಅತುಲ್‌ ಜೆ. ನಿಕಮ್‌, ಜಿಲ್ಲಾ ಸಮನ್ವಯಾಧಿಕಾರಿ ಅನಂತಪ್ಪ, ಮೈಸೂರು ಜನಸಂಪರ್ಕ ಕೇಂದ್ರದ ಉಪನಿರ್ದೇಶಕಿ ಡಾ.ಪೂರ್ಣಿಮ, ಹಿರಿಯ ಐಎಎಸ್‌ ಅಧಿಕಾರಿ ನಾಗೇಂದ್ರ, ರಾಷ್ಟ್ರಪ್ರಶಸ್ತಿ ವಿಜೇತ ಲಕ್ಷ್ಮೀ ತಾತಾಚಾರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next