Advertisement

ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್‌ ಪಾದಯಾತ್ರೆ

07:52 PM Nov 07, 2021 | Team Udayavani |

ಬೆಂಗಳೂರು: ಕುಡಿಯುವ ನೀರು, ನೀರಾವರಿ ಹಾಗೂ ವಿದ್ಯುತ್‌ ಉತ್ಪಾದನೆಯ “ಮೇಕೆದಾಟು ಆಣೆಕಟ್ಟು ನಿರ್ಮಾಣ ಯೋಜನೆ’ಯನ್ನು ಆದಷ್ಟು ಬೇಗ ಜಾರಿಗೆ ತರುವಂತೆ ಆಗ್ರಹಿಸಿ ಡಿಸೆಂಬರ್‌ ಮೊದಲ ವಾರದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಮೇಕೆದಾಟು ಇಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್‌, ರಾಜಧಾನಿ ಬೆಂಗಳೂರು ಸೇರಿದಂತೆ ಸುತ್ತಲಿನ 7 ಜಿಲ್ಲೆಗಳ ಜನತೆಗೆ ಅವಶ್ಯಕವಾಗಿ ಬೇಕಾಗಿರುವ ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಕ್ಷದಿಂದ ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ನ್ಯಾಯಾಧೀಕರಣ ತೀರ್ಪು ಕೊಟ್ಟ ಬಳಿಕವೂ ರಾಜ್ಯ ಸರ್ಕಾರ ಯೋಜನೆ ಜಾರಿಗೆ ವಿಳಂಬ ಮಾಡುತ್ತಿದೆ. ಈ ಯೋಜನೆ ನಮ್ಮ ರಾಜ್ಯದ ಹಕ್ಕು. ರಾಜ್ಯ ಸರ್ಕಾರದ ಮೇಲೆ ಒತ್ತಡ ತರಲು ಪಾದಯಾತ್ರೆ ಕಾಂಗ್ರೆಸ್‌ ನೇತೃತ್ವದಲ್ಲಿ ನಡೆಯಲಿದೆ. ಪಕ್ಷದ ಎಲ್ಲಾ ಮುಖಂಡರು ಒಂದಾಗಿ ಪಾದಯಾತ್ರೆ ನಡೆಸಲಿದ್ದಾರೆ. ಬೇರೆ ಯಾರೂ ಬೇಕಾದರೂ ಈ ಪಾದಯಾತ್ರೆಯಲ್ಲಿ ಭಾಗವಹಿಸಬಹುದು. ಡಿಸೆಂಬರ್‌ ಮೊದಲ ಅಥವಾ ಎರಡನೇ ವಾರದ ಬಗ್ಗೆ ಚರ್ಚೆ ನಡೆಯುತ್ತಿದೆ. ಬಹುತೇಕ ಮೊದಲ ವಾರದಲ್ಲೇ ಪಾದಯಾತ್ರೆ ನಡೆಯಲಿದೆ. ಮೇಕುದಾಟಿನಿಂದ ಹೊರಟು ಬೆಂಗಳೂರಿಗೆ ತಲುಪಲು ಎಷ್ಟು ದಿನ ಬೇಕಾಗುತ್ತದೊ ಅಷ್ಟು ದಿನ ಪಾದಯಾತ್ರೆ ನಡೆಯಲಿದೆ. ಮಾರ್ಗ, ಅವಧಿ ಇತ್ಯಾದಿಗಳ ಬಗ್ಗೆ ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಇದನ್ನೂ ಓದಿ:ಗೋವಾದಲ್ಲಿ ಆಪ್ ಸರಕಾರ ಬಂದರೆ 6 ತಿಂಗಳೊಳಗೆ ಗಣಿಗಳ ಪುನರಾರಂಭ: ಕೇಜ್ರಿವಾಲ್

ತಮಿಳುನಾಡು ಕ್ಯಾತೆ-ತಗಾದೆ: ಸಿದ್ದು
ಮೇಕೆದಾಟು ಯೋಜನೆಗೆ ನಮ್ಮ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಡಿಪಿಆರ್‌ ತಯಾರಿಸಿ ಪರಿಸರ ಪರವಾನಿಗೆಗೆ ಕೇಂದ್ರ ಸರ್ಕಾರಕ್ಕೆ ಕಳಿಸಿಕೊಡಲಾಗಿತ್ತು. ಈ ಯೋಜನೆಗೆ ಕೇಂದ್ರ ಸರ್ಕಾರ ಅಥವಾ ಸುಪ್ರೀಂಕೋರ್ಟ್‌ನ ತಡೆ ಇಲ್ಲ. ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಯಾವುದೇ ಅನ್ಯಾಯ ಆಗುವುದಿಲ್ಲ. ಎರಡೂ ರಾಜ್ಯಗಳಿಗೆ ಅನುಕೂಲವಾಗಲಿದೆ. ಕರ್ನಾಟಕದ ಭೌಗೋಳಿಕ ಪ್ರದೇಶದಲ್ಲಿ ಯೋಜನೆ ಬರುತ್ತದೆ. ಹೆಚ್ಚುವರಿ ನೀರು ಬಳಸಿಕೊಳ್ಳುವ ಈ ಯೋಜನೆಗೆ ತಮಿಳುನಾಡು ಅನಗತ್ಯವಾಗಿ ಕ್ಯಾತೆ ತೆಗೆಯುತ್ತಿದೆ. ಕೇಂದ್ರ ಸರ್ಕಾರ ತಕ್ಷಣ ಪರಿಸರ ಪರವಾನಿಗೆ ನೀಡಬೇಕು. ನೆಪ ಹೇಳದೆ ರಾಜ್ಯ ಸರ್ಕಾರ ಕೂಡಲೇ ಯೋಜನೆ ಅನುಷ್ಠಾನಕ್ಕೆ ತರಬೇಕೆಂದು ಆಗ್ರಹಿಸಿ ಪಾದಯಾತ್ರೆ ನಡೆಸಲಾಗುತ್ತದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಇದೇ ವೇಳೆ ಹೇಳಿದರು.

Advertisement

” ಮೇಕೆದಾಟು ಯೋಜನೆ ವಿಚಾರದಲ್ಲಿ ತಮಿಳುನಾಡು ರಾಜಕೀಯ ಮಾಡುತ್ತಿದೆ. ಈ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷ ರಾಜಕೀಯ ಮಾಡುವುದಿಲ್ಲ. ಕಾಂಗ್ರೆಸ್‌ ಪಕ್ಷ ಯಾವತ್ತೂ ಕನ್ನಡಿಗರು ಮತ್ತು ಕರ್ನಾಟಕದ ಪರ ಇರುತ್ತದೆ.’
– ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ.

Advertisement

Udayavani is now on Telegram. Click here to join our channel and stay updated with the latest news.

Next