Advertisement

ಮೇಕೆದಾಟು ಯೋಜನೆಗೆ ತಮಿಳುನಾಡಿಂದ ಆಕ್ಷೇಪ

03:45 AM Feb 18, 2017 | Team Udayavani |

ಉದಯವಾಣಿ ದೆಹಲಿ ಪ್ರತಿನಿಧಿ: ಇತ್ತೀಚೆಗಷ್ಟೆ ರಾಜ್ಯ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದ ಮೇಕೆದಾಟು ಯೋಜನೆಗೆ ತಮಿಳುನಾಡು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

Advertisement

ಸಂಕಷ್ಟದ ಜಲ ವರ್ಷಗಳಲ್ಲಿ ಕಾವೇರಿ ನದಿ ನೀರಿನ ಹಂಚಿಕೆ ಬಗ್ಗೆ ವಿಪತ್ತು ಪರಿಹಾರ ಸೂತ್ರ ಹೆಣೆಯುವ ಉದ್ದೇಶದಿಂದ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯದ ಮುಖ್ಯ ಕಾರ್ಯದರ್ಶಿ ಅಮರ್‌ಜಿತ್‌ ಸಿಂಗ್‌ ನೇತೃತ್ವದಲ್ಲಿ ಶುಕ್ರವಾರ ದೆಹಲಿಯಲ್ಲಿ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ ಕರೆಯಲಾಗಿತ್ತು.

ಕರ್ನಾಟಕ ಮೇಕೆದಾಟು ಯೋಜನೆ ರೂಪಿಸಲೇಬಾರದು. ಈ ಬಗ್ಗೆ ತಮಿಳುನಾಡು ಸುಪ್ರೀಂ ಕೋರ್ಟ್‌ನಲ್ಲಿ ಈಗಾಗಲೇ ದೂರು ದಾಖಲಿಸಿದೆ. ಅಷ್ಟೆ ಅಲ್ಲದೇ ಕೇಂದ್ರ ಸರ್ಕಾರಕ್ಕೂ ಅನೇಕ ಪತ್ರಗಳನ್ನು ಬರೆದು ತನ್ನ ಆತಂಕವನ್ನು ವಿವರಿಸಿದೆ. ಆದರೆ ಕರ್ನಾಟಕ ಇದ್ಯಾವುದಕ್ಕೂ ಸೊಪ್ಪು$ಹಾಕದೇ ಯೋಜನೆ ಜಾರಿಗೆ ತರಲು ಮುಂದಾಗಿದೆ. ಒಂದು ವೇಳೆ ಮೇಕೆದಾಟು ಯೋಜನೆ ಜಾರಿಗೆ ಬಂದರೆ ತಮಿಳುನಾಡಿಗೆ ನೀರಿನ ಕೊರತೆಯಾಗಲಿದೆ ಎಂದು ತಮಿಳುನಾಡಿನ ಮುಖ್ಯ ಕಾರ್ಯದರ್ಶಿಗಳನ್ನು ಪ್ರತಿನಿಧಿಸಿದ್ದ ಕಾವೇರಿ ತಾಂತ್ರಿಕ ಕೋಶದ ಮುಖ್ಯಸ್ಥ ಸುಬ್ರಹ್ಮಣಿಯಂ ತಗಾದೆ ತೆಗೆದರು.

ತಮಿಳುನಾಡಿನ ತಗಾದೆಗೆ ಸ್ಪಂದಿಸಿದ ಅಮರ್‌ಜಿತ್‌ ಸಿಂಗ್‌, ಯೋಜನೆಯ ಆರಂಭಿಕ ಹಂತದಲ್ಲಿಯೇ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಮೇಕೆದಾಟು ಯೋಜನೆಯ ಪ್ರಸ್ತಾವನೆ ಕೇಂದ್ರದ ಮುಂದೆ ಇನ್ನೂ ಬಂದಿಲ್ಲ. ಈ ಯೋಜನೆಗೆ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ಮತ್ತು ಪರಿಸರ ಇಲಾಖೆಯ ಒಪ್ಪಿಗೆ ಅಗತ್ಯವಿದೆ ಎಂದು ಹೇಳಿದ್ದಾಗಿ ಮೂಲಗಳು ತಿಳಿಸಿವೆ. ಕಾವೇರಿ ಕೊಳ್ಳದ ನಾಲ್ಕು ರಾಜ್ಯಗಳ ಮಧ್ಯೆ ಜಲ ಹಂಚಿಕೆಯ ಬಗ್ಗೆ ಅಧ್ಯಯನ ನಡೆಸಲು ತಜ್ಞರ ಸಮಿತಿ ರಚನೆಗೆ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಮಾರ್ಚ್‌ ಅಂತ್ಯಕ್ಕೆ ಮತ್ತೂಮ್ಮೆ ಸಭೆ ನಡೆಸಲು ನಿರ್ಧರಿಸಲಾಗಿದೆ.

ರಾಜ್ಯವನ್ನು ಮುಖ್ಯ ಕಾರ್ಯದರ್ಶಿ ಸುಭಾಷ್‌ ಕುಂಟಿಯಾ, ಜಲ ಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಸೇರಿದಂತೆ ಇಲಾಖೆಯ ಅಧಿಕಾರಿಗಳು ಪ್ರತಿನಿಧಿಸಿದ್ದರು.ಕಾವೇರಿ ಮೇಲುಸ್ತವಾರಿ ಸಮಿತಿಯು 2016ರ ಸೆಪ್ಟೆಂಬರ್‌ನಲ್ಲಿ ಸೇರಿದ್ದ ಸಂದ‌ರ್ಭದಲ್ಲಿ 2017ರ ಫೆಬ್ರವರಿಯಿಂದ ಸೆಪ್ಟೆಂಬರ್‌ವರೆಗೆ ಪ್ರತಿತಿಂಗಳು ಸಭೆ ಸೇರಿ ಕಾವೇರಿ ಕೊಳ್ಳದ ಜಲ ವಿಚಾರಗಳ ವಿನಿಮಯ ಮಾಡಿಕೊಳ್ಳುವ ನಿರ್ಧಾರ ತೆಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರದ ಸಭೆ ನಡೆದಿದೆ.

Advertisement

ಆದರೆ ಕಾವೇರಿ ಮೇಲುಸ್ತುವಾರಿ ಸಮಿತಿಯ ಈ ಹಿಂದಿನ ಸಭೆ ಸುಪ್ರೀಂ ಕೋರ್ಟ್‌ ಸೂಚನೆಯ ಮೇರೆಗೆ ನಡೆದಿತ್ತು. ಆದರೆ ಸಮಿತಿಯ ತೀರ್ಮಾನಗಳಿಗೆ ಸುಪ್ರೀಂ ಕೋರ್ಟ್‌ ಮನ್ನಣೆ ನೀಡಿರಲಿಲ್ಲ. ಅಷ್ಟೆ ಅಲ್ಲದೆ ಕಾವೇರಿ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ದೈನಂದಿನ ನೆಲೆಯಲ್ಲಿ ನಡೆಯಲಿದ್ದು ಶೀಘ್ರವೇ ತೀರ್ಪು ಪ್ರಕಟವಾಗುವ ಭರವಸೆ ಸೃಷ್ಟಿಯಾಗಿದೆ. ಇಂತಹ ಸಂದ¸‌ìದಲ್ಲಿ ಕಾವೇರಿ ಮೇಲುಸ್ತುವಾರಿ ಸಮಿತಿಯ ಸಭೆಯ ತೀರ್ಮಾನಗಳಿಗೆ ಎಷ್ಟರ ಮನ್ನಣೆ ಸಿಗಲಿದೆ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next