ಕನ್ನಡ ಚಿತ್ರರಂಗದಲ್ಲಿ ಕನ್ನಡಕ್ಕಿಂತ ಹೆಚ್ಚಾಗಿ ಪರಭಾಷೆಯ ನಟಿಯರೇ ದೊಡ್ಡ ಸಂಖ್ಯೆಯಲ್ಲಿ ಕಾಣುತ್ತಾರೆ ಎಂಬ ಆರೋಪ ನಿಧಾನವಾಗಿ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿದೆ. ಇದಕ್ಕೆ ಪೂರಕವೆಂಬಂತೆ, ಕಳೆದ ವರ್ಷ ಸುಮಾರು ಇನ್ನೂರಕ್ಕೂ ಹೆಚ್ಚಿನ ಕನ್ನಡ ಚಿತ್ರಗಳು ತೆರೆಗೆ ಬಂದಿದ್ದು, ಅದರಲ್ಲಿ ಸುಮಾರು ನೂರೈವತ್ತಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಚ್ಚ ಕನ್ನಡದ ಪ್ರತಿಭೆಗಳೇ ತೆರೆಯ ಮೇಲೆ ಕಾಣಿಸಿಕೊಂಡಿದ್ದವು ಎಂಬುದು ಮತ್ತೂಂದು ಗಮನಾರ್ಹ ಸಂಗತಿ. ಇನ್ನು ಈ ವರ್ಷದ ಆರಂಭದಿಂದಲೂ ಸೆಟ್ಟೇರುತ್ತಿರುವ ಮತ್ತು ಬಿಡುಗಡೆಯಾಗುತ್ತಿರುವ ಬಹುತೇಕ ಚಿತ್ರಗಳಲ್ಲಿ ಕನ್ನಡದ ನವನಟಿಯರ ಹೆಸರೇ ರಾರಾಜಿಸುತ್ತಿದೆ. ಹೀಗೆ ವರ್ಷದ ಏಪ್ರಿಲ್‌ನಲ್ಲಿ ತೆರೆಕಂಡ ಕೃಷ್ಣ ತುಳಸಿ ಚಿತ್ರದ ಮೂಲಕ ನಾಯಕ ನಟಿಯಾಗಿ ಚಂದನವನಕ್ಕೆ ಪರಿಚಯವಾದ ಚೆಲುವೆ ಮೇಘಶ್ರೀ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಮೇಘಶ್ರೀ ಬಾಲ್ಯದ ಶಿಕ್ಷಣದ ನಂತರ, ಪೋಷಕರ ಜತೆ ಮುಖ ಮಾಡಿದ್ದು ಬೆಂಗಳೂರಿನತ್ತ. ಅಭಿನಯದ ಕಡೆಗಿದ್ದ ಆಸಕ್ತಿ, ಸ್ವತ್ಛ ಭಾಷೆಯ ಉಚ್ಚಾರಣೆ, ಜತೆಗೊಪ್ಪುವ ಅಂದ ಈ ಹುಡುಗಿಗೆ ನಿಧಾನವಾಗಿ ಅವಕಾಶಗಳ ಬಾಗಿಲನ್ನು ತೆರೆಯಿತು. ಸಂಚಾರಿ ವಿಜಯ್ ನಾಯಕ ನಟನಾಗಿ ಅಭಿನಯಿಸಿದ ಕೃಷ್ಣ ತುಳಸಿ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ಗಿಟ್ಟಿಸಿಕೊಂಡ ಮೇಘಶ್ರೀ ತನ್ನ ಮೊದಲ ಚಿತ್ರದಲ್ಲೇ ನೋಡುಗರ ಗಮನ ಸೆಳೆಯಲು ಯಶಸ್ವಿಯಾದರು. ಕೃಷ್ಣ ತುಳಸಿ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಅಷ್ಟಾಗಿ ಸದ್ದು ಮಾಡದಿದ್ದರೂ, ಮೇಘಶ್ರೀ ಅಭಿನಯದ ಬಗ್ಗೆ ಎಲ್ಲೆಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿಬಂದವು.
ಕೃಷ್ಣ ತುಳಸಿ ಚಿತ್ರದ ನಂತರ ಮೇಘಶ್ರೀ ಅಭಿನಯಿಸಿರುವ ವಿಜಯ್ ಸೂರ್ಯ ನಾಯಕ ನಟನಾಗಿರುವ ಕದ್ದು ಮುಚ್ಚಿ ಚಿತ್ರ ಕೂಡ ತೆರೆಗೆ ಬರಲು ಸಿದ್ಧವಾಗಿದೆ. ಇದರೊಂದಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ದಶರಥ, ಚಿರಂಜೀವಿ ಸರ್ಜಾ ಅಭಿನಯದ ರಾಜಾ ಮಾರ್ತಾಂಡ, ಯಶಸ್ ಸೂರ್ಯ ಅವರೊಂದಿಗೆ ಅಮೃತವರ್ಷಿಣಿ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕನ್ನಡದ ಜತೆಜತೆಗೆ ತೆಲುಗು ಚಿತ್ರರಂಗದಲ್ಲೂ ಬೇಡಿಕೆ ಪಡೆದುಕೊಳ್ಳುತ್ತಿರುವ ಮೇಘಶ್ರೀ ಎನ್‌ಟಿಆರ್ ಮೊಮ್ಮಗ ತಾರಖ್‌ರತ್ನ ಅವರಿಗೂ ನಾಯಕಿಯಾಗಿ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ತಮ್ಮ ಬಣ್ಣದ ಬದುಕಿನ ಪ್ರಯಾಣದ ಬಗ್ಗೆ ಮಾತನಾಡುವ ಮೇಘಶ್ರೀ, “ನಾನು ನಾಯಕಿಯಾಗಿ ಪ್ರೇಕ್ಷಕರ ಮುಂದೆ ಬರಬೇಕು ಎಂಬುದಕ್ಕಿಂತ ಒಬ್ಬ ನಟಿಯಾಗಿ, ಕಲಾವಿದೆಯಾಗಿ ಪ್ರೇಕ್ಷಕರ ಮನಸ್ಸಿನಲ್ಲಿ ಪಾತ್ರಗಳಲ್ಲಿ ಉಳಿದುಕೊಳ್ಳಬೇಕು. ಒಬ್ಬ ಕಲಾವಿದೆಯಾಗಿ ನನಗೆ ಯಾವುದೇ ಭಾಷೆಯ ಗಡಿಯಿಲ್ಲ. ನನಗೆ ಸೂಕ್ತವೆನಿಸುವ ಮತ್ತು ಸಮರ್ಥವಾಗಿ ನಿರ್ವಹಿಸಬಲ್ಲೆ ಎಂಬ ಪಾತ್ರಗಳು ಸಿಕ್ಕರೆ ಅಂತಹ ಚಿತ್ರಗಳಲ್ಲಿ ಖಂಡಿತ ಅಭಿನಯಿಸುತ್ತೇನೆ. ಪಾತ್ರ ಎಷ್ಟು ದೊಡ್ಡದು, ಚಿಕ್ಕದು ಎನ್ನುವುದಕ್ಕಿಂತ ಅದರ ಪ್ರಾಮುಖ್ಯ ಎಷ್ಟು ಅನ್ನುವುದಷ್ಟೇ ನನಗೆ ಮುಖ್ಯ’ ಎನ್ನುತ್ತಾರೆ ಮೇಘಶ್ರೀ.