ಜಮ್ಮು-ಕಾಶ್ಮೀರ: ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲ ಗೃಹ ಬಂಧನದಲ್ಲಿದ್ದ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿಯನ್ನು ಬಿಡುಗಡೆ ಮಾಡಲಾಗಿದೆ.
ಮಹತ್ವದ ಬೆಳವಣಿಗೆಯಲ್ಲಿ ಅ. 14ರ ರಾತ್ರಿ 9.45 ರ ಸುಮಾರಿಗೆ ಮೆಹಬೂಬಾ ಮುಫ್ತಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ, ಸಾರ್ವಜನಿಕ ಸುರಕ್ಷತೆ ಕಾಯ್ದೆಯಡಿ (ಪಿಎಸ್ ಐ) ಮೆಹಬೂಬಾ ಮುಫ್ತಿ ಗೃಹ ಬಂಧನಕ್ಕೆ ಗುರಿಯಾಗಿದ್ದರು. ಇದೀಗ ಬರೊಬ್ಬರಿ 14 ತಿಂಗಳ ಬಳಿಕ ಬಿಡುಗಡೆಯಾಗಿದ್ದಾರೆ. ಈ ಕುರಿತು ಜಮ್ಮು ಕಾಶ್ಮೀರ ಆಡಳಿತದ ಮುಖ್ಯ ಕಾರ್ಯದರ್ಶಿ ರೋಹಿತ್ ಕನ್ಸಾಲ್ ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ.
ಇದನ್ನೂ ಓದಿ: ಸಗಣಿ ಚಿಪ್‌ನಿಂದ ತಗ್ಗುತ್ತದೆ ಮೊಬೈಲ್ ರೇಡಿಯೇಷನ್
Related Articles
ಈ ಹಿಂದೆ ಜಮ್ಮು ಕಾಶ್ಮೀರದ ಆಡಳಿತ ಮೆಹಬೂಬಾ ಮುಫ್ತಿ ಅವರ ಬಂಧನದ ಅವಧಿಯನ್ನು ಎರಡು ಸಲ ವಿಸ್ತರಣೆ ಮಾಡಿತ್ತು. ಇದನ್ನು ಪ್ರಶ್ನಿಸಿ ಅವರ ಪುತ್ರಿ ಇಲ್ತಿಜಾ ಮುಫ್ತಿ ಸುಪ್ರೀಂಕೋರ್ಟ್ ನಲ್ಲಿ ಕಾಶ್ಮೀರದ ಆಡಳಿತ ಮತ್ತು ಕೇಂದ್ರ ಸರ್ಕಾರ ವಿರುದ್ಧ ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಸೆ. 29ರಂದು ಇದರ ವಿಚಾರಣೆ ನಡೆಸಿತ್ತು. ಅದರಂತೆ ಮೆಹಬೂಬಾ ಮುಫ್ತಿ ಅವರ ಗೃಹ ಬಂಧನದ ಕುರಿತು ಉತ್ತರ ನೀಡುವಂತೆ ಸುಪ್ರೀಂಕೋರ್ಟ್ ಎರಡು ವಾರಗಳ ಗಡುವು ನೀಡಿತ್ತು. ಈ ಅವಧಿ ಮುಗಿಯುವ ಮುನ್ನವೇ ಮೆಹಬೂಬಾ ಮುಫ್ತಿ ಅವರನ್ನು ಗೃಹ ಬಂಧನದಿಂದ ಬಿಡುಗಡೆ ಮಾಡಲಾಗಿದೆ.