ಅವಳು ಮಧ್ಯಮ ವರ್ಗದ ಕುಡುಂಬದ ಭಾವುಕ ಹುಡುಗಿ. ಇವನು ರಫ್ ಆ್ಯಂಡ್ ಟಫ್ ಹುಡುಗ. ಆದರೆ ಇವನಿಗೆ ಅವಳೇಬೇಕೆಂಬ ಉತ್ಕಟ ಬಯಕೆ. ಹೇಗೋ ಕಾಡಿಸಿ, ಪೀಡಿಸಿ ಕೊನೆಗೂ ಒಲಿಸಿಕೊಂಡ ಹುಡುಗಿಯೊಬ್ಬಳು, ಬದಲಾದ ಸನ್ನಿವೇಶದಲ್ಲಿ ತಾನು ವರಿಸಿದ ಹುಡುಗನ ಮುಖ ನೋಡಲಾರದಷ್ಟು ದ್ವೇಷ ಸಾಧಿಸುತ್ತಾಳೆ.
“ಮೆಲೋಡಿ’ಯಾಗಿ ಸಾಗಬೇಕಿದ್ದ ಲವ್ ಟ್ರ್ಯಾಕ್‌ನಲ್ಲಿ ನಿಧಾನವಾಗಿ ಮೌನ ಆವರಿಸಿಕೊಳ್ಳುತ್ತದೆ. ಹಾಗಾದರೆ ನಿಜಕ್ಕೂ ಈ ಹುಡುಗ – ಹುಡುಗಿಯ ಲವ್ ಟ್ರ್ಯಾಕ್‌ನಲ್ಲಿ ಅಂಥದ್ದು ಆಗಿದ್ದಾದರೂ ಏನು? ಕೊನೆಗೂ “ನಾನೊಂದು ತೀರ.. ನೀನೊಂದು ತೀರ’ ಅಂತಿರುವ ಈ ಲವ್ ಟ್ರ್ಯಾಕ್ ಕ್ಷೇಮವಾಗಿ ದಡ ಸೇರುತ್ತದೆಯಾ? ಇದೇ ಈ ವಾರ ತೆರೆಗೆ ಬಂದಿರುವ “ಮೆಲೋಡಿ ಡ್ರಾಮಾ’ ಸಿನಿಮಾದ ಕಥೆಯ ಒಂದು ಎಳೆ.
ಇಷ್ಟೆಲ್ಲ ಹೇಳಿದ ಮೇಲೆ ಇದೊಂದು ಲವ್ ಸ್ಟೋರಿ, ಇದರಲ್ಲಿ ಪ್ರೀತಿಗಿಂತ ಕೋಪ-ತಾಪಕ್ಕೆ ಜಾಗ ಜಾಸ್ತಿ ಅನ್ನೋದನ್ನ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. “ಮೆಲೋಡಿ ಡ್ರಾಮಾ’ದ ಕಥೆಯ ಒಂದು ಎಳೆ ಚೆನ್ನಾಗಿದ್ದರೂ, ಅದನ್ನು ಪರಿಣಾಮಕಾರಿ ಯಾಗಿ ಪ್ರೇಕ್ಷಕರ ಮುಂದಿಡುವಲ್ಲಿ ನಿರ್ದೇಶಕರು ಸೋತಂತಿದೆ.
ಪ್ರೇಕ್ಷಕರಿಗೆ ತೆರೆಮೇಲೆ “ಕರ್ನಾಟಕ ದರ್ಶನ’ ಮಾಡಿಸುವ ಭರದಲ್ಲಿ ನಾಯಕ-ನಾಯಕಿಯನ್ನು ಎನ್‌ಫೀಲ್ಡ್ ಬೈಕ್ ಹತ್ತಿಸುವ ನಿರ್ದೇಶಕರು ಮೈಸೂರಿನಿಂದ ಮಡಿಕೇರಿ, ಅಲ್ಲಿಂದ ಮಂಗಳೂರು. ಅಲ್ಲಿಂದ ಉತ್ತರ ಕನ್ನಡ ಅಲ್ಲಿಂದ ಹುಬ್ಬಳ್ಳಿ-ಧಾರವಾಡ ಮೂಲಕ ವಿಜಯಪುರಕ್ಕೆ ತಲುಪಿಸಿ ಕೊನೆಗೆ ಗೋಲ್‌ಗುಂಬಜ್ ಮತ್ತೆ ಅಲ್ಲಿಂದ ಜೋಗಫಾಲ್ಸ್‌ಗೆ ಕರೆತಂದು ಓಡಾಡಿಸಿ ಕೊನೆಗೊಂದು ಕ್ಲೈಮ್ಯಾಕ್ಸ್ ಕೊಡುತ್ತಾರೆ. ಸರಳವಾದ ಮನಮುಟ್ಟುವ ಪ್ರೇಮಕಥೆಯ ಸಿನಿಮಾವೊಂದಕ್ಕೆ ಅತಿಯಾದ ಪಾತ್ರಗಳು, ಅತಿರೇಕವೆನಿಸುವ ಸಂಭಾಷಣೆಗಳೇ ಅಲ್ಲಲ್ಲಿ ಮಾರಕವಾಗಿ ಪರಿಣಮಿಸಿದಂತಿದೆ.
ಇನ್ನು ನಾಯಕ ನಟ ಸತ್ಯ ಸಾಕಷ್ಟು ದೃಶ್ಯಗಳಲ್ಲಿ ಇನ್ನಷ್ಟು ಪಳಗಬೇಕು ಎನಿಸಿದರೆ, ನಾಯಕಿ ಸುಪ್ರೀತಾ ಇನ್ನೂ ಧಾರಾವಾಹಿ ಗುಂಗಿನಿಂದ ಹೊರಬಂದಂತೆ ಕಾಣುತ್ತಿಲ್ಲ. ಉಳಿದಂತೆ ರಂಗಾಯಣ ರಘು, ಅನು ಪ್ರಭಾಕರ್, ಚೇತನ್ ಚಂದ್ರ, ಶೋಭರಾಜ್ ಪಾವೂರ್ ಹೀಗೆ ಹತ್ತಾರು ಚಿರಪರಿಚಿತ ಕಲಾವಿದರ ಬೃಹತ್ ತಾರಾಗಣವಿದ್ದರೂ ಬಹುತೇಕ ಪಾತ್ರಗಳ ಹಿನ್ನೆಲೆ ನೋಡುಗರಿಗೆ ಅಸ್ಪಷ್ಟವಾಗಿಯೇ ಕಾಣುತ್ತದೆ. ಉಳಿದಂತೆ ತಾಂತ್ರಿಕವಾಗಿ ಸಿನಿಮಾದ ಛಾಯಾಗ್ರಹಣ ಕರ್ನಾಟಕದ ಹಸಿರ ಸೊಬಗನ್ನು ಕಣ್ಣಿಗೆ ಹಿತವೆನಿಸುವಂತೆ ಮಾಡುತ್ತದೆ.
ಹಿನ್ನೆಲೆ ಸಂಗೀತ ಮತ್ತು ಒಂದೆರಡು ಹಾಡುಗಳು “ಕರ್ನಾಟಕ ದರ್ಶನ’ದ ಪ್ರಯಾಸವನ್ನು ಅಲ್ಲಲ್ಲಿ ಕಡಿಮೆ ಮಾಡುವಂತಿದೆ. ಒಟ್ಟಾರೆ “ಮೆಲೋಡಿ ಡ್ರಾಮಾ’ ಒಂದೊಳ್ಳೆ ಕಥೆಯಿರುವ ಆದರೆ ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ಒಮ್ಮೆ ನೋಡಬಹುದಾದ ಸಿನಿಮಾ ಎನ್ನಲು ಅಡ್ಡಿಯಿಲ್ಲ.
ಜಿ.ಎಸ್.ಕಾರ್ತಿಕ ಸುಧನ್