Advertisement

ಮೇಖಲಾ ಚಾದರ್‌

04:18 PM Jun 22, 2019 | Sriram |

ನಮ್ಮ ಭರತಭೂಮಿ ಎಷ್ಟು ವೈವಿಧ್ಯಪೂರ್ಣವೋ, ಅಷ್ಟೇ ವೈವಿಧ್ಯಮಯ ಹಾಗೂ ವೈಶಿಷ್ಟ್ಯ ಪೂರ್ಣ- ಭಾರತೀಯ ಮಹಿಳೆಯರ ಉಡುಗೆ-ತೊಡುಗೆ ಆಭೂಷಣ ಧಾರಣೆಯ ಸಂಪ್ರದಾಯ.

Advertisement

ಆಧುನಿಕ ವಸ್ತ್ರವಿನ್ಯಾಸ ಹಾಗೂ ಆಭರಣಾದಿಗಳ ಭರಾಟೆಯ ರಭಸದಲ್ಲಿ ಕೊಚ್ಚಿ ಹೋಗದೇ, ಇನ್ನೂ ಭಾರತಾಂಬೆಯ ಮಡಿಲಲ್ಲಿ, ಮಹಿಳೆಯರು ಸಾಂಪ್ರದಾಯಿಕ ಉಡುಗೆತೊಡುಗೆ ಆಭೂಷಣ ತೊಟ್ಟು ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಇದೇ ಈ ಭರತಭೂಮಿಯ ಮಣ್ಣಿನ ಮಹಿಮೆ!

ಇದೇ ಭಾರತಾಂಬೆಯ ಮಕ್ಕಳ ಗರಿಮೆ!ಹೌದು! ಆಧುನಿಕ ಯುಗದಲ್ಲೂ ನಮ್ಮ ದೇಶದ ಪ್ರಾಚೀನ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯಗಳ ದ್ಯೋತಕವಾಗಿರುವ ಪ್ರಾದೇಶಿಕ ವೈವಿಧ್ಯತೆ, ವೈಶಿಷ್ಟéತೆಗಳಿಂದ ಮಹತ್ವಪೂರ್ಣವಾಗಿರುವ ಮಹಿಳೆಯರ ಉಡುಗೆತೊಡುಗೆ ಆಭೂಷಣಗಳನ್ನು ಅರಿಯೋಣ. ಅರಿತಂತೆ, ಅಳವಡಿಸಿಕೊಂಡಂತೆ ನಮ್ಮ ಮಹಿಳೆಯರ ಸಾಂಪ್ರದಾಯಿಕತೆಯ ಸೊಗಡು ಇನ್ನಷ್ಟು ಸೌರಭಬೀರಿ, ಈ ದೇಶದ ಮಣ್ಣಿನಲ್ಲಿ ಮತ್ತಷ್ಟು ಗಾಢವಾಗಿ ಬೇರೂರಲಿ. ಜೊತೆಗೆ, ಎಲ್ಲೆಡೆಯೂ ಪಸರಿಸಲಿ ಎಂಬುದೊಂದು ಹಾರೈಕೆ.

ಅಸ್ಸಾಮ್‌ ಮಹಿಳೆಯ ವಸ್ತ್ರ ಸೊಗಸು
ಅಸ್ಸಾಮೀಯ ಮಹಿಳೆಯರ ವಸ್ತ್ರವಿನ್ಯಾಸ, ಸಂಸ್ಕೃತಿಗಳನ್ನು ಗಮನಿಸಿದರೆ, ಅದರಲ್ಲಿ ಭಾರತ, ಬರ್ಮಾ, ಮಂಗೋಲಿಯನ್‌ ಹಾಗೂ ಆರ್ಯರ ಪ್ರಭಾವ ಮಿಳಿತವಾಗಿರುವುದು ಕಾಣಸಿಗುತ್ತದೆ.

ಬಣ್ಣ ಬಣ್ಣದ ಅದರಲ್ಲೂ ಚಿನ್ನದ ಹೊಂಬಣ್ಣದ ರೇಶಿಮೆಯ ಉಡುಗೆ “ಮುಗಾ’ ಅಸ್ಸಾಂನ ಮಹಿಳೆಯರ ಸಾಂಪ್ರದಾಯಿಕ ತೊಡುಗೆ. ಇದಕ್ಕೆ “ಮೇಖಲಾ ಚಾದರ್‌’ ಎಂಬ ಹೆಸರೂ ಇದೆ. ಇದರಲ್ಲೂ ವಿಶಿಷ್ಟ ಅಸ್ಸಾಮೀ ಛಾಪು ಬೀರುವ ವಸ್ತ್ರವಿನ್ಯಾಸವೆಂದರೆ “ಪಾಟ್‌’ ಹಾಗೂ “ಏರಿ’.

Advertisement

ಏರಿ ಬಗೆಯ ವಸ್ತ್ರವನ್ನು ಚಳಿಗಾಲದಲ್ಲಿ ಶಾಲ್‌ ರೀತಿಯ ಹೊದಿಕೆಯಾಗಿ ಬಳಸಲು “ಏರಿಚಾದರ್‌’ ಎಂದು ಕರೆಯುತ್ತಾರೆ. “ಪಾಟ್‌’ ಬಳಕೆಯಾಗುವುದೇ “ಮೇಖಲಾ ಚಾದರ್‌’ ತಯಾರಿಗೆ.

ಅಸ್ಸಾಂ ಬುಡಕಟ್ಟು ಜನಾಂಗದವರ ಪಾರಂಪರಿಕ ವೈಶಿಷ್ಟéತೆ ಅನೂಹ್ಯ ಹಾಗೂ ಅಸದೃಶ. ಹಾಂ! ಭಾರತೀಯ ಮಹಿಳೆಯರ ಪಾರಂಪರಿಕ ಉಡುಗೆತೊಡುಗೆಗಳು ಅದರಲ್ಲೂ ಮುಖ್ಯವಾಗಿ ಭಾರತೀಯ ವಿವಿಧ ಬುಡಕಟ್ಟು ಜನಾಂಗಗಳ ವಸ್ತ್ರಾಭರಣಗಳು- ಜಗತ್ತಲ್ಲೇ ವಿಖ್ಯಾತ. ಎಲ್ಲೆಲ್ಲೂ ಏಕತಾನತೆ ಯಿಲ್ಲ. ಆದರೆ, ವಿಶಿಷ್ಟತೆ ಇದೆ. ಪ್ರಾತಿನಿಧಿಕ ವಸ್ತ್ರವೀಚಿ ಎನ್ನಬಹುದು!

ಅಸ್ಸಾಮೀ ಮಹಿಳೆಯರ, ದಿಮಸ್ತಾ ಬುಡಕಟ್ಟು ಜನಾಂಗದವರ ಬಣ್ಣ ಬಣ್ಣದ ದಿರಿಸಿಗೆ “ರಿಗು’ ಎನ್ನುತ್ತಾರೆ. ಮೇಖಲಾ ಚಾದರ್‌ನಂತೆ ಸೊಂಟದಿಂದ ಪಾದದವರೆಗೆ ಉದ್ದವಾಗಿ ಧರಿಸುವ ಈ “ರಿಗು’ ವಸ್ತ್ರಕ್ಕೆ , ಹ್ಯಾಂಡ್‌ಲೂಮ್‌ ಬಗೆಯ, ಅಥವಾ ರೇಶಿಮೆಯ ಅಥವಾ ಹತ್ತಿಯ ಬಟ್ಟೆಯ ಮೇಲು ಹೊದಿಕೆ “ಬಾತೋರ್‌ಮಯಿ’ ಸಾಥ್‌ ನೀಡುತ್ತದೆ.

ಬೋಡೋ ಮಹಿಳೆ
ಅಸ್ಸಾಮಿನ ಬೋಡೋ ಬುಡಕಟ್ಟು ಜನಾಂಗದ ಮಹಿಳೆಯರ ಉಡುಗೆಯ ಹೆಸರು “ದೊಖೋನಾ’. ಎದೆಯ ಭಾಗದಿಂದ ಪಾದಗಳವರೆಗೆ ಉದ್ದವಾಗಿ ಆವರಿಸಿರುವ ಈ ವಸ್ತ್ರವು ಗಾಢ ಬಣ್ಣಗಳಿಂದ ಕೂಡಿದ್ದು , ವಿಶಿಷ್ಟ ಕುಸುರಿ, ಕಲಾತ್ಮಕತೆಯನ್ನು ಹೊಂದಿರುತ್ತದೆ. ಇದರ ಮೇಲೆ ಹೊದ್ದುಕೊಳ್ಳುವ ಚಾದರ್‌ನಂತಹ ವಸ್ತ್ರವೂ ಕಲಾತ್ಮಕವಾಗಿರುತ್ತದೆ. ಮದುಮಗಳಿಗೆ “ಅಗೊರ್‌’ ಎಂದು ಕರೆಯುವ ವಿಶೇಷ ಚಾದರ್‌ ಅಥವಾ ಮೇಲು ಹೊದಿಕೆ ತೊಡಿಸಲಾಗುತ್ತದೆ.

ರಭಾ ಜನಾಂಗದ ಮಹಿಳೆ
“ಕಾಮ್‌ಕೊನ್‌ಟೊಂಗ್‌’ ಎಂದು ಕರೆಯಲಾಗುವ ಪಟ್ಟಿಗಳನ್ನು ಹೊಂದಿರುವ ಸ್ಕರ್ಟ್‌ನಂತಹ ಅಸ್ಸಾಮೀ ಬಟ್ಟೆ ಧರಿಸುತ್ತಾರೆ. ಇದರ ಮೇಲೆ ಸಮುದ್ರ ಶಂಖಗಳ ಅಥವಾ ವಿವಿಧ ಮಣಿಗಳ ಮುತ್ತು ಹರಳುಗಳಿಂದ ಅಲಂಕೃತವಾದ ಬೆಲ್ಟ್ (ಸೊಂಟಪಟ್ಟಿ) ಧರಿಸುವುದು ವೈಶಿಷ್ಟé.

ಮಿಶಿಂಗ್‌ ಜನಾಂಗದ ಮಹಿಳೆ
ಮಿಶಿಂಗ್‌ ಜನಾಂಗದ ಅಸ್ಸಾಮಿ ಮಹಿಳೆಯರು ಚಾದರ್‌ನಂತಹ ದಿರಿಸವನ್ನೇ ಬಳಸುತ್ತಾರೆ. ಆದರೆ ಈ ಜನಾಂಗದ ಮಹಿಳೆಯರ ಬಟ್ಟೆಯು ಕಪ್ಪು ಬಣ್ಣದಿಂದ ಕೂಡಿರುವ ಮೇಖಲಾಚಾದರ್‌ ಆಗಿದ್ದು, ಇದಕ್ಕೆ “ಯಕನ್‌ ಏಜ್‌ಗಸರ್‌’ ಎಂದು ಕರೆಯಲಾಗುತ್ತದೆ.

ದಿಯೋರಿ ಜನಾಂಗದ ಅಸ್ಸಾಮೀ ಮಹಿಳೆಯರು ಸ್ಕರ್ಟ್‌ನಂತಹ ಉದ್ದದ ದಿರಿಸು ಧರಿಸುತ್ತಾರೆ. ಇದಕ್ಕೆ “ಉಜದೂಬಾ ಲಗೂನ್‌’ ಎಂದು ಕರೆಯುತ್ತಾರೆ. ಇದಕ್ಕೆ ಮೇಲ್‌ವಸ್ತ್ರ ಅಥವಾ ದಾವಣಿಯಂತೆ “ಜೋಖಾಚಿಬಾ’ ಎಂಬ ದಿರಿಸು ಧರಿಸಿ, ಹೆಗಲ ಮೇಲೆ “ರಿಹಾ’ ಎಂಬ ಪಾರಂಪರಿಕ ವಿನ್ಯಾಸದ ಶಾಲು ಹಾಕಿಕೊಳ್ಳುತ್ತಾರೆ. ಹೀಗೆ ಅಸ್ಸಾಂನ ವಿವಿಧ ಜನಾಂಗದ ಮಹಿಳೆಯರು ಧರಿಸುವ ದಿರಿಸಿನಲ್ಲಿ ಪ್ರಾದೇಶಿಕತೆ, ಜಾನಪದೀಯ ಮಹತ್ವದ ಜೊತೆಗೆ ಆಯಾ ಪ್ರದೇಶದ ವಾತಾವರಣ, ಹವಾಮಾನಕ್ಕೆ ಹೊಂದುವಂತಹ ಜೊತೆಗೆ ಸಾತ್ವಿಕ ಸೌಂದರ್ಯ ವರ್ಧಕದ ಪ್ರಭೆ ಕಾಣಸಿಗುತ್ತದೆ.

-ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next