Advertisement

ಮೆಕ್ಕೆ -ಬಸ್ರಿಬೇರು ರಸ್ತೆ ಸಂಚಾರ ಅಯೋಮಯ

07:28 PM Aug 31, 2021 | Team Udayavani |

ಕೊಲ್ಲೂರು: ಜಡ್ಕಲ್‌ ಗ್ರಾ.ಪಂ. ವ್ಯಾಪ್ತಿಯ ಬಸ್ರಿಬೇರು ಹಾಗೂ ತಲಕಾಣ ಗ್ರಾಮಗಳ ನಡುವಿನ ಸುಮಾರು 3 ಕಿ.ಮೀ. ದೂರ ವ್ಯಾಪ್ತಿಯ ಕೆಸರುಮಯ ರಸ್ತೆಯಲ್ಲಿ  ವಾಹನ ಸಂಚಾರ ದುಸ್ತರವಾಗಿದ್ದು, ಗ್ರಾಮಸ್ಥರು ಕಷ್ಟಪಟ್ಟು ಸಾಗಬೇಕಾದ ಪರಿಸ್ಥಿತಿ  ಇದೆ.  ಮೆಕ್ಕೆಯಿಂದ ಸಾಗುವ ಈ ಹಾದಿ ಸುಮಾರು  50 ವರ್ಷಗಳಿಂದ ಹಾಗೆಯೇ ಇದ್ದು  ಈವರೆಗೂ  ಡಾಮರು ಕಂಡಿಲ್ಲ. ಬೇಸಗೆಯಲ್ಲಿ ಧೂಳುಮಯ  ರಸ್ತೆಯಾದರೆ ಮಳೆಗಾಲದಲ್ಲಿ ಕೆಸರುಗದ್ದೆಯಾಗಿ  ಸಂಚಾರಕ್ಕೆ ಅಯೋಗ್ಯವಾದ ಮಾರ್ಗವಾಗಿ ಮಾರ್ಪಾಡುಗೊಳ್ಳುತ್ತದೆ.

Advertisement

ಗ್ರಾಮಸ್ಥರ ಬವಣೆ :

ಬಸ್ರಿಬೇರಿನಲ್ಲಿ 80 ಮನೆಗಳಿದ್ದು, ಸುಮಾರು 500  ಮಂದಿ ವಾಸವಾಗಿದ್ದಾರೆ. ಮರಾಠಿ ಸಮುದಾಯಕ್ಕೆ ಸೇರಿದ ಈ ಭಾಗದ ಮಂದಿಗೆ ಮುದೂರು ಪೇಟೆಗೆ ಬರಲು ಹರಸಾಹಸಪಟ್ಟು ಸಾಗಬೇಕಾದ ಪರಿಸ್ಥಿತಿ  ಎದುರಾಗಿದೆ. ತಲಕಾಣದಲ್ಲೂ ಕೂಡ ಪರಿಸ್ಥಿತಿ  ಹಾಗೆಯೇ ಇದೆ. ಅಲ್ಲಿನ ನಿವಾಸಿಗಳು ಕೆಸರುಮಯ ರಸ್ತೆಯೊಂದಿಗೆ ಜಲ್ಲಿ-ಕಲ್ಲು ಹಾಕಿದ ಅಪಾಯಕಾರಿ  ರಸ್ತೆಯಲ್ಲಿ ಸಾಗಬೇಕಾಗಿದೆ. ತುರ್ತು ಅಗತ್ಯತೆಗೆ ರಾತ್ರಿ ಸಂಚಾರವಂತೂ ಹೇಳತೀರದು. ದ್ವಿಚಕ್ರ ವಾಹನಗಳು ಸಾಗಲು ಹಿಂಜರಿಯುವ ಪರಿಸ್ಥಿತಿ ಇಲ್ಲಿದೆ.

ಶಿಥಿಲಗೊಂಡ ಹಳೆ ಸೇತುವೆ :

ಕೊಲ್ಲೂರು ಹಾಗೂ ಹಳ್ಳಿಹೊಳೆ ನಡುವಿನ ಸಂಪರ್ಕ ರಸ್ತೆಯಾಗಿರುವ ಇಲ್ಲಿನ 60 ವರ್ಷ ಸಂದಿರುವ ಹಳೆ ಸೇತುವೆ ಶಿಥಿಲಗೊಂಡಿದ್ದು, ಘನವಾಹನ ಸಂಚಾರ ಸಮಯದಲ್ಲಿ ಅಗಲ ಕಿರಿದಾದ ಈ ರಸ್ತೆಯು ಅಪಾಯ ಆಹ್ವಾನಿಸುವಂತಿದೆ. ರಸ್ತೆಯ ಅಕ್ಕ-ಪಕ್ಕದಲ್ಲಿ ಬೆಳೆದಿರುವ ಗಿಡ ಪೊದೆಗಳು ‌ ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿದೆ.

Advertisement

ಖಾಯಂ ಶಿಕ್ಷಕರಿಲ್ಲ :

1 ರಿಂದ 5ರ ತನಕ ಸರಕಾರಿ ಶಾಲೆಯಿದ್ದು, ವಿದ್ಯಾರ್ಥಿಗಳಿದ್ದರೂ  ಇಲ್ಲಿ ಖಾಯಂ ಶಿಕ್ಷಕರ ಕೊರತೆ ಇಲ್ಲಿದೆ.  ಆದರೆ ಉಸ್ತುವಾರಿ ಶಿಕ್ಷಕಿಯನ್ನು ಮಾತ್ರ ಇಲ್ಲಿ ನೇಮಿಸಲಾಗಿದೆ.

ಇತರ ಸಮಸ್ಯೆಗಳೇನು? :

  • ಸರಕಾರಿ ಶಾಲೆ ಇದ್ದರೂ ಖಾಯಂ ಶಿಕ್ಷಕರ ಕೊರತೆ
  • ಹೊಸ ಸೇತುವೆ ಅಗತ್ಯ
  • ನೆಟ್‌ವರ್ಕ್‌ ಸಮಸ್ಯೆ
  • ಪ್ರಾಥಮಿಕ ಆರೋಗ್ಯ ಕೇಂದ್ರ ಅಗತ್ಯ

ದುರಸ್ತಿಗೆ ಅನುದಾನ:

ಸ್ಥಳಕ್ಕೆ ಭೇಟಿ ಇತ್ತ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ತುರ್ತು ಪರಿಶೀಲನೆ ನಡೆಸಿ ಮೆಕ್ಕೆ- ತಲಕಾಣ ರಸ್ತೆ ದುರಸ್ತಿಗೆ ಶಾಸಕರ ನಿ ಧಿಯಿಂದ 3 ಲ.ರೂ. ಅನುದಾನ  ಒದಗಿಸಿದ್ದಾರೆ.  ಮಳೆಗಾಲ ಮುಗಿದೊಡನೆ ಕಾಮಗಾರಿ ಆರಂಭಗೊಳ್ಳುವುದು ಸೂಕ್ತ.ಚಂದ್ರ ಪೂಜಾರಿ ಸಳ್ಕೋಡು, ಗ್ರಾಮಸ್ಥರು

ಮಳೆಗಾಲದ ಅನಂತರ ಕಾಮಗಾರಿ ಆರಂಭ:

ಬಸ್ರಿಬೇರು-ಕೋರೆಮುಖ ನಡುವಿನ  ರಸ್ತೆ ನಿರ್ಮಾಣ  ಕಾಮಗಾರಿಗೆ 1.50 ಕೋಟಿ ರೂ. ವೆಚ್ಚದ ಅನುದಾನ ಬಿಡುಗಡೆಯಾಗಲಿದೆ. ಸಂಬಂಧಪಟ್ಟ ಇಲಾಖೆಯ ಎಂಜಿನಿಯರ್‌ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಶಾಸಕ ಬಿ.ಎಂ.ಸುಕುಮಾರ ಶೆಟ್ಟಿಯವರ ಪ್ರಯತ್ನದ ಫಲವಾಗಿ ಬಹಳಷ್ಟು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಇಲ್ಲಿನ ರಸ್ತೆಯ ಡಾಮರು  ಕಾಮಗಾರಿ ಮಳೆಗಾಲ ಮುಗಿದೊಡನೆ ಆರಂಭಗೊಳ್ಳುವುದು.  ಮೆಕ್ಕೆ ಮಾರ್ಗವಾಗಿ ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ನೀತಿ ಅಡ್ಡಿಯಾಗುತ್ತಿದೆ.ವನಜಾಕ್ಷಿ ಶೆಟ್ಟಿ, ಅಧ್ಯಕ್ಷರು, ಗ್ರಾ.ಪಂ.ಜಡ್ಕಲ್.

-ಡಾ| ಸುಧಾಕರ ನಂಬಿಯಾರ್

Advertisement

Udayavani is now on Telegram. Click here to join our channel and stay updated with the latest news.

Next