Advertisement
ಮೊದಲೆಲ್ಲ ಮದರಂಗಿ ಮಾರುಕಟ್ಟೆಯಲ್ಲಿ ದೊರೆಯುತ್ತಿರಲ್ಲಿಲ್ಲ. ಹೆಂಗಳೆಯರು ಗೋರಂಟಿ ಎಲೆಗಳನ್ನು ನುಣ್ಣಗೆ ಅರೆದು ಅದಕ್ಕೆ ಚಹಾದ ಡಿಕಾಕ್ಷನ್, ನಿಂಬೆರಸ ಸೇರಿಸಿ ಮದರಂಗಿ ತಯಾರಿಸುತ್ತಿದ್ದರು. ಇಂದಿನಂತೆ ಆಗ ವೈವಿಧ್ಯಮಯ ಚಿತ್ತಾರಗಳೂ ಇರಲಿಲ್ಲ. ಒಂದು ಕಡ್ಡಿಯನ್ನು ಅರೆದ ಮೆಹಂದಿಯಲ್ಲಿ ಅದ್ದಿ ಅಂಗೈ ತುಂಬಾ ಸಣ್ಣ ಸಣ್ಣ ಚುಕ್ಕೆಗಳನ್ನಿಟ್ಟರೆ ಚಿತ್ತಾರ ಪೂರ್ತಿವಾಗುತ್ತಿತ್ತು. ರಾತ್ರೆಯೆಲ್ಲ ಅದನ್ನು ಕೈಗಳಿಗೆ ಹಾಗೆಯೇ ಇರಿಸಿ ಬೆಳಗ್ಗೆಯೇ ತೊಳೆದುಕೊಳ್ಳುವುದು. ಆದರೀಗ ಅಷ್ಟೆಲ್ಲ ಕಷ್ಟಪಡಬೇಕಾಗಿಲ್ಲ. ಮಾರುಕಟ್ಟೆಯಲ್ಲಿ ಕೋನ್‌ಗಳಲ್ಲಿ ಮೆಹಂದಿ ಸಿಗುತ್ತದೆ. ಹಚ್ಚಿಕೊಂಡರೆ ಕೆಲವು ನಿಮಿಷಗಳಲ್ಲೇ ರಂಗು ಮೂಡುತ್ತದೆ!
Related Articles
ಮೆಹಂದಿ ಕೇವಲ ಅಂದಚೆಂದ, ಸೌಂದರ್ಯ ವರ್ಧಿಸುವ ಸೌಂದರ್ಯವರ್ಧಕವಾಗಿ ಮಾತ್ರ ಬಳಸಲಾಗುತ್ತಿಲ್ಲ. ಮೆಹಂದಿ ಗಿಡದ ಎಲೆಗಳಲ್ಲೂ ಹಲವಾರು ಔಷಧೀಯ ಗುಣಗಳಿವೆ. ಮುಖ್ಯವಾಗಿ ಪಿತ್ತಶಾಮಕ, ಶೀತಲಗುಣ ಹೊಂದಿರುವ ಈ ಮೂಲಿಕೆಯು ಕಫಹರವೂ ಹೌದು. ಇದನ್ನು ತಲೆಯ ಕೂದಲಿಗೆ ಬಣ್ಣವಾಗಿ ಹಚ್ಚಲೂ ಬಳಸುತ್ತಾರೆ. ಗೋರಂಟಿಯನ್ನು ತಲೆಗೆ ಹಚ್ಚಿಕೊಳ್ಳುವುದರಿಂದ ತಲೆಯ ಹೊಟ್ಟು ಹಾಗೂ ಉದುರುವ ಕೂದಲನ್ನು ತಡೆದು, ಕೂದಲು ಸಮೃದ್ಧಿಯಾಗಿ ಬೆಳೆಯಲು ನೆರವಾಗುತ್ತದೆ. ಮನೆಯಲ್ಲೇ ಗೋರಂಟಿಯ ಎಲೆಗಳ ರಸಕ್ಕೆ ಕೊಬ್ಬರಿ ಎಣ್ಣೆ ಬೆರೆಸಿ ಕುದಿಸಿ, ನೀರು ಇಂಗಿದ ಬಳಿಕ ಸೋಸಿ, ಬಾಟಿÉಯಲ್ಲಿ ತುಂಬಿಸಿಟ್ಟು ನಿತ್ಯ ತಲೆಯ ಕೂದಲಿಗೆ ಲೇಪಿಸಿದರೆ ಕೂದಲಿಗೂ ಉತ್ತಮ ಕಂಡೀಷನರ್, ಕೂದಲೂ ಸೊಂಪಾಗಿ ಬೆಳೆಯುತ್ತದೆ ಜೊತೆಗೆ ಪಿತ್ತಾಧಿಕ್ಯತೆಯ ತಲೆನೋವು ಶಮನವಾಗುತ್ತದೆ, ನಿದ್ರಾಹೀನತೆಗೂ ಉತ್ತಮ ಮನೆಮದ್ದು. ಮೆಹಂದಿಯನ್ನು ಹಚ್ಚಿದ್ರೆ ಸಾಕಾಗೊಲ್ಲ, ಅದು ಸರಿಯಾಗಿ ಬಣ್ಣ ಬಿಡಬೇಕು. ಎಲ್ಲ ಡಿಸೈನ್ ಸರಿಯಾಗಿ ಮೂಡಬೇಕು. ಅದಕ್ಕಾಗಿ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.
Advertisement
ಮೆಹಂದಿ ಹಚ್ಚಿದ ನಂತರ ಅದರ ನಿರ್ವಹಣೆ.ಮೆಹಂದಿ ಹಚ್ಚಿದ ನಂತರ ಬಟ್ಟೆಗೆ ಮೆಹಂದಿ ತಾಗದಂತೆ ಎಚ್ಚರ ವಹಿಸಬೇಕು.
.ಮೆಹಂದಿ ಹಚ್ಚುವಾಗ ಪಕ್ಕದಲ್ಲಿ ಒಂದು ಕಾಟನ್ ಬಟ್ಟೆಯನ್ನು ಇಟ್ಟುಕೊಳ್ಳಬೇಕು. ಡಿಸೈನ್ ತಪ್ಪಿದಾಗ ಬಟ್ಟೆಯಿಂದ ಒರೆಸಿ ಮತ್ತೂಮ್ಮೆ ಹಾಕಿಕೊಳ್ಳಲು ಸುಲಭವಾಗುತ್ತದೆ.
.ಮೆಹಂದಿ ಹಚ್ಚಿಕೊಳ್ಳುವ ಮುನ್ನ ಕೈಯಲ್ಲಿರುವ ಎಣ್ಣೆ ಮತ್ತು ಜಿಡ್ಡಿನಂಶ ಹೋಗುವಂತೆ ಕೈಯನ್ನು ಸೋಪಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು.
.ಮೆಹಂದಿ ಹಚ್ಚಿದ ನಂತರ ಕನಿಷ್ಠ ಐದರಿಂದ ಆರು ಗಂಟೆಗಳ ಕಾಲ ಮೆಹಂದಿ ಹಚ್ಚಿ ಹಾಗೆ ಬಿಡಬೇಕು.
.ಮೆಹಂದಿ ವಿನ್ಯಾಸವನ್ನು ಸ್ವಲ್ಪ ದಪ್ಪ ಎಳೆಯಲ್ಲಿ ಹಾಕಿದರೆ ಒಳ್ಳೆಯದು, ಆಗ ಮೆಹಂದಿ ಬೇಗ ಮಾಸುವುದಿಲ್ಲ.
.ಮೆಹಂದಿ ಹಚ್ಚಿಕೊಂಡು ಅದು ಒಣಗುವ ಹಂತಕ್ಕೆ ಬಂದಾಗ ಸಕ್ಕರೆ ಮತ್ತು ಲಿಂಬೆಹಣ್ಣಿನ ರಸವನ್ನು ಸಮನಾಗಿ ಮಿಶ್ರಣ ಮಾಡಿ ಸ್ವಲ್ಪ ಮಟ್ಟಿಗೆ ಬೆಚ್ಚಗೆ ಕಾಯಿಸಿ ಮೆಹಂದಿ ಹಚ್ಚಿದ ಭಾಗಕ್ಕೆ ಚಿಮುಕಿಸಿ. ಅರ್ಧ ಗಂಟೆಗೊಂದು ಸಾರಿ ಈ ರೀತಿ ಮಾಡುತ್ತಿದ್ದರೆ ಮೆಹಂದಿಯ ಬಣ್ಣ ಗಾಢವಾಗುತ್ತದೆ.
.ಮೆಹಂದಿ ಹಚ್ಚಿಕೊಂಡ ನಂತರ ಅದು ಆರಿದ ಮೇಲೆ ಅದನ್ನು ನಿಧಾನವಾಗಿ ಕೆರೆದು ತೆಂಗಿನೆಣ್ಣೆ ಹಚ್ಚಬೇಕು. ಇದರಿಂದ ಕೂಡ ಗಾಢ ವರ್ಣ ಬರುತ್ತದೆ.
.ಮದುಮಗಳಿಗೆ ಮದುವೆ ಒಂದೆರಡು ದಿನ ಮೊದಲೇ ಮೆಹಂದಿ ಹಾಕಿದರೆ ಅದರ ಬಣ್ಣ ತೆಳು ಕಿತ್ತಳೆಯಿಂದ, ಕಡುಕೆಂಪು ಬಣ್ಣಕ್ಕೆ ತಿರುಗುತ್ತದೆ.
.ಮೆಹಂದಿ ಹಚ್ಚಿಕೊಂಡ ನಂತರ ಒಂದು ದಿನದ ಮಟ್ಟಿಗೆ ಮೆಹಂದಿ ಹಾಕಿದ ಭಾಗವನ್ನು ಸೋಪು ಹಾಕಿ ತೊಳೆಯಬಾರದು. – ಸ್ವಾತಿ