ಬೆಂಗಳೂರು: ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ಎರಡನೇ ಹಂತದ ಪಾದಯಾತ್ರೆಯನ್ನು ಫೆ.27ರಿಂದ ಮಾರ್ಚ್ 3 ರ ವರೆಗೆ ನಡೆಸಲು ಕಾಂಗ್ರೆಸ್ ತೀರ್ಮಾನಿಸಿದೆ.
ರಾಮನಗರದಿಂದ ಪಾದಯಾತ್ರೆ ಆರಂಭವಾಗಲಿದ್ದು, ಬೆಂಗಳೂರಿನ ಬಸವನಗುಡಿಯಲ್ಲಿ ಅಂತ್ಯಗೊಳ್ಳಲಿದೆ. ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ.
ಬೆಂಗಳೂರಿಗೆ ಪ್ರವೇಶಿಸಿದ ಅನಂತರ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಸಂಚರಿಸಿ ಬಸವನಗುಡಿ ತಲುಪಲಿದೆ.
ಮೇಕೆದಾಟು ಬಳಿಯಿಂದ ರಾಮನಗರದವರೆಗೂ ಪಾದಯಾತ್ರೆ ನಡೆಸಿ ಕೊರೊನಾ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿತ್ತು. ಈಗ ಎಲ್ಲಿಂದ ನಿಲ್ಲಿಸಲಾಗಿತ್ತೋ ಅಲ್ಲಿಂದಲೇ ಆರಂಭಿಸಲು ತೀರ್ಮಾನಿಸಲಾಗಿದೆ.
ರಾಜಕೀಯವಾಗಿ ಮೇಕೆದಾಟು ಪಾದಯಾತ್ರೆ ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಸಂಘರ್ಷಕ್ಕೆ ಕಾರಣವಾಗಿತ್ತು. ಜೆಡಿಎಸ್ ಸಹ ಕೊರೊನಾ ಸಂದರ್ಭದ ಪಾದಯಾತ್ರೆಗೆ ವಿರೋಧ ವ್ಯಕ್ತಪಡಿಸಿತ್ತು.
ಈಗ ಮತ್ತೆ ಪಾದಯಾತ್ರೆ ಆರಂಭಿಸಲು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹಿರಿಯ ನಾಯಕರ ಜತೆ ನಡೆಸಿದ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಂಡಿದ್ದಾರೆ.