Advertisement

ಮೇಕೆದಾಟು ಯೋಜನೆ ವಿಳಂಬಕ್ಕೆ ಕೇಂದ್ರವೇ ಕಾರಣ!

03:33 PM Aug 06, 2021 | Team Udayavani |

ರಾಮನಗರ: ಮೇಕೆದಾಟು ಯೋಜನೆ ವಿಳಂಬ ಮತ್ತು ತಮಿಳುನಾಡು ಖ್ಯಾತೆ ತೆಗೆಯಲು ಕೇಂದ್ರ ಸರ್ಕಾರದ ಕುತಂತ್ರವೇ ಕಾರಣ ಎಂಬುದು ಮತ್ತೊಮ್ಮೆ ಸಾಭೀತಾಗಿದೆ!

Advertisement

ಗುರುವಾರ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಮೇಕೆ ದಾಟು ಯೋಜನೆಯಿಂದ ತಮಿಳುನಾಡಿಗೆ ಯಾವ ರೀತಿಯಲ್ಲೂ ಅನ್ಯಾಯವಾಗುವುದಿಲ್ಲ. ಸುಪ್ರೀಂ ಕೋರ್ಟ್‌ ಮತ್ತು ಕಾವೇರಿ ನ್ಯಾಯ ಮಂಡಳಿ ನೀಡಿರುವ ತೀರ್ಪುಗಳ ಉಲ್ಲಂಘನೆಯೂ ಆಗುವುದಿಲ್ಲ ಎಂದು ಲೋಕಸಭೆಯ
ಗಮನ ಸೆಳೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಕಾವತ್‌, ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಡಿಪಿಆರ್‌ ಸಿದ್ಧಪಡಿಸಲು ನೀಡಿದ ಅನುಮತಿ ಷರತ್ತು ಬದ್ಧ ಅನುಮತಿಯಾಗಿದೆ. ಕಾವೇರಿ ಕೊಳ್ಳದ ಎಲ್ಲಾ ರಾಜ್ಯಗಳ ಅನುಮತಿ ಬೇಕು ಎಂಬ ಷರತ್ತು ವಿಧಿ ಸಲಾಗಿದೆ ಎಂದು ಸ್ಪಷ್ಟವಾಗಿ ತಿಳಿಸಿದೆ ಎಂದು ಸತ್ಯ ಹೊರಗೆಡವಿದ್ದಾರೆ. ಮೇಕೆದಾಟು ಯೋಜನೆಗೆ ರಾಜ್ಯ ಸರ್ಕಾರ ತಮಿಳು
ನಾಡು, ಕೇರಳ ರಾಜ್ಯಗಳ ಅನುಮತಿ ಪಡೆಯಬೇಕು ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ.

ಕುತಂತ್ರ ಬಯಲು!: ಮೇಕೆದಾಟು ಯೋಜನೆಗೆ ವಿಸ್ತೃತ ಯೋಜನಾ ವರದಿ (ಡಿ.ಪಿ.ಆರ್‌) ಸಿದ್ಧಪಡಿಸಲು ಕೇಂದ್ರ ಸರ್ಕಾರ ನೀಡಿದ ಅನುಮತಿಯಲ್ಲೇ ರಾಜ್ಯ ಸರ್ಕಾರಕ್ಕೆ ಅನ್ಯಾಯವಾಗುವಂತೆ, ಷರತ್ತುಗಳನ್ನು ವಿಧಿಸಿದೆ. ಮೇಕೆದಾಟು ಯೋಜನೆ ಸಾಕಾರಗೊಳ್ಳಲು ಕಾವೇರಿ ಕೊಳ್ಳದ ಎಲ್ಲಾ ರಾಜ್ಯಗಳ ಅನುಮತಿ ಮುಖ್ಯ ಎಂದು ಕೇಂದ್ರ ಸರ್ಕಾರ ಷರತ್ತು ರಾಜ್ಯ ಸರ್ಕಾರಕ್ಕೆ ಮಗ್ಗಲ ಮುಳ್ಳಾಗಿ ಪರಿಣಮಿಸಿದೆ.ಕಾವೇರಿ ನ್ಯಾಯ ಮಂಡಳಿ, ಸುಪ್ರೀಂ ಕೋರ್ಟ್‌ ತೀರ್ಪುಗಳನ್ವಯ ತ.ನಾಡಿಗೆ ಯಾವ ರೀತಿಯಲ್ಲೂ ಅನ್ಯಾಯವಾಗಲ್ಲ. ಈ ವಿಚಾರ ಕೇಂದ್ರಕ್ಕೆ ಗೊತ್ತಿದೆ. ತ.ನಾಡಿನಲ್ಲಿ ತನ್ನ ಖಾತೆ ತೆರೆಯಲು ಹವಣಿಸುತ್ತಿರುವ ಬಿಜೆಪಿಗೆ ಕಾವೇರಿ ಕೊಳ್ಳವನ್ನು ಬಳಸಿಕೊಳ್ಳಲು ಪ್ರಯತ್ನಿಸಿದೆ ಎಂಬುದು ಸಾಭಿತಾಗಿದೆ. ಮೇಕೆದಾಟು ಜಲಾಶಯ ನಿರ್ಮಾಣದ ನಂತರ ಕರ್ನಾಟಕಕ್ಕಿಂತ ತನಗೇ ಹೆಚ್ಚು ಉಪಯೋಗ ಎಂದು ತ.ನಾಡಿಗೆ ಗೊತ್ತಿದ್ದರು, ರಾಜ್ಯಕ್ಕೆ ತೊಂದರೆ ಕೊಡುತ್ತಿದೆ. ಇದಕ್ಕೆಲ್ಲ ಕೇಂದ್ರದಲ್ಲಿರುವ ಎನ್‌.ಡಿ.ಎ ಸರ್ಕಾರವೇ ಕಾರಣ ಎಂದು ಜಿಲ್ಲೆಯ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮಿಳುನಾಡಿಗೆ ಅನ್ಯಾಯವಾಗಲ್ಲ
ರಾಮನಗರ: ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ಅದ್ಯಾಕೆ ಖ್ಯಾತೆ ತೆಗೆಯುತ್ತಿದೆ? ಕಾವೇರಿ ನ್ಯಾಯ ಮಂಡಳಿ ನೀಡಿರುವ ತೀರ್ಪಿನ ಅನ್ವಯ ಪ್ರಮಾಣದ ನೀರನ್ನು ಅರಾಜ್ಯಕ್ಕೆ ಬಿಟ್ಟ ನಂತರವೂ ಉಳಿಯುವ ಹೆಚ್ಚುವರಿ ನೀರನ್ನು ಮೇಕೆದಾಟಿನಲ್ಲಿ ಬ್ಯಾಲೆನ್ಸಿಂಗ್‌ ರಿಸರಾಯರ್‌ ನಿರ್ಮಾಣಕ್ಕೆ ಕರ್ನಾಟಕ ಮುಂದಾಗಿದೆ. ಮೇಕೆದಾಟು ಜಲಾಶಯ ನಿರ್ಮಾಣದಿಂದ ತಮಿಳುನಾಡಿಗೆ ಆಗುವ
ಅನ್ಯಾಯವಾದರೂ ಏನು ಎಂಬ ಯಕ್ಷ ಪ್ರಶ್ನೆ ಪುನಃ, ಪುನಃ ಜಿಲ್ಲೆಯ ಜನತೆಯನ್ನುಕಾಡುತ್ತಿದೆ.

ಆ ರಾಜ್ಯದ ರಾಜಕಾರಣಿಗಳಿಗೇನಾಗಿದೆ?: ಗುರುವಾರ ತಮಿಳುನಾಡಿನಲ್ಲಿ ಮಾಜಿ ಐಪಿಎಸ್‌ ಅಧಿಕಾರಿ, ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ಯೋಜನೆಯ ವಿರುದ್ಧ ಒಂದು ದಿನ ಉಪವಾಸ ಸತ್ಯಾಗ್ರಹ ಹಮ್ಮಿ ಕೊಂಡಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯ ಸಾಮಾನ್ಯ ಜನರಲ್ಲಿ
ತಮಿಳುನಾಡಿನ ಖ್ಯಾತೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಕಾವೇರಿ ನದಿಯ ಹೆಚ್ಚುವರಿ ನೀರು ಸಮುದ್ರ ಪಾಲಾಗುತ್ತಿತ್ತು. ಅದನ್ನು ಹಿಡಿದಿಟ್ಟು ಕೊಂಡು ರಾಮನಗರ ಜಿಲ್ಲೆ,ಬೆಂಗಳೂರು ನಗರ,ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವುದು ಮತ್ತು ವಿದ್ಯುತ್‌ ಉತ್ಪಾದ
ನೆಗೆ ಬಳಸಿಕೊಳ್ಳಲು ರಾಜ್ಯ ಸರ್ಕಾರ ಮೇಕೆದಾಟು ಯೋಜನೆ ರೂಪಿಸಿದೆ. ಯೋಜನೆಯ ಉದ್ದೇಶ ಸ್ಪಷ್ಟವಾಗಿದ್ದರೂ ಆ ರಾಜ್ಯದ ರಾಜಕಾರಣಿಗಳೇಕೆ ಹಠಕ್ಕೆ ಬಿದ್ದಿದ್ದಾರೆ ಎಂದು ಜಿಲ್ಲೆಯ ಜನತೆಯ ಪ್ರಶ್ನೆ. ತಮಿಳುನಾಡಿನ ರಾಜಕಾರಣಿಗಳ ಈ ಕುಚೇಷ್ಠೆಯನ್ನು ಅರ್ಥ ಮಾಡಿಕೊಳ್ಳಲಾಗದ ತಮಿಳುನಾಡಿನ ಜನತೆ ಕೂಡ ಅವರ ತಾಳಕ್ಕೆ ಕುಣಿಯುತ್ತಿದ್ದಾರೆ ಎಂದು ಜನರು ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಗೊಂದಲ ನಿವಾರಣೆಗೆ ಮುಂದಾಗಿ: ಮೇಕೆದಾಟು ಯೋಜನೆ ವಿರೋಧಿಸಿ ಮಾಜಿ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ತಮಿಳುನಾಡಿನಲ್ಲಿ ಪ್ರತಿಭಟನೆ ನಡೆಸಿರುವುದಕ್ಕೆ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕರ್ನಾಟಕದಲ್ಲಿ ಅಧಿಕಾರಿಯಾಗಿದ್ದ ಅಣ್ಣಾಮಲೈ ರಾಜ್ಯದ ಜನರ ನಾಡಿಯನ್ನು
ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಯಾರಿಗೂ ಅನ್ಯಾಯ ಮಾಡುವ ಆಲೋಚನೆಯೇ ಕನ್ನಡಿಗರಲ್ಲಿ ಬರುವುದಿಲ್ಲ. ಹೀಗಿದ್ದರೂ ರಾಜಕೀಯವಾಗಿ ಬೇಳೆ ಬೇಯಿಸಿಕೊಳ್ಳಲು ಮಾಜಿ ಪೊಲೀಸ್‌ ಅಧಿಕಾರಿ ಹೀಗೆಪ್ರತಿಭಟನೆ ಮಾಡುವ ಬದಲಿಗೆ ಎರಡೂ ‌ರಾಜ್ಯಗಳ ಜನರಲ್ಲಿನ ಗೊಂದಲ ನಿವಾರಣೆಗೆ ಮುಂದಾಗಬಹುದಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಮೇಕೆದಾಟು ಯೋಜನೆ ಜಾರಿಗೆ ಒತ್ತಾಯ
ಕನಕಪುರ: ಮೇಕೆದಾಟು ಯೋಜನೆಗೆ ತೊಡಕಾಗಿರುವ ತಮಿಳುನಾಡಿನ ನಡೆ ಖಂಡಿಸಿ, ಯೋಜನೆ ಜಾರಿಗೆ ತರುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಜನತಾ ಪಾರ್ಟಿಯಿಂದ ಸಂಗಮದ ಮೇಕೆದಾಟುವಿನ ಸ್ಥಳದಲ್ಲಿ ಪ್ರತಿಭಟನೆ ನಡೆಯಿತು. ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ ಸಂಗಮದ ಮೇಕೆದಾಟು ಉದ್ದೇಶಿತ ಸ್ಥಳದಲ್ಲಿ ಜನತಾ ಪಕ್ಷದ ಮುಖಂಡರು,ಕಾರ್ಯಕರ್ತರು ಪ್ರತಿಭಟನೆ ನಡೆಸಿ ಶೀಘ್ರವಾಗಿ ಯೋಜನೆ
ಜಾರಿಗೆ ಆಗ್ರಹಿಸಿದರು.

ಶೀಘ್ರದಲ್ಲೇ ಕಾಮಗಾರಿ ಕೈಗೊಳ್ಳಿ: ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್‌ ಮಾತನಾಡಿ, ಕಾವೇರಿ ನದಿ ನೀರು ವಿಚಾರದಲ್ಲಿ ತಮಿಳುನಾಡು, ಕೇರಳ ಮತ್ತು ಕರ್ನಾಟಕ ರಾಜ್ಯಗಳ ಮಧ್ಯೆ ಈ ಹಿಂದೆ ದೊಡ್ಡ ವಿವಾದ ಸೃಷ್ಟಿಯಾಗಿ ಕೊನೆಗೆ ಕೇಂದ್ರ ನ್ಯಾಯಾಂಗ
ಮಂಡಳಿಯಲ್ಲಿ ಅಂತ್ಯಕಂಡಿತ್ತು.ಪ್ರಸ್ತುತ ಮೇಕೆದಾಟು ಯೋಜನೆ ವಿಳಂಬವನ್ನು ನೋಡಿದರೆ ಅಂತಹ ವಿವಾದ ಸೃಷ್ಟಿಯಾಗಬಹುದು.ಇದಕ್ಕೆ ಸರ್ಕಾರ ಅವಕಾಶ ನೀಡದೆ ಶೀಘ್ರದಲ್ಲಿ ಕಾಮಗಾರಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಎರಡು ರಾಜ್ಯಕ್ಕೂಅನುಕೂಲ:ಮೇಕೆದಾಟು ಯೋಜನೆಯಿಂದ ತಮಿಳುನಾಡು ಮತ್ತು ಕರ್ನಾಟಕ ಎರಡು ರಾಜ್ಯಗಳಿಗೂ ಅನುಕೂಲವಿದೆ. ತಮಿಳುನಾಡಿಗೆ ವಾರ್ಷಿಕ ಮೀಸಲು ನೀರನ್ನು ಹರಿಸುವುದಕ್ಕೆಈ ಯೋಜನೆ ಸಹಕಾರಿಯಾಗಿದೆ. ಆದರೆ, ತಮಿಳುನಾಡು ಸರ್ಕಾರ ಮತ್ತು ಅಲ್ಲಿನ ರಾಜಕಾರಣಿಗಳು ಯೋಜನೆ ಉದ್ದೇಶ, ಅದರ ಸಾಧಕ ಬಾಧಕಗಳನ್ನು ಗ್ರಹಿಸದೆ ವಿರೋಧಿಸಲೇಬೇಕು ಎಂಬ ಉದ್ದೇಶದಿಂದ ಯೋಜನೆಗೆ
ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯೋಜನೆ ಜಾರಿಯಾಗದಿದ್ದರೆ ನೀರಿಗೆ ಸಮಸ್ಯೆ: ಜನತಾ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಂ. ಪಾಲಾಕ್ಷ ಮಾತನಾಡಿ, ಮೇಕೆದಾಟು ಯೋಜನೆ ಕಾರ್ಯಗತವಾಗದಿದ್ದರೆ ರಾಜ್ಯಕ್ಕೆ ನಷ್ಟವಾಗಲಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ನೀರಿಗೆ ಸಮಸ್ಯೆ ಎದುರಾಗಲಿದೆ. ಮೇಕೆ ದಾಟು ಅಣೆಕಟ್ಟು ನಿರ್ಮಾಣವಾದರೆ ಸುಮಾರು 65 ಟಿಎಂಸಿ ನೀರನ್ನು ಸಂಗ್ರಹಿಸುವ ಉದ್ದೇಶವಿದೆ. ಇದರಿಂದ ರಾಮನಗರ, ಬೆಂ.ಗ್ರಾ. ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಸಿಗಲಿದೆ. ತಮಿಳುನಾಡನ್ನು ಗಣನೆಗೆ ತೆಗೆದುಕೊಳ್ಳದೆ ಮೇಕೆದಾಟು ಯೋಜನೆಕಾರ್ಯ ಆರಂಭಿಸಬೇಕು ಎಂದು ಆಗ್ರಹಿಸಿದರು.

ಸಾತನೂರು ಠಾಣೆ ಪಿಎಸ್‌ಐ ರವಿಕುಮಾರ್‌ ನೇತೃತ್ವದಲ್ಲಿ ಭದ್ರತೆ ಮಾಡಲಾಗಿತ್ತು.ಜನತಾ ಪಕ್ಷದ ಹಿಂದುಳಿದ ವರ್ಗಗಳ ವಿಭಾಗದ ರಾಷ್ಟ್ರೀಯ ಅಧ್ಯಕ್ಷ ಶಂಕರ್‌ಶೆಟ್ಟಿ, ರಾಜ್ಯ ನಾಯಕರಾದ ಅಬ್ದುಲ್‌ ಬಶೀರ್‌, ಉಪಾಧ್ಯಕ್ಷ ನಂದೀಶ್‌, ಬೆಂಗಳೂರು ನಗರ ಅಧ್ಯಕ್ಷ ನಾಗೇಶ್‌, ಸಂದೀಪ್‌, ಮುಖಂಡರಾದ ಈಶ್ವರ್‌, ಗೋಪಾಲಕೃಷ್ಣ, ಮಂಜುನಾಥ್‌,ಈಶ್ವರಯ್ಯ ಉಪಸ್ಥಿತರಿದ್ದರು.

ಮೇಕೆದಾಟು ಯೋಜನೆ ವಿಳಂಬಕ್ಕೆ ರಾಜ್ಯದ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯೇ ಕಾರಣ. ಮೇಕೆದಾಟು ಯೋಜನೆ ಸಾಕಾರಕ್ಕೆ ನೆರೆ ರಾಜ್ಯಗಳು ತಕರಾರಿಗೆ ಅವಕಾಶವಾಗದಂತೆ ಎಚ್ಚರಿಕೆ ಹೆಜ್ಜೆಗಳನ್ನಿಡುವಲ್ಲಿ ಬಿಜೆಪಿ ಸೇರಿದಂತೆ ಎಲ್ಲಾ ಸರ್ಕಾರಗಳು ವಿಫ‌ಲವಾಗಿವೆ.
– ಸಂಪತ್‌, ಪ್ರಮುಖರು, ಮೇಕೆದಾಟು
ಹೋರಾಟ ಸಮಿತಿ

-ಬಿ.ವಿ.ಸೂರ್ಯ ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next