Advertisement

ಮೇಕೆದಾಟು ಯೋಜನೆಗೆ ಶೀಘ್ರ ಅನುಮತಿ

06:00 AM Oct 06, 2018 | Team Udayavani |

ಬೆಂಗಳೂರು:ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆಗೆ ಯಾವುದೇ ಕ್ಷಣದಲ್ಲಿ ಕೇಂದ್ರ ಸರ್ಕಾರದ ಆನುಮತಿ ಸಿಗಬಹುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಶುಕ್ರವಾರ ದೆಹಲಿಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರೊಂದಿಗೆ ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ಕುರಿತ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಕಾನೂನಾತ್ಮಕ ಒಪ್ಪಿಗೆ ಸಿಗಲಿದೆ ಎಂದು ತಿಳಿಸಿದರು.

ಮೇಕೆದಾಟು ಯೋಜನೆಗೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಲಸಂಪನ್ಮೂಲ ಇಲಾಖೆ ಅನುಮತಿ ದೊರೆತ ನಂತರ ಪರಿಸರ ಮತ್ತು ಅರಣ್ಯ ಇಲಾಖೆ ಅನುಮತಿ ಪಡೆಯಬೇಕಿದೆ. ಆದಷ್ಟು ಬೇಗ ಈ ಎಲ್ಲ ಪ್ರಕ್ರಿಯೆ ಮುಗಿಯಲಿದೆ ಎಂದು ಹೇಳಿದರು.

30 ವರ್ಷಗಳಿಂದ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಸಮಯ ವ್ಯರ್ಥ ಮಾಡಿಕೊಂಡಿದ್ದೇವೆ. 200 ಟಿಎಂಸಿಗೂ ಹೆಚ್ಚು ಸಮುದ್ರಕ್ಕೆ ಹರಿದು ಹೋಗುತ್ತದೆ. ಆ ನೀರು ಹಿಡಿದಿಟ್ಟುಕೊಳ್ಳಲು ಅಣೆಕಟ್ಟು ನಿರ್ಮಾಣ ಆಗಬೇಕು. ನಮ್ಮ ಅಭಿಪ್ರಾಯಕ್ಕೆ ಕೇಂದ್ರ ಸಚಿವರು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ದೇವೇಗೌಡರು ನಿಯೋಗದಲ್ಲಿ ಬಂದಿದ್ದು ತುಂಬಾ ಅನುಕೂಲವಾಯಿತು. ಕೇಂದ್ರ ಸಚಿವರಿಗೆ ದೇವೇಗೌಡರು ಸುದೀರ್ಘ‌ವಾಗಿ ವಿಷಯ ತಿಳಿಸಿದ್ದಾರೆ. ಹೀಗಾಗಿ ಕೇಂದ್ರ ಸಚಿವರು ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿಗಳಿಗೂ ಸೂಚನೆ ಕೊಟ್ಟಿದ್ದಾರೆ ಎಂದು ಹೇಳಿದರು.

Advertisement

ಮಹದಾಯಿಗೆ ಸಂಬಂಧಿಸಿದಂತೆ ನ್ಯಾಯಾಧೀಕರಣದಲ್ಲಿ ನಮಗೆ ಹಂಚಿಕೆ ಮಾಡಿರುವ ನೀರು ತತಕ್ಷಣ ಉಪಯೋಗ ಮಾಡಿಕೊಳ್ಳಲು ಕೇಂದ್ರ ಸರ್ಕಾರ  ಆದೇಶ ಹೊರಡಿಸಬೇಕು. ಅದಕ್ಕೂ ಮನವಿ ಮಾಡಿದ್ದೇವೆ. ಗೋವಾ ಸರ್ಕಾರ 5 (3) ಸ್ಪಷ್ಟನೆ ಕೇಳಿದೆ. ಆ ಸ್ಪಷ್ಟನೆ ಕೊಟ್ಟ ನಂತರ ಆದೇಶ ಹೊರಡಿಸಲಾಗುವುದು ಎಂದು ಸಚಿವರು ಹೇಳಿದರು.  ಈ ಹಿಂದೆ ನ್ಯಾಯಾಧೀಕರಣ ತೀರ್ಪು ಪ್ರಕರಣಗಳಲ್ಲಿ 5 (3) ಸ್ಪಷ್ಟನೆಗೂ ಮುಂಚೆಯೇ ಅಧಿಸೂಚನೆ ಹೊರಡಿಸಿರುವ ಉದಾಹರಣೆ  ಮನವರಿಕೆ ಮಾಡಿಕೊಟ್ಟಿದ್ದೇವೆ. ಅದಕ್ಕೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಚಿಕ್ಕಮಗಳೂರು-ಬಿಳಿಕೆರೆ ಮತ್ತು ಬಾಣಾವರ-ಹುಳಿಯಾರು ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಯೋಜನೆಗಳ ಶಂಕುಸ್ಥಾಪನೆಗೆ ಚಾಲನೆ ನೀಡಲು ಆಗಮಿಸುವಂತೆ ನಿತಿನ್‌ ಗಡ್ಕರಿ ಅವರಿಗೆ ಮನವಿ ಮಾಡಿದರು.  ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಸಹ ಭೇಟಿ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next