Advertisement
Related Articles
Advertisement
ಶ್ರೀರಾಮಾನುಜಾಚಾರ್ಯರು ಮೇಲುಕೋಟೆಯಲ್ಲಿದ್ದಾಗ ಒಂದು ದಿನ ಅವರ ಕನಸಿನಲ್ಲಿ ಶ್ರೀಚೆಲುವನಾರಾಯಣಸ್ವಾಮಿ ವಿಗ್ರಹವು ಭೂಮಿಯಲ್ಲಿ ಅಡಗಿರುವಂತೆ ಗೋಚರಿಸಿತಂತೆ. ನಂತರ ಅವರು ಆ ಸ್ಥಳವನ್ನು ಶೋಧಿಸಿ ವಿಗ್ರಹವನ್ನು ಹೊರತೆಗೆದು ಇಲ್ಲಿಯೇ ಪ್ರತಿಷ್ಠಾಪಿಸಿ, ಅದಕ್ಕೆ ಒಂದು ಗುಡಿಯನ್ನು ಕಟ್ಟಿಸಿ ನಿತ್ಯ ಪೂಜಾಧಿಗಳು ನೆರವೇರಲು ವ್ಯವಸ್ಥೆ ಮಾಡಿದರು ಎನ್ನುತ್ತದೆ ಇಲ್ಲಿನ ಸ್ಥಳ ಪುರಾಣಗಳು.
ಈ ದೇವಾಲಯ ಸುಮಾರು 200 ಅಡಿ ಚೌಕಾಕಾರದ ಬೃಹತ್ ಕಟ್ಟಡ ಹೊಂದಿದ್ದು, ಹೊಯ್ಸಳರ ಕಾಲದಲ್ಲಿ ನಿರ್ಮಿಸಲ್ಪಟ್ಟಿದೆ. ಮೂಲ ದೇವಾಲಯವನ್ನು ವಿಜಯನಗರ, ಪಾಳೆಗಾರ, ಒಡೆಯರ ಕಾಲದಲ್ಲಿ ಬಹಳಷ್ಟು ವಿಸ್ತರಿಸಲಾಗಿದೆ. ಈ ದೇವಾಲಯದ ಸುತ್ತಲೂ ಸುಂದರವಾದ ಕೈಸಾಲೆ ಇದೆ. ಗರ್ಭಗೃಹ, ಅಂತರಾಳ, ನವರಂಗ, ಬೃಹತ್ ಮುಖಮಂಟಪಗಳನ್ನು ಹೊಂದಿದೆ. ಪೂರ್ವಾಭಿ ಮುಖವಾಗಿರುವ ಗರ್ಭಗುಡಿಯಲ್ಲಿ ಸುಮಾರು 6 ಅಡಿ ಎತ್ತರದ ಚೆಲುವನಾರಾಯಣಸ್ವಾಮಿಯ ವಿಗ್ರಹವಿದೆ. ಚಕ್ರ,ಶಂಖ, ಗದಾ, ಅಭಯಹಸ್ತಧಾರಿಯಾದ ಶ್ರೀ ಚೆಲುವ ನಾರಾಯಣಸ್ವಾಮಿಯನ್ನು ನೋಡುವುದೇ ಒಂದು ಭಾಗ್ಯ. ಇಲ್ಲಿರುವ ಉತ್ಸವಮೂರ್ತಿಗೆ ಶೆಲ್ವಪಿಳ್ಳೆ ಎಂದು ಕರೆಯಲಾಗುತ್ತದೆ. ರಾಮಾನುಜರು ದೆಹಲಿಯ ಸುಲ್ತಾನನ ಮಗಳ ಬಳಿ ಇದ್ದ ವಿಗ್ರಹವನ್ನು ತರಲು ಹೋಗಿದ್ದರಂತೆ. ಆತನ ಮನವೊಲಿಸಿ ಅದನ್ನು ಪಡೆದು ತಮ್ಮ ತೊಡೆಯ ಮೇಲೆ ಕೂಡಿಸಿಕೊಂಡು ಪ್ರೀತಿಯಿಂದ ನನ್ನ ಶೆಲ್ವಪಿಳ್ಳೆ ಎಂದು ಮುದ್ದಾಡಿದರಂತೆ. ಅಂದಿನಿಂದ ಇಲ್ಲಿರುವ ಉತ್ಸವಮೂರ್ತಿಗೆ ಶೆಲ್ವಪಿಳ್ಳೆ ಎಂದು ಕರೆಯಲಾಗುತ್ತದೆ. ಅವರು ವಿಗ್ರಹ ಪಡೆದು ಮರಳಿ ಬಂದಾಗ ಚೆಲುವನಾರಾಯಣನ ವಿಗ್ರಹವನ್ನು ಅತಿಯಾಗಿ ಹಚ್ಚಿಕೊಂಡಿದ್ದ ಸುಲ್ತಾನನ ಮಗಳು ಸಹ ವಿಗ್ರಹವನ್ನು ಹಿಂಬಾಲಿಸಿ ಮೇಲುಕೋಟೆಗೆ ಬಂದು ಚೆಲುವನಾರಾಯಣನ ಪಾದದಲ್ಲಿ ಐಕ್ಯಳಾದಳೆಂದು ಹೇಳುತ್ತದೆ ಇತಿಹಾಸ. ಈಕೆಗೆ ಇಲ್ಲಿ ಒಂದು ಗುಡಿಯನ್ನು ಸಹ ನಿರ್ಮಿಸಲಾಗಿದೆ.
ಇನ್ನು ಮೇಲುಕೋಟೆಯ ಪ್ರಮುಖ ಆಕರ್ಷಣೆಯೆಂದರೆ ವೈರಮುಡಿ ಉತ್ಸವ. ಆ ಸಂದರ್ಭದಲ್ಲಿ ಚೆಲುವನಾರಾಯಣನಿಗೆ ರತ°ಖಚಿತ ಕಿರೀಟ ತೊಡಿಸಲಾಗುತ್ತದೆ. ಈ ಉತ್ಸವವನ್ನು ವೀಕ್ಷಿಸಲು ದೇಶ ವಿದೇಶದಿಂದ ಲಕ್ಷಾಂತರ ಭಕ್ತರು ಆಗಮಿಸಿ ಚೆಲುವನಾರಾಯಣನ ದರ್ಶನ ಪಡೆದು ಪುನೀತರಾಗುತ್ತಾರೆ.
ತಲುಪುವ ಮಾರ್ಗ : ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನಿಂದ ಸುಮಾರು 30 ಕಿ.ುà ಅಂತರದಲ್ಲಿರುವ ಮೇಲುಕೋಟೆಗೆ ತಲುಪಲು ಸಾಕಷ್ಟು ಸಾರಿಗೆ ಬಸ್, ಕ್ಯಾಬ್‌ಗಳಿವೆ.
ಆಶಾ ಎಸ್.ಕುಲಕರ್ಣಿ