Advertisement

ಒಕ್ಕೊರಲ ಖಂಡನೆ; ಮೇಕೆದಾಟು ಕುರಿತ ತ.ನಾಡು ನಿರ್ಣಯಕ್ಕೆ ಆಕ್ಷೇಪ

03:09 AM Mar 23, 2022 | Team Udayavani |

ಬೆಂಗಳೂರು: ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ವಿಧಾನಸಭೆಯಲ್ಲಿ ಕೈಗೊಂಡ ನಿರ್ಣಯಕ್ಕೆ ರಾಜ್ಯ ವಿಧಾನಸಭೆಯಲ್ಲಿ ಒಕ್ಕೊರಲ ಖಂಡನೆ ವ್ಯಕ್ತವಾಗಿದೆ. ಅಲ್ಲಿನ ಸರಕಾರದ ನಡೆ ಸಂವಿಧಾನ ವಿರೋಧಿ ಹಾಗೂ ಒಕ್ಕೂಟ ವ್ಯವಸ್ಥೆಗೆ ಅಪಾಯಕಾರಿ ಎಂದು ಸದನ ಅಭಿಪ್ರಾಯಪಟ್ಟಿದೆ.

Advertisement

ತಮಿಳುನಾಡು ಸರಕಾರದ ನಿರ್ಣಯವನ್ನು ಖಂಡಿಸಿ ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲೂ ನಿರ್ಣಯ ಕೈಗೊಳ್ಳಬೇಕು. ಅದನ್ನು ಕೇಂದ್ರ ಸರಕಾರಕ್ಕೂ ಕಳುಹಿಸಿ ಮೇಕೆದಾಟು ಯೋಜನೆಗೆ ಅಗತ್ಯವಿರುವ ಅರಣ್ಯ ಇಲಾಖೆಯ ಅನುಮತಿ ಪಡೆಯಲು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ವ್ಯಕ್ತವಾಯಿತು.

ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಸ್ಪಂದಿಸಿ, ನಮ್ಮ ಪಾಲಿನ ಹಕ್ಕು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಮೇಕೆದಾಟು ಯೋಜನೆ ಮಾಡಿಯೇ ಸಿದ್ಧ. ಆ ನಿಟ್ಟಿನಲ್ಲಿ ಬೇಕಾದ ಅನುಮತಿ ಪಡೆಯಲು ಪ್ರಯತ್ನ ನಡೆದಿದೆ. ಕಾರಜೋಳ ಅವರು ಸದ್ಯದಲ್ಲೇ ದಿಲ್ಲಿಗೆ ಹೋಗಿ ಚರ್ಚೆ ಮಾಡಲಿದ್ದಾರೆ. ಅನಂತರ ಅಗತ್ಯವಾದರೆ ಸರ್ವಪಕ್ಷ ನಿಯೋಗ ಕೊಂಡೊಯ್ಯಲಾಗುವುದು. ಬುಧವಾರವೇ ಸದನದಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳುವ ಬಗ್ಗೆ ತೀರ್ಮಾನಕ್ಕೆ ಬರಲಾಗುವುದು ಎಂದು ಘೋಷಿಸಿದರು.

ಶೂನ್ಯ ವೇಳೆಯಲ್ಲಿ ಕಾಂಗ್ರೆಸ್‌ನ ಎಚ್‌.ಕೆ. ಪಾಟೀಲ್‌ ವಿಷಯ ಪ್ರಸ್ತಾವಿಸಿ, ನಮ್ಮ ರಾಜ್ಯದ ಅಭಿ ವೃದ್ಧಿ ಯೋಜನೆಗಳಿಗೆ ತಮಿಳುನಾಡು ಅಡ್ಡಿ ಪಡಿ ಸುವುದು ಸರಿಯಲ್ಲ. ಕಾವೇರಿ ನೀರು ನಿರ್ವಹಣ ಪ್ರಾಧಿಕಾರ ಇರುವಾಗ ತಮಿಳುನಾಡು ಸರಕಾರ ಅಡ್ಡಿಪಡಿಸುತ್ತಿರುವುದು ಸರಿಯಲ್ಲ ಎಂದರು.

ಇದನ್ನೂ ಓದಿ:ಸಬ್ ನ್ಯಾಶನಲ್ ಸರ್ಟಿಫಿಕೇಶನ್ ಸಮೀಕ್ಷೆ : ವಿಜಯಪುರದ ಸಾಧನೆಗೆ ಒಲಿದ ಕಂಚಿನ ಪದಕ

Advertisement

ಕಾನೂನುಬಾಹಿರ: ಸಿದ್ದರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತ ನಾಡಿ, ಇಂಥ ನಿರ್ಣಯ ಕೈಗೊಳ್ಳಲು ತಮಿಳುನಾಡು ವಿಧಾನಸಭೆಗೆ ಯಾವುದೇ ಕಾನೂನಾತ್ಮಕ ಹಕ್ಕಿಲ್ಲ. ನಾವು ಮೇಕೆದಾಟು ಯೋಜನೆ ಮಾಡುತ್ತಿರುವುದು ಸಂವಿಧಾನ ಬದ್ಧವಾಗಿ ನಮ್ಮ ಪಾಲಿನ ಹೆಚ್ಚುವರಿ ನೀರನ್ನು ಬಳಕೆ ಮಾಡಿಕೊಳ್ಳಲು. ಈ ಯೋಜನೆ ನಮ್ಮ ರಾಜ್ಯದ ಗಡಿಯೊಳಗೆ ಬರುತ್ತದೆ ಎಂದರು.

ತಮಿಳುನಾಡಿನ ನಿರ್ಣಯ ಖಂಡಿಸಿ ನಾವೂ ಖಂಡನಾ ನಿರ್ಣಯ ಮಾಡಿ ಕೇಂದ್ರದ ಮೇಲೆ ಒತ್ತಡ ಹಾಕೋಣ. ಸರ್ವಪಕ್ಷಗಳ ನಿಯೋಗ ತೆಗೆದುಕೊಂಡು ಹೋಗಿ ಪ್ರಧಾನಿ ಮತ್ತು ಕೇಂದ್ರ ಜಲ ಸಂಪನ್ಮೂಲ ಸಚಿವರ ಮುಂದೆ ವಸ್ತುಸ್ಥಿತಿಯನ್ನು ಹೇಳ್ಳೋಣ ಎಂದರು.

ಸಹಿಸಲು ಆಗಲ್ಲ: ಬಿಎಸ್‌ವೈ
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ತಮಿಳುನಾಡು ಪದೇ ಪದೆ ನಮ್ಮ ಯೋಜನೆಗಳ ಬಗ್ಗೆ ತಕರಾರು ತೆಗೆಯುವುದು ಸಾಮಾನ್ಯವಾಗಿದೆ. ತಲೆಕೆಡಿಸಿಕೊಳ್ಳದೆ ನಾವು ಮಾಡ ಬೇಕಾದ ಕೆಲಸ ಮಾಡೋಣ ಎಂದರು.

ಕಿಮ್ಮತ್ತು ಇಲ್ಲ: ಕುಮಾರಸ್ವಾಮಿ
ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿ, ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಕೈಗೊಂಡಿರುವ ನಿರ್ಣಯಕ್ಕೆ ಯಾವುದೇ ಕಿಮ್ಮತ್ತು ಇಲ್ಲ. ರಾಜ್ಯ ಸರಕಾರ ಮೊದಲು ಪ್ರಧಾನಮಂತ್ರಿಗಳು ಹಾಗೂ ಹಾಗೂ ಕೇಂದ್ರ ಜಲಶಕ್ತಿ ಸಚಿವರ ಮನವೊಲಿಕೆ ಮಾಡಬೇಕು ಎಂದರು. ಗಡಿ ಪ್ರದೇಶದಲ್ಲಿ ಅಣೆಕಟ್ಟು ಕಟ್ಟಲು ನಮ್ಮ ತಕರಾರಿಲ್ಲ ಎಂದು ತಮಿಳುನಾಡು ವಕೀಲರೇ ಸುಪ್ರೀಂ ಕೋರ್ಟ್‌ ಮುಂದೆ ಹೇಳಿಕೆ ನೀಡಿದ್ದರು ಎನ್ನುವ ಅಂಶವನ್ನು ಕುಮಾರಸ್ವಾಮಿ ಸದನದ ಗಮನಕ್ಕೆ ತಂದರು.

ಒಪ್ಪತಕ್ಕದ್ದಲ್ಲ
ಸಚಿವ ಜೆ.ಸಿ. ಮಾಧುಸ್ವಾಮಿ, ತಮಿಳು ನಾಡು ಆಕ್ಷೇಪ ಒಪ್ಪುವಂಥದ್ದಲ್ಲ. ಸರಕಾರದ ನಿಲುವು ಇದೇ ಇದೆ. ನಿರ್ಣಯ ಕೈಗೊಳ್ಳಲು ಸಮಸ್ಯೆಯಿಲ್ಲ. ಆದರೂ ಒಮ್ಮೆ ಅಡ್ವೊಕೇಟ್‌ ಜನರಲ್‌ ಅವರ ಅಭಿಪ್ರಾಯ, ಕಾನೂನು ತಜ್ಞರ ಸಲಹೆ ಪಡೆದು ಕ್ರಮ ಕೈಗೊಳ್ಳೋಣ ಎಂದರು.

ತಮಿಳುನಾಡು ನಿರ್ಣಯಕ್ಕೆ ಯಾವುದೇ ಬೆಲೆ ಇಲ್ಲ
ತಮಿಳುನಾಡಿಗೆ ಕಾವೇರಿ ಒಂದು ರಾಜಕೀಯ ದಾಳ. ಸ್ವಾತಂತ್ರ್ಯ ದೊರೆತಾಗಿನಿಂದ ಕಾವೇರಿ ಹೆಸರಿನಲ್ಲಿಯೇ ಅವರು ರಾಜಕಾರಣ ಮಾಡು ತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಹುಟ್ಟಿರುವ ಕಾವೇರಿ, ಇಲ್ಲಿ ಬಿದ್ದ ಮಳೆಯ ಆಧಾರದ ಮೇಲೆ ನಾವು ಕುಡಿಯುವ ನೀರಿಗಾಗಿ ಮೇಕೆದಾಟು ಯೋಜನೆ ರೂಪಿಸಲಾಗಿದೆ. ರಾಷ್ಟ್ರೀಯ ಹಸುರು ನ್ಯಾಯ ಮಂಡಳಿಯೂ ನಮ್ಮ ಪರ ಆದೇಶ ನೀಡಿದೆ. ತಮಿಳು ನಾಡು ನಿರ್ಣಯಕ್ಕೆ ಯಾವುದೇ ಬೆಲೆ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮೇಕೆದಾಟು ಯೋಜನೆಗೆ ಯಾರ ಅಪ್ಪಣೆಯೂ ಬೇಕಿಲ್ಲ. ನಾವು ನಮ್ಮ ನೆಲ, ಜಲ, ಭಾಷೆ, ಗಡಿಗೆ ಸಂಬಂಧಿಸಿದಂತೆ ರಾಜಕಾರಣ ಮಾಡಿಲ್ಲ, ಮುಂದೆಯೂ ಮಾಡಲ್ಲ. ಸರ್ವಪಕ್ಷಗಳ ಸಭೆಯಲ್ಲಿ ನಮ್ಮ ಅಭಿ ಪ್ರಾಯ ವನ್ನು ಸ್ಪಷ್ಟವಾಗಿ ಹೇಳಿದ್ದೇವೆ. ನಮಗೆ ರಾಜಕೀಯಕ್ಕಿಂತ ನಾಡಿನ ಜನರ ಹಿತ ಮುಖ್ಯ.
– ಸಿದ್ದರಾಮಯ್ಯ, ವಿಪಕ್ಷ ನಾಯಕ

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಮುಖ್ಯ ಮಂತ್ರಿಯವರಿಗೆ ಮೇಕೆದಾಟು ವಿಚಾರದಲ್ಲಿ ಕೈಗೊಳ್ಳಬಹುದಾದ ಮಾರ್ಗಗಳ ಬಗ್ಗೆ ಸಲಹೆ ನೀಡಿದ್ದು, ಸೂಕ್ತ ನಿರ್ಧಾರಕ್ಕೆ ಬನ್ನಿ. ತಾಂತ್ರಿಕ ವಾಗಿ ನಮ್ಮ ಬಳಿ ಹೆಚ್ಚುವರಿ ನೀರು ಇದೆ ಎಂದು ತಮಿಳುನಾಡಿಗೆ ನಾವು ತಿಳಿಸಿದರೂ ಅಪಾಯ ತಪ್ಪಿದ್ದಲ್ಲ.
– ಎಚ್‌.ಡಿ. ಕುಮಾರಸ್ವಾಮಿ,
ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

ಮೇಕೆದಾಟು ನಮ್ಮ ಯೋಜನೆ. ನಾವೇನೂ ಕೇಂದ್ರ ಸರಕಾರದ ಬಳಿ ಕಾನೂನು ಬಾಹಿರವಾಗಿ ಕೇಳುತ್ತಿಲ್ಲ. ಮುಖ್ಯ  ಮಂತ್ರಿ ಯವರ ನಿರ್ಧಾರ ಸರಿ ಇದೆ. ಆದಷ್ಟು ಬೇಗ ಅಗತ್ಯ ಬಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೇಕಾದರೆ ಭೇಟಿ ಮಾಡಿ ಅನುಮತಿ ಪಡೆಯೋಣ.
– ಬಿ.ಎಸ್‌. ಯಡಿಯೂರಪ್ಪ ,
ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next