Advertisement

ರಸ್ತೆ ಕಾಮಗಾರಿ: ಮೆಲ್ಕಾರ್‌ ಭಾಗದಲ್ಲಿ ದಿನವಿಡೀ ಟ್ರಾಫಿಕ್‌ ಜಾಮ್‌

11:55 PM Feb 02, 2023 | Team Udayavani |

ಬಂಟ್ವಾಳ: ಬಿ.ಸಿ.ರೋಡು-ಅಡ್ಡಹೊಳೆ ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ಸರ್ವೀಸ್‌ ರಸ್ತೆಗಳು ಹದಗೆಟ್ಟು ವಾಹನಗಳಿಗೆ ಅಪಾಯಕಾರಿಯಾಗಿವೆ. ಈ ಹಿನ್ನೆಲೆಯಲ್ಲಿ ಮೆಲ್ಕಾರ್‌ ಭಾಗದಲ್ಲಿ ಗುತ್ತಿಗೆ ಸಂಸ್ಥೆಯು ಸರ್ವೀಸ್‌ ರಸ್ತೆಗೆ ಡಾಮರು ಹಾಕುತ್ತಿದ್ದು, ಪಾಣೆಮಂಗಳೂರು-ಮೆಲ್ಕಾರ್‌-ಕಲ್ಲಡ್ಕ ಭಾಗದಲ್ಲಿ ಗುರುವಾರ ದಿನವಿಡೀ ಟ್ರಾಫಿಕ್‌ ಜಾಮ್‌ ಕಂಡುಬಂತು.

Advertisement

ಬಹುತೇಕ ಎಲ್ಲ ಕಡೆ ರಸ್ತೆಗಳನ್ನು ಅಗೆದು ಹಾಕಿ ಗೊಂದಲದ ಸ್ಥಿತಿ ಇದ್ದು, ಡಾಮರು ಕಾಮಗಾರಿ ವೇಳೆ ರಸ್ತೆಗಳನ್ನು ಪೂರ್ತಿ ಬಂದ್‌ ಮಾಡಿರುವುದರಿಂದ ವಾಹನಗಳು ದಾರಿಗಾಣದೆ ಸಾಲು ನಿಲ್ಲುವ ಅನಿವಾರ್ಯ ಸೃಷ್ಟಿಯಾಯಿತು. ಹೆದ್ದಾರಿಯುದ್ದಕ್ಕೂ ವಾಹನಗಳ ದಟ್ಟಣೆ ಕಂಡುಬಂದಿದ್ದು, ಮೆಲ್ಕಾರ್‌ ಪ್ರದೇಶದಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನುಗ್ಗಿಸಲಾಗಿತ್ತು.

ಮೆಲ್ಕಾರ್‌ ಜಂಕ್ಷನ್‌ನಲ್ಲಿ ಮುಡಿಪು ರಸ್ತೆಯೂ ಹೆದ್ದಾರಿಯನ್ನು ಸೇರುತ್ತಿರುವುದರಿಂದ ಆ ರಸ್ತೆಯಲ್ಲೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸಂಜೆಯವರೆಗೂ ಅದೇ ಸ್ಥಿತಿ ಮುಂದುವರಿಯಿತು. ಕೆಲವು ವಾಹನಗಳು ಹಳೆ ಸೇತುವೆಯ ಮೂಲಕ ಸಾಗಿದ ಹಿನ್ನೆಲೆಯಲ್ಲಿ ಅಲ್ಲೂ ಕೂಡ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ಉದಯವಾಣಿ ಬೆಳಕು ಚೆಲ್ಲಿತ್ತು
ಹೆದ್ದಾರಿ ಕಾಮಗಾರಿಯ ಹಿನ್ನೆಲೆಯಲ್ಲಿ ಜಂಕ್ಷನ್‌ ಪ್ರದೇಶಗಳಲ್ಲಿ ಸರ್ವೀಸ್‌ ರಸ್ತೆಗಳನ್ನು ಮಾಡಲಾಗಿದ್ದು, ಅಲ್ಲಿ ಧೂಳು ನಿವಾರ ಣೆಗೆಂದು ನೀರು ಹಾಕುತ್ತಿರುವುದರಿಂದ ಕೆಸರಿನಲ್ಲಿ ನಿತ್ಯವೂ ದ್ವಿಚಕ್ರ ವಾಹನಗಳು ಬೀಳುವ ಘಟನೆಗಳು ನಡೆಯುತ್ತಿದ್ದವು. ಫೆ. 1ರ ಉದಯವಾಣಿ ಸುದಿನ ಸಂಚಿಕೆಯಲ್ಲಿ “ನಿತ್ಯವೂ ದ್ವಿಚಕ್ರ ವಾಹನ ಸ್ಕಿಡ್‌; ತಾತ್ಕಾಲಿಕ ಡಾಮರು ಹಾಕಲು ಆಗ್ರಹ’ ಎಂಬ ಶೀರ್ಷಿಕೆಯಲ್ಲಿ ಜನಪರ ಕಾಳಜಿಯ ವರದಿ ಪ್ರಕಟಿಸಲಾಗಿತ್ತು. ಪ್ರಸ್ತುತ ಮೆಲ್ಕಾರ್‌ ಭಾಗದಲ್ಲಿ ಡಾಮರು ಹಾಕಲಾಗಿದ್ದು, ಸಮಸ್ಯೆ ಹೆಚ್ಚಿರುವ ಕಲ್ಲಡ್ಕ ಪೇಟೆಯಲ್ಲೂ ಡಾಮರು ಹಾಕುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next