Advertisement

ಪಿತ್ರೋಡಿ: ಅಪರೂಪದ ಕಾಯಿಲೆಗೆ ಪ್ರತಿಭಾವಂತ ಬಲಿ

09:45 AM Aug 05, 2018 | |

ಕಟಪಾಡಿ: ಇಲ್ಲಿಯ ಪಿತ್ರೋಡಿಯ ಗೋವಿಂದ ನಗರದ ವಿದ್ಯಾರ್ಥಿಯೋರ್ವ 15 ದಿನಗಳ ಹಿಂದೆ ಮೃತಪಟ್ಟಿದ್ದು, ಕಾರಣ ನ್ಯೂರೋ ಮೆಲಿಯೊಯಿಡೋಸಿಸ್‌ ಎಂಬ ಅಪರೂಪದ ಕಾಯಿಲೆ ಎಂಬ ಅಂಶ ಬೆಳಕಿಗೆ ಬಂದಿದೆ. ವಿಪರೀತ ಮಳೆ, ನೆರೆ ಹಾವಳಿಯಿಂದ ಉದ್ಯಾವರ ಬಾಧಿತವಾಗಿದ್ದ ಪರಿಣಾಮ ಜು. 7ರಿಂದ ದೀಕ್ಷಿತ್‌ (18)ಗೆ ಜ್ವರ ಆರಂಭವಾಗಿತ್ತು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರೂ ನ್ಯೂರೋ ಮೆಲಿಯೊಯಿಡೋಸಿಸ್‌ ಬ್ಯಾಕ್ಟೀರಿಯಾ ಮೆದುಳಿಗೆ ಸಾಕಷ್ಟು ಹಾನಿ ಮಾಡಿತ್ತು. ದೀಕ್ಷಿತ್‌ ಚಿಕಿತ್ಸೆಗೆ ಸ್ಪಂದಿಸದೆ ಜು. 21ರ ತಡರಾತ್ರಿ ಕೆಎಂಸಿ ಆಸ್ಪತ್ರೆಯಲ್ಲಿ ಅಸುನೀಗಿದ್ದನು.

Advertisement

ಪ್ರತಿಭಾವಂತ
ಬಡ ಕುಟುಂಬದ ಜಯ ಎನ್‌. ಕುಂದರ್‌ ಮತ್ತು ಪ್ರತಿಮಾ ದಂಪತಿಯ ಪುತ್ರ ದೀಕ್ಷಿತ್‌ ಪ್ರತಿಭಾವಂತ. ಪಿಯುಸಿಯಲ್ಲಿ ಶೇ. 95 ಅಂಕ ಪಡೆದಿದ್ದ. ಮಣಿಪಾಲದ ಎಂಐಟಿಯಲ್ಲಿ ಈತನಿಗೆ ಇಂಜಿನಿಯರಿಂಗ್‌ ಸೀಟು ಲಭಿಸಿತ್ತು. ಮಗನನ್ನು ಎಂಜಿನಿಯರ್‌ ಆಗಿ ಕಾಣಲು ಬಯಸಿದ್ದ ಮನೆ ಮಂದಿಯ ದುಃಖ ಹೇಳತೀರದು.

ಮೆಲಿಯೊಯಿಡೋಸಿಸ್‌!
ಇದು ಆದ್ರ ಮತ್ತು ಜೌಗು ಮಣ್ಣಿನಲ್ಲಿ ಕಂಡುಬರುವ ಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕುರೋಗ. ನ್ಯುಮೋನಿ ಯಾದಂಥದ್ದೇ ರೋಗ ಲಕ್ಷಣಗಳಿರುತ್ತವೆ. ಕಲುಷಿತ ಮಣ್ಣು ಮತ್ತು ನೀರಿನ ಸಂಪರ್ಕ, ವಿಶೇಷವಾಗಿ ಭತ್ತದ ಗದ್ದೆಗಳಿಂದ ಕಡಿತ ಅಥವಾ ಗಾಯದ ಮೂಲಕ ದೇಹ ಪ್ರವೇಶಿಸುತ್ತದೆ. ಆದರೆ ಒಬ್ಬರಿಂದ ಒಬ್ಬರಿಗೆ ಈ ರೋಗ ಹರಡುವುದಿಲ್ಲ. 

ವಿವಿಧ ರೂಪಗಳು
ಶ್ವಾಸಕೋಶದ ತೀವ್ರ ಸೋಂಕು, ಸೆಪ್ಟಿಸೆಮಿಯಾ, ಹುಣ್ಣು  ಸಾಮಾನ್ಯವಾಗಿ ಪ್ರಾಸ್ಟೇಟ್‌ ಗ್ರಂಥಿ ಮತ್ತು ಗುಲ್ಮದಲ್ಲಿ
ಕಾಣಿಸಿಕೊಳ್ಳುತ್ತದೆ. ಆರಂಭಿಕ ಹಂತದಲ್ಲೇ ಆಸ್ಪತ್ರೆಗೆ ದಾಖಲಿಸಿ, ಪ್ರಯೋಗಾಲಯದ ದೃಢೀಕರಣ ಮತ್ತು ದೀರ್ಘ‌ಕಾಲದ ಚಿಕಿತ್ಸೆ ಮೂಲಕ ಗುಣಪಡಿಸಬಹುದು.

ಜನಜಾಗೃತಿ
ಈ ಘಟನೆಯಿಂದ ಎಚ್ಚೆತ್ತ ಉದ್ಯಾವರ ಪಂಚಾಯತ್‌ ಸಭೆ ನಡೆಸಿ ಜನಜಾಗೃತಿ ಮೂಡಿ ಸಿದೆ. ನೆರೆಯ ಕಾರಣದಿಂದ ರೋಗ ಕಾಣಿಸಿ ಕೊಂಡಿದ್ದು, ಗದ್ದೆ ಮತ್ತು ಕೆಸರಿರುವಲ್ಲಿ ಬರಿಗಾಲಲ್ಲಿ ಓಡಾಡದಂತೆ ಎಚ್ಚರಿಸಲಾಗಿದೆ.

Advertisement

ತಜ್ಞ ವೈದ್ಯರ ತಂಡದಿಂದ ಸಂಶೋಧನೆ
ಆರೋಗ್ಯ ಇಲಾಖಾಧಿಕಾರಿಗಳೊಂದಿಗೆ ದಿಲ್ಲಿಯ ಎನ್‌ಸಿಡಿಸಿಯ ವೈದ್ಯ ಡಾ| ಅಖೀಲೇಶ್‌ ಮೂಲಕ ಕೆ.ಎಂ.ಸಿ. ವೈದ್ಯರ ತಂಡ ಮೃತ ವಿದ್ಯಾರ್ಥಿಯ ಮನೆ ಪರಿಸರ, ಆಸುಪಾಸಿನಿಂದ ಮಣ್ಣು ಮತ್ತು ನೀರಿನ ಮಾದರಿ ಸಂಗ್ರಹಿಸಿದ್ದು, ಬ್ಯಾಕ್ಟೀರಿಯಾ ಮೂಲವನ್ನು ಪತ್ತೆಹಚ್ಚುತ್ತಿದ್ದಾರೆ.

ಈ ರೋಗವು ವ್ಯಕ್ತಿಯ ಗಾಯದ ಮೂಲಕ ಹರಡುತ್ತದೆ. ಬಾಧಿತ ವ್ಯಕ್ತಿಯು ನಿಗದಿತ ಅವಧಿಯೊಳಗೆ ಸೂಕ್ತ ಚಿಕಿತ್ಸೆ ಪಡೆಯಬೇಕು. ಇದು ಸಾಂಕ್ರಾಮಿಕ  ರೋಗವಲ್ಲ. ಈ ಬ್ಯಾಕ್ಟೀರಿಯಾ ಪತ್ತೆ ನಡೆಯುತ್ತಿದೆ.
 ಡಾ| ವಾಸುದೇವ ಉಪಾಧ್ಯಾಯ, 
ಜಿಲ್ಲಾ ಸರ್ವೇಕ್ಷಣಾಧಿಕಾರಿ

ಪಿತ್ರೋಡಿಯ ಪರಿಸರದಲ್ಲಿ 22 ವರ್ಷಗಳಿಂದ ವೈದ್ಯನಾಗಿದ್ದು, ಇದುವರೆಗೆ ರೋಗಿಗಳಲ್ಲಿ ಇಂತಹ ಕಾಯಿಲೆ ಕಂಡು ಬಂದಿರಲಿಲ್ಲ. ಇದೊಂದು ಅಪರೂಪದ ಪ್ರಕರಣ.
 ಡಾ| ಶಿವಶಂಕರ್‌, ಖಾಸಗಿ ವೈದ್ಯರು

ನಾಲ್ಕು ವರ್ಷಗಳ ಹಿಂದೆ ಉದ್ಯಾವರದ ಅಂಕುದ್ರು ಭಾಗದಲ್ಲಿ ಈ ಮಾದರಿಯ ಕಾಯಿಲೆ ಬಗ್ಗೆ ಮಣ್ಣು ಪರೀಕ್ಷೆಗೆ ಮುಂದಾಗಿದ್ದು ನೆನಪಿದೆ. 13 ವರ್ಷಗಳಿಂದ ಈ ಭಾಗದಲ್ಲಿ ನನ್ನಲ್ಲಿಗೆ ಬಂದ ರೋಗಿಗಳಲ್ಲಿ ಇಂಥ ಲಕ್ಷಣ ಇರಲಿಲ್ಲ. ಹಸಿ ಮಣ್ಣಿನಲ್ಲಿ ಕೆಲಸ ಮಾಡುವವರು ಎಚ್ಚರಿಕೆ ವಹಿಸಬೇಕು. ಬರಿಗಾಲಲ್ಲಿ ನಡೆಯಬಾರದು. ಪ್ರಾಥಮಿಕ ಹಂತದಲ್ಲೇ ಜ್ವರವನ್ನು ಕಡೆಗಣಿಸದೇ ಚಿಕಿತ್ಸೆ ಪಡೆಯಬೇಕು.
 ಡಾ| ಗಣೇಶ್‌ ಶೆಟ್ಟಿ, ಪಿತ್ರೋಡಿ

Advertisement

Udayavani is now on Telegram. Click here to join our channel and stay updated with the latest news.

Next