ಆ್ಯಂಟಿಗುವಾ/ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13,400 ಕೋಟಿ ರೂ. ವಂಚಿಸಿದ ಮೆಹುಲ್ ಚೋಕ್ಸಿ ಶೀಘ್ರದಲ್ಲಿಯೇ ಭಾರತಕ್ಕೆ ಗಡಿಪಾರು ಆಗಲಿದ್ದಾನೆ. ಸದ್ಯ ಆ್ಯಂಟಿಗುವಾದಲ್ಲಿ ತಲೆಮರೆಸಿಕೊಂಡಿರುವ ಆತನ ಪೌರತ್ವ ರದ್ದು ಮಾಡುವ ಬಗ್ಗೆ ಅಲ್ಲಿನ ಪ್ರಧಾನಿ ಗ್ಯಾಸ್ಟನ್ ಬ್ರೌನ್ ಹೇಳಿದ್ದಾರೆ. ಹೀಗಾಗಿ, ಉದ್ಯಮಿ ವಿಜಯ ಮಲ್ಯ ಗಡಿಪಾರು ಪ್ರಯತ್ನದಲ್ಲಿ ಹಂತ ಹಂತದ ಯಶಸ್ಸು ಕಾಣುತ್ತಲಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಮತ್ತೂಂದು ರಾಜತಾಂತ್ರಿಕ ಗೆಲುವು ಸಿಗುವ ಸಾಧ್ಯತೆ ಇದೆ.
ಕಳೆದ ವರ್ಷದ ಫೆಬ್ರವರಿಯಲ್ಲಿ ಬೆಳಕಿಗೆ ಬಂದ 13,400 ಕೋಟಿ ರೂ. ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆಯ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಉದ್ಯಮಿ ಮೆಹುಲ್ ಚೋಕ್ಸಿ ಕೂಡ ಒಬ್ಬರು. 2017ರಲ್ಲಿ ಆತ ಆ್ಯಂಟಿಗುವಾ ಮತ್ತು ಬಾರ್ಬುಡಾ ದೇಶದ ಪೌರತ್ವ ಪಡೆದುಕೊಂಡಿದ್ದ. ಹೂಡಿಕೆ ಮಾಡುವ ಮೂಲಕ ಪೌರತ್ವ ಪಡೆಯುವ ಯೋಜನೆ (ಸಿಐಪಿ) ಮೂಲಕ ಈ ಸೌಲಭ್ಯ ಪಡೆದುಕೊಂಡಿದ್ದ. 2018ರ ಜ.4ರಂದು ಆತ ದೇಶ ಬಿಟ್ಟು ಪರಾರಿಯಾಗುವುದಕ್ಕೆ ಮೊದಲು ಈ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದ.
ಹಲವು ಬಾರಿ ಆ್ಯಂಟಿಗುವಾ ಬಿಟ್ಟು ಇತರ ದೇಶಗಳಿಗೆ ಮೆಹುಲ್ ಚೋಕ್ಸಿ ಪರಾರಿಯಾಗಿದ್ದ ಎಂಬ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳೂ ಪ್ರಕಟವಾಗಿದ್ದವು. ಜತೆಗೆ ಕೇಂದ್ರ ಗುಪ್ತಚರ ಸಂಸ್ಥೆಗಳು ಆತ ಆ್ಯಂಟಿಗುವಾದಲ್ಲಿಯೇ ಪೌರತ್ವ ಪಡೆದು ಇದ್ದಾನೆ ಎಂಬ ವಿಚಾರ ಖಚಿತವಾದ ಬಳಿಕ ಆತನನ್ನು ಗಡಿಪಾರು ಮಾಡುವ ನಿಟ್ಟಿನಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು ಕಾರ್ಯೋನ್ಮುಖವಾಗಿದ್ದವು.
ಪೌರತ್ವ ರದ್ದು ಮಾಡುತ್ತೇವೆ: ‘ನಮ್ಮ ದೇಶ ಕಳ್ಳರಿಗೆ ಸುರಕ್ಷಿತ ಸ್ಥಳವಲ್ಲ. ಆತನ ಪೌರತ್ವ ರದ್ದು ಮಾಡಿ ಭಾರತಕ್ಕೆ ಗಡಿಪಾರು ಮಾಡುತ್ತೇವೆ. ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆ ಶುರುವಾಗಿದೆ’ ಎಂದು ಆ್ಯಂಟಿಗುವಾ ಪ್ರಧಾನಿ ಗ್ಯಾಸ್ಟಿನ್ ಬ್ರೌನ್ ಮಂಗಳವಾರ ಹೇಳಿದ್ದಾರೆ. ಸ್ಥಳೀಯ ಮತ್ತು ಭಾರತದ ಕೋರ್ಟ್‌ಗಳಲ್ಲಿ ಚೋಕ್ಸಿ ವಿರುದ್ಧ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಚೋಕ್ಸಿ ಸೇರಿದಂತೆ ಹಣಕಾಸು ಅಕ್ರಮಗಳಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂಬ ಬ್ರೌನ್ ಹೇಳಿಕೆಯನ್ನು ಉಲ್ಲೇಖೀಸಿ ‘ಆ್ಯಂಟಿಗುವಾ ಆಬ್ಸರ್‌ರ್ವರ್’ ವರದಿ ಮಾಡಿದೆ.
ಪ್ರಕ್ರಿಯೆ ಚುರುಕಿಗೆ ಯತ್ನ: ಗೀತಾಂಜಲಿ ಜ್ಯುವೆಲ್ಲರ್ಸ್ ಸಮೂಹ ಸಂಸ್ಥೆಯ ಪ್ರವರ್ತಕನೂ ಆಗಿರುವ ಚೋಕ್ಸಿ ಗಡಿಪಾರಿಗೆ ಆರಂಭದಿಂದಲೇ ಪ್ರಯತ್ನಗಳು ನಡೆದಿದ್ದವು. ಅದು ಈಗ ಫಲ ನೀಡಿದೆ. ಅಲ್ಲಿನ ಸರ್ಕಾರವೇ ಗಡಿಪಾರು ಮಾಡುವ ಬಗ್ಗೆ ಘೋಷಣೆ ಮಾಡಿರುವುದರಿಂದ ಶೀಘ್ರವೇ ಅದು ಪೂರ್ತಿಯಾಗುವಂತೆ ಮತ್ತಷ್ಟು ಚುರುಕಾಗಿ ಪ್ರಯತ್ನ ನಡೆಸುತ್ತೇವೆ ಎಂದು ನವದೆಹಲಿಯಲ್ಲಿ ಅಧಿಕಾರಿಗಳು ಹೇಳಿದ್ದಾರೆ.
ಅನಾರೋಗ್ಯ ನೆಪ
ಅನಾರೋಗ್ಯದ ಕಾರಣ ನೀಡಿ ಭಾರತಕ್ಕೆ ಬರಲು ಅಸಾಧ್ಯ ಎಂದಿದ್ದ ಚೋಕ್ಸಿ. ಅಲ್ಲದೆ, ಚಿಕಿತ್ಸೆಗಾಗಿಯೇ ಆ್ಯಂಟಿಗುವಾ ಮತ್ತು ಬರ್ಮುಡಾಕ್ಕೆ ಹೋಗಿದ್ದೆ ಎಂದೂ ಬಾಂಬೆ ಹೈಕೋರ್ಟ್‌ಗೆ ಹೇಳಿಕೊಂಡಿದ್ದ. ಅದಕ್ಕೆ ಉತ್ತರಿಸಿದ್ದ ಜಾರಿ ನಿರ್ದೇಶನಾಲಯ, ಚೋಸ್ಕಿಯನ್ನು ಕರೆತರಲು ಏರ್ ಆ್ಯಂಬ್ಯುಲೆನ್ಸ್ ಕಳುಹಿಸುವುದಾಗಿ ಹೈಕೋರ್ಟ್‌ಗೆ ಅರಿಕೆ ಮಾಡಿತ್ತು.