Advertisement

ವಾಡಿ ಪುರಸಭೆಗೆ ಮೈನಾಬಾಯಿ ಅಧ್ಯಕ

11:23 AM Nov 11, 2017 | Team Udayavani |

ವಾಡಿ: ಪಟ್ಟಣದ ಪುರಸಭೆಯಲ್ಲಿ ಕಾಂಗ್ರೆಸ್‌ಗೆ ಬಹುಮತವಿದ್ದರೂ ಚುನಾವಣಾ ಸಭೆಯಲ್ಲಿ ಸದಸ್ಯರ ಅನುಪಸ್ಥಿತಿ ಕಾರಣಕ್ಕೆ ಅಧಿಕಾರ ಕೈತಪ್ಪಿ ಬಿಜೆಪಿ ಪಾಲಾಗುತ್ತಿದ್ದ ಪ್ರಸಂಗವನ್ನು ಶಾಸಕ ಪ್ರಿಯಾಂಕ್‌ ಖರ್ಗೆ ಅವರ ಸಮಯ ಪ್ರಜ್ಞೆಯಿಂದ ಅಧಿಕಾರ ಪುನಃ ಕೈವಶವಾಗಿದೆ.

Advertisement

ಸೇಡಂ ಸಹಾಯಕ ಆಯುಕ್ತೆ, ಚುನಾವಣಾಧಿಕಾರಿ ಡಾ| ಶುಶೀಲಾ ನೇತೃತ್ವದಲ್ಲಿ ಶುಕ್ರವಾರ ಪುರಸಭೆಗೆ ನಡೆದ
ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ, ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ವಾಗ್ವಾದಕ್ಕೆ ಗುರಿಯಾಗಿ ಬಿಗುವಿನ
ವಾತಾವರಣ ಸೃಷ್ಟಿಸಿತ್ತು. ಚುನಾವಣೆ ಪ್ರಕ್ರಿಯೆಯಲ್ಲಿ ಕಾನೂನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಕ್ಷೇತ್ರದ
ಶಾಸಕ, ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಮಾಜಿ ಶಾಸಕ ಬಿಜೆಪಿಯ ವಾಲ್ಮೀಕಿ ನಾಯಕ ಅವರೊಂದಿಗೆ ಆಯುಕ್ತೆ
ಡಾ| ಶುಶೀಲಾ ವಿರುದ್ಧ ಕಾನೂನು ವಾಕ್ಸಮರ ನಡೆದು ಗಲಾಟೆಗೆ ಕಾರಣವಾಯಿತು.

ಒಟ್ಟು 23 ಸದಸ್ಯರ ಬಲ ಹೊಂದಿದ ಪುರಸಭೆಯಲ್ಲಿ ಕಾಂಗ್ರೆಸ್‌-13, ಬಿಜೆಪಿ-7 ಹಾಗೂ ಪಕ್ಷೇತರ-3 ಸದಸ್ಯರ
ಬಲವಿತ್ತು. ಒಬ್ಬರು ಕಾಂಗ್ರೆಸ್‌ ಸದಸ್ಯರು ಮೃತಪಟ್ಟ ಕಾರಣ ಕಾಂಗ್ರೆಸ್‌ ಬಲ 12ಕ್ಕೆ ಕುಸಿದಿತ್ತು. ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪಂದಿಸಿದ್ದ ಬಂಜಾರಾ ಸಮುದಾಯದ ವಾರ್ಡ್‌ 5ರ ಸದಸ್ಯೆ ಮೈನಾಬಾಯಿ ಗೋಪಾಲ ರಾಠೊಡ, ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಒಬ್ಬರು ಪಕ್ಷೇತರ ಸದಸ್ಯ ವಿಶಾಲ ನಂದೂರಕರ ಅವರ ಮತಗಳು ಸೇರಿ ಒಟ್ಟು 14
ಮತಗಳನ್ನು ಪಡೆದು ಜಯಗಳಿಸಿದರು.

ಬಿಜೆಪಿ ಅಭ್ಯರ್ಥಿ ಜೈನಾಬಾಯಿ ನಾಯಕ, ಇಬ್ಬರು ಪಕ್ಷೇತರ ಸದಸ್ಯರಾದ ಅನಿತಾಬಾಯಿ ರಾಮು ರಾಠೊಡ ಹಾಗೂ ಮಹ್ಮದ್‌ ಗೌಸ್‌ ಅವರ ಬೆಂಬಲದೊಂದಿಗೆ 9 ಮತಗಳನ್ನು ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಮಲ್ಲಯ್ಯ ಗುತ್ತೇದಾರ 14 ಮತಗಳನ್ನು ಪಡೆದು ಗೆಲುವು ತನ್ನದಾಗಿಸಿಕೊಂಡರೆ, ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಮಹ್ಮದ್‌ ಗೌಸ್‌ 9 ಮತಗಳನ್ನು ಪಡೆದು ಸೋಲುಂಡರು.

ಕೈ ತಪ್ಪಲಿದ್ದ ಅಧಿಕಾರ: ಚುನಾವಣೆ ಸಭೆಯಲ್ಲಿ ಅನುಪಸ್ಥಿತಿಯಿದ್ದ ಕಾಂಗ್ರೆಸ್‌ ಸದಸ್ಯರಾದ ತಿಮ್ಮಯ್ಯ ಪವಾರ, ಗುಜ್ಜಾಬಾಯಿ ಸಿಂಗೆ, ಸುಗಂಧಾ ಜೈಗಂಗಾ, ಹಸೀನಾಬೇಗಂ ಖುರೇಶಿ ಹಾಗೂ ಪೃಥ್ವಿರಾಜ ಸೂರ್ಯವಂಶಿ ನೇರವಾಗಿ ಮತದಾನ ಪ್ರಕ್ರಿಯೆ ವೇಳೆ ಆಗಮಿಸಿದ್ದನ್ನು ಪ್ರಶ್ನಿಸಿದ ಚುನಾವಣಾಧಿಕಾರಿ ಡಾ| ಸುಶೀಲಾ, ನೀವು ಸಭೆಗೆ ಗೈರಾಗಿದ್ದೀರಿ ನಿಮಗೆ ಮತದಾನದ ಹಕ್ಕಿಲ್ಲ ಎಂದು ಹೊರದೂಡಿದ ಪ್ರಸಂಗ ನಡೆದಿದೆ. ಈ ಘಟನೆಯಿಂದ ಬಹುಮತ ಕಳೆದುಕೊಂಡ ಕಾಂಗ್ರೆಸ್‌ಗೆ ಅಧಿಕಾರ ಕೈತಪ್ಪುವ ಆತಂಕ ಎದುರಾಯಿತು.

Advertisement

ಅಧಿಕಾರ ಬಿಜೆಪಿ ವಶವಾಗಲಿದೆ ಎಂಬ ಸುದ್ದಿ ತಿಳಿದ ಸಚಿವ ಪ್ರಿಯಾಂಕ್‌ ಖರ್ಗೆ, ಪುರಸಭೆಗೆ ದೌಡಾಯಿಸಿ ಬಂದು
ಆಯುಕ್ತರ ನಡೆ ಪ್ರಶ್ನಿಸಿ ವಾಗ್ವಾದ ನಡೆಸಿದ ಬಳಿಕ ಆರು ಜನ ಸದಸ್ಯರಿಗೆ ಮತದಾನದ ಹಕ್ಕು ನೀಡಲಾಯಿತು.

ಕಾನೂನು ಸಮರ ನಡೆಸುವೆವು : ಸಭೆಗೆ ಹಾಜರಿಲ್ಲದ ಸದಸ್ಯರಿಗೆ ಮತದಾನದ ಹಕ್ಕಿಲ್ಲ ಎಂದು
ಹೊರ ಹಾಕಿದ ಆಯುಕ್ತೆ ಡಾ| ಸುಶೀಲಾ, ಸಚಿವ ಖರ್ಗೆ ಅವರು ಜಿಲ್ಲಾಧಿಕಾರಿಗಳ ಮೂಲಕ ಹೇರಿದ ಒತ್ತಡಕ್ಕೆ ಮಣಿದು ಸಭೆಗೆ ಗೈರಾಗಿದ್ದ ಕಾಂಗ್ರೆಸ್‌ ಸದಸ್ಯರಿಗೆ ಮತದಾನದ ಹಕ್ಕು ದೊರಕಿಸಿ ಕೊಟ್ಟಿದ್ದು ಕಾನೂನು ಬಾಹಿರ. ಮಧ್ಯಾಹ್ನ 2:05ಕ್ಕೆ ಮತದಾನ ಸಮಯವಿದ್ದರೂ ಆರು ಜನ ಸದಸ್ಯರು ಮತ್ತು ಸಚಿವರು 2:25ಕ್ಕೆ ಬಂದು ಮತದಾನ ಮಾಡಿದು, ಇವರಿಗೆ ಅವಕಾಶ ಒದಗಿಸಿಕೊಟ್ಟಿದ್ದು ಕಾನೂನು ಉಲ್ಲಂಘನೆಯಾಗಿದೆ. ಈ ಕುರಿತು ಬಿಜೆಪಿ ಕಾನೂನು ಸಮರ ನಡೆಸಲಿದೆ.
 ವಾಲ್ಮೀಕಿ ನಾಯಕ, ಮಾಜಿ ಶಾಸಕ

ಬಿಜೆಪಿಗೆ ಮುಖಭಂಗ : ಅಧಿಕಾರಿಗಳು ಯಾವುದೇ ರೀತಿಯ ಕಾನೂನು ಉಲ್ಲಂಘಿಸಿಲ್ಲ. ಕಾನೂನು ಬದ್ಧವಾಗಿಯೇ ಚುನಾವಣೆ ನಡೆಸಿದ್ದಾರೆ. ನಾವು ಬಿಜೆಪಿಯವರಿಂದ ರಾಜಕೀಯ ಪಾಠ ಕಲಿಯಬೇಕಿಲ್ಲ. ಕುತಂತ್ರ ರಾಜಕಾರಣದಿಂದ ನಾವು ಅಧಿಕಾರ ಪಡೆಯುವವರಲ್ಲ. ಈ ಹಿಂದೆ ನಾಲ್ಕು ಜನ ಸದಸ್ಯರ ಭವಿಷ್ಯ ಹಾಳು ಮಾಡಿರುವ ಬಿಜೆಪಿ, ಮತ್ತೆ ಅಂತಹದ್ದೇ ಕೃತ್ಯಕ್ಕೆ ಕೈಹಾಕಿ ಮುಖಂಭಂಗ ಅನುಭವಿಸಿದೆ.
 ಪ್ರಿಯಾಂಕ್‌ ಖರ್ಗೆ, ಸಚಿವ

ಮತದಾನ ಕಸಿಯುವ ಹಕ್ಕಿಲ್ಲ : ಕಾನೂನು ಚೌಕಟ್ಟಿನಲ್ಲಿ ಚುನಾವಣೆ ನಡೆಸಲಾಗಿದೆ. ಮದ್ಯಾಹ್ನ 1:00 ಗಂಟೆಗೆ ನಡೆದ ಚುನಾವಣಾ ಸಭೆಯಲ್ಲಿ ಕಾಂಗ್ರೆಸ್‌ನ ಆರು ಜನ ಸದಸ್ಯರು ಗೈರಾಗಿದ್ದರು. ಆದರೆ ಇವರ ಮತದಾನದ ಹಕ್ಕು ಕಸಿಯುವ ಹಕ್ಕು ನಮಗಿಲ್ಲ. ಆದ್ದರಿಂದ ಮತದಾನ ವೇಳೆ ಈ ಆರು ಜನ ಚುನಾಯಿತ ಸದಸ್ಯರಿಗೆ ಮತದಾನ ಮಾಡುವ ಅವಕಾಶ ನೀಡಿದ್ದೇನೆ. ಇವರೊಂದಿಗೆ ಸಚಿವ ಖರ್ಗೆ ಅವರೂ ಮತದಾನ ಮಾಡಿದ್ದಾರೆ. ಈ ಕುರಿತು ತಕರಾರು ಇದ್ದರೆ ದೂರು ಕೊಡಬಹುದು.
 ಡಾ| ಸುಶೀಲಾ, ಚುನಾವಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next