ಸೂರ್ಯನ ಕಿರಣಗಳ ಬಿಸಿ ತಾಪಮಾನದಿಂದ ಮನೆಯಿಂದ ಹೊರಬರಲು ಹಿಂದೆಮುಂದೆ ನೋಡುತ್ತಿದ್ದ ಆ ಸಮಯದಲ್ಲಿ , ಆಕಾಶವನ್ನು ನೋಡುತ್ತ ಮುಂಗಾರಿನ ಆಗಮನೆಕ್ಕೆ ಕಾಯುತ್ತಿದ್ದೆವು. ಎಲ್ಲಿ ತಂಪಾದ ಗಾಳಿ, ಮೋಡಕವಿದ ವಾತಾವರಣ ಕಂಡಾಗ ಮಳೆಬರುವ ಸಾಧ್ಯತೆ ಇದೆ ಎಂದು ನಮ್ಮಲ್ಲಿ ಉತ್ಸಾಹವನ್ನು ಮೂಡಿಸುವ ಸಂದರ್ಭದಲ್ಲಿ ಕೆಲವೊಮ್ಮೆ ಆ ನಮ್ಮ ಉತ್ಸಾಹಕ್ಕೆ ಆಸೆಮುಟ್ಟಿಸಿ ವಾತಾವರಣ ನಮ್ಮೊಂದಿಗೆ ಆಟವಾಡಿದ್ದೂ ಉಂಟು. ಹಾಗೇ ಸುದ್ದಿಯಿಲ್ಲದೆ ಮಳೆಬಂದರೆ ಸಾಕು ಕೃಷಿಕರಿಗಿಂತ ಮಕ್ಕಳಿಗೆ ಖುಷಿಯೋ ಖುಷಿ. ಮಳೆಯಲ್ಲಿ ನೆನೆದುಕೊಂಡು ಆಟವಾಡುತ್ತ ಮಾರನೆಯ ದಿನ ಶೀತ, ಕೆಮ್ಮು ಎಂದು ಅಮ್ಮನ ಬಾಯಿಂದ ಬೈಗುಳ ಕೇಳುತ್ತ ಮದ್ದು ಸೇವಿಸಿದ್ದು ಉಂಟು. ಹಳ್ಳಿಪ್ರದೇಶಗಳಲ್ಲಿ ಸಿಗುವಂತಹ ನೆಮ್ಮದಿ, ಸಂತೋಷ ಬೇರೆ ಎಲ್ಲಿಯೂ ಸಿಗದು.
ಪ್ರಶಾಂತವಾದ ವಾತಾವರಣ, ಎಲ್ಲಿ ನೋಡಿದರೂ ಹಸಿರಿನಿಂದ ಕೂಡಿದ ಪ್ರಕೃತಿ ಹಾಗೆ ಸುತ್ತಲೂ ಸದ್ದು ಮಾಡುತ್ತಿರುವಂಥ ಪಕ್ಷಿಗಳು ಮತ್ತು ಹರಿಯುವ ನೀರಿನ ಸದ್ದು ಆಲಿಸಲು ಬಹಳ ಇಂಪಾಗಿರುತ್ತದೆ. ಹಳ್ಳಿಯ ವಾತಾವರಣ, ಪ್ರಕೃತಿ ಸೌಂದರ್ಯವನ್ನು ವೀಕ್ಷಿಸಲು ಎರಡು ಕಣ್ಣುಗಳು ಸಾಲದು. ಎತ್ತರವಾದ ಹಿಮದಿಂದ ಕೂಡಿದಂತಹ ಗುಡ್ಡ-ಪರ್ವತಗಳು, ತಂಪಾದ ಗಾಳಿ ಕೊಡುತ್ತ ತಲೆದೂಗುತ್ತಿರುವಂಥ ಮರ-ಗಿಡಗಳನ್ನು ನೋಡುತ್ತಿದ್ದಂತೆಯೇ ನಮ್ಮ ಮನದಲ್ಲಿ ನೆಮ್ಮದಿಯ ಭಾವ ಮೂಡುತ್ತದೆ.
ಮಳೆಗಾಲದಲ್ಲಿ ಸಿಗುವಂತಹ ಮಾವಿನಹಣ್ಣುಗಳ ರುಚಿಯೋ ರುಚಿ. ಅದನ್ನು ಒಮ್ಮೆ ನೆನಪಿಸಿಕೊಂಡರೆ ಬಾಯಲ್ಲಿ ನೀರು ಬರುತ್ತದೆ. ಜೋರು ಗಾಳಿಬೀಸಿದರೆ ಸಾಕು, ಮಕ್ಕಳು ಮಾವಿನಮರದಡಿಗೆ ಓಡಿ, ಮಾವುಗಳನ್ನು ಅಮ್ಮನ ಕೈಯಲ್ಲಿ ಕೊಟ್ಟು ಅದಕ್ಕೆ ಮೆಣಸು, ಉಪ್ಪು ಹಾಕಿ ಗಂಜಿಊಟದೊಂದಿಗೆ ಬೆರೆಸಿ ತಿಂದರೆ ಅಷ್ಟೇ ಸಾಕು. ಬೇಸಿಗೆ ಕಾಲದಲ್ಲಿ ಅಮ್ಮಂದಿರು ಹಪ್ಪಳ, ಸೆೆಂಡಿಗೆ ಇತ್ಯಾದಿಗಳನ್ನು ಮನೆಗಳಲ್ಲಿ ತಯಾರಿಸಿ ಮಳೆಗಾಲದಲ್ಲಿ ಕರಿದು ತಿನ್ನಲೆಂದು ಒಣಗಿಸಿಟ್ಟಿರುತ್ತಾರೆ. ಒಂದು ಕಡೆಯಿಂದ ಮಳೆ ಇನ್ನೊಂದು ಕಡೆಯಿಂದ ಅಮ್ಮ ಬಿಸಿಬಿಸಿ ಕರಿದು ಕೊಡುವ ಹಲಸಿನ ಹಪ್ಪಳ, ಸೆಂಡಿಗೆಯ ರುಚಿಯೇ ಬೇರೆ.
ಬಿಸಿ ನೆಲಕ್ಕೆ ಮಳೆಹನಿ ಬಿದ್ದಾಗ ಬರುವ ಪರಿಮಳ ಎಷ್ಟು ಸೋಗಸಾಗಿರುತ್ತದೋ ಹಾಗೆ ಬರಡು ಭೂಮಿಗೆ ನೀರು ಬಿದ್ದು ಒಳ್ಳೆ ಬೆಳೆಬಂದಾಗ ನೋಡಲು ಅಷ್ಟೇ ಸೊಗಸಾಗಿರುತ್ತದೆ. ಹಳ್ಳಿಯ ಜನರು, ಮುಗ್ಧª ಜನರು ಅನ್ನೋ ಮಾತಿನಂತೆ ಅವರ ನಡವಳಿಕೆ, ಮಾತನಾಡುವ ಶೈಲಿ, ಅವರ ಆಚಾರ-ವಿಚಾರ, ಸಂಸ್ಕೃತಿ, ಅತಿಥಿ ಸತ್ಕಾರ, ಇನ್ನಿತರ ಎಲ್ಲಾ ವಿಷಯಗಳಲ್ಲಿ ಹಳ್ಳಿಜನರು ನಡೆದುಕೊಳ್ಳುವ ಹಾಗೆ ಬೇರೆ ಯಾರು ಮೀರಿಸಲು ಸಾಧ್ಯವಿಲ್ಲ. ಹಳ್ಳಿಪ್ರದೇಶದ ಬಗ್ಗೆ ವರ್ಣಿಸಲು ಸಮಯವೇ ಸಾಲದು ಯಾರು ಇನ್ನೂ ಇಂತಹ ಅನುಭವಗಳನ್ನು ಪಡೆಯಲಿಲ್ಲವೊ ಅವರು ಮಳೆಗಾಲದ ರಜಾದಿನಗಳಲ್ಲಿ ಹೊರದೇಶ, ಪೇಟೆ, ಸುತ್ತುವುದಕ್ಕಿಂತ ಒಂದುಭಾರಿ ಹಳ್ಳಿಪ್ರದೇಶದಕಡೆ ಕಣ್ಣು ಹಾಯಿಸಿ ಅಲ್ಲಿನ ಪರಿಸರ, ಪ್ರಕೃತಿ ಸೌಂದರ್ಯವನ್ನು ಒಮ್ಮೆ ವೀಕ್ಷಿಸಿ ಗಿಡ ಬೆಳೆಸಿ, ಪರಿಸರ ಉಳಿಸಿ ಅನ್ನೋ ಮಾತಿನಿಂದ ನನ್ನ ಸಣ್ಣ ಬರಹವನ್ನು ಮುಕ್ತಾಯ ಗೊಳಿಸುತ್ತಿದ್ದೇನೆ.
-ದೀಕ್ಷಿತ್ ಧರ್ಮಸ್ಥಳ
ದ್ವಿತೀಯ ಬಿ. ಎ.
ಎಸ್. ಡಿ. ಎಮ್. ಕಾಲೇಜು, ಉಜಿರೆ