ಶ್ರೀನಗರ :ಸುಪ್ರೀಂ ಕೋರ್ಟ್‌ನಲ್ಲಿ 370 ನೇ ವಿಧಿಯ ನಿರ್ಧಾರಕ್ಕೆ ಮುಂಚಿತವಾಗಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಗೃಹ ಬಂಧನ ಕುರಿತು ಪಿಡಿಪಿ ಟ್ವಿಟರ್ ‘X’ ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು ಇದರಲ್ಲಿ “ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸುವ ಮುನ್ನವೇ, ಪೊಲೀಸರು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರ ನಿವಾಸದ ಬಾಗಿಲುಗಳನ್ನು ಮುಚ್ಚಿದ್ದಾರೆ ಮತ್ತು ಅವರನ್ನು ಅಕ್ರಮ ಗೃಹಬಂಧನದಲ್ಲಿ ಇರಿಸಿದ್ದಾರೆ” ಎಂದು ಪೋಸ್ಟ್ ಮಾಡಿದೆ.
ಏತನ್ಮಧ್ಯೆ, ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಮತ್ತು ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಅವರ ಗುಪ್ಕರ್ ನಿವಾಸದ ಬಳಿ ಪತ್ರಕರ್ತರಿಗೆ ಸೇರಲು ಪೊಲೀಸರು ಅವಕಾಶ ನೀಡಲಿಲ್ಲ ಎಂದೂ ಟ್ವಿಟರ್ x ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆದರೆ ಪಿಡಿಪಿ ಮಾಡಿರುವ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಆರ್ಟಿಕಲ್ 370 ಕುರಿತು ಸುಪ್ರೀಂ ಕೋರ್ಟ್‌ನ ತೀರ್ಪು ಬರುವ ಮೊದಲು ಯಾರನ್ನೂ ಗೃಹಬಂಧನಲ್ಲಿ ಇಡಲಾಗಿಲ್ಲ ಪಿಡಿಪಿ ಹೇಳಿರುವ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ ಬಂಧನದ ಸುದ್ದಿ ‘ಸಂಪೂರ್ಣವಾಗಿ ಆಧಾರರಹಿತ’ ಎಂದು ಹೇಳಿದರು.
ಒಮರ್ ಅಬ್ದುಲ್ಲಾ ಅವರು ಅಕ್ಟೋಬರ್ 2020 ರಲ್ಲಿ ತಮ್ಮ ಅಧಿಕೃತ ನಿವಾಸವನ್ನು ಖಾಲಿ ಮಾಡಿದ ನಂತರ ತಮ್ಮ ತಂದೆಯೊಂದಿಗೆ ವಾಸಿಸುತ್ತಿದ್ದಾರೆ. ಶ್ರೀನಗರದ ಸಂಸತ್ ಸದಸ್ಯ ಆಗಿರುವ ಫಾರೂಕ್ ಅಬ್ದುಲ್ಲಾ ಅವರು ಸಂಸತ್ ಅಧಿವೇಶನಕ್ಕಾಗಿ ದೆಹಲಿಯಲ್ಲಿದ್ದರೆ, ಅವರ ಮಗ ಶ್ರೀನಗರದಲ್ಲಿದ್ದಾರೆ.