“ಚಿರು ಅಗಲಿಕೆ ನೋವು ಮರೆಯೋದು ಅಸಾಧ್ಯ. ಚಿರು ಅಂದ್ರೆ ಸಂಭ್ರಮ – ಸಂತೋಷ. ಚಿರು ಅಂದ್ರೆ ನಗು ಮುಖ. ನನ್ನ ಮಗನನ್ನ ನೋಡಿದಾಗಲೆಲ್ಲ ಚಿರು ಹೇಗೆ ನೋಡಿಕೊಳ್ತಾ ಇದ್ರು ಅನ್ನೋದುಕಣ್ಮುಂದೆ ಬರುತ್ತೆ. ಅವರ ಸೆಲೆಬ್ರೇಷನ್ ಅನ್ನು ನಾನು ಮುಂದುವರಿಸಬೇಕು. ನನ್ನ ಮನೆಯಲ್ಲಿ ಚಿರುಗೆ ಸಂಬಂಧಿಸಿದ ವಸ್ತು ಏನೇ ಇದ್ರೂ ಸೆಲೆಬ್ರೇಷನ್ ಮಾಡ್ತೀವಿ’ ಎಂದು ಚಿರಂಜೀವಿ ಸರ್ಜಾ ನೆನಪುಗಳನ್ನು ಮೆಲುಕು ಹಾಕುತ್ತಾ ಮಾತಿಗಿಳಿದವರು ಮೇಘನಾ ರಾಜ್.
ಬಹುದಿನಗಳ ನಂತರ ಮೇಘನಾ ಮತ್ತು ಚಿರು ಮನೆಯಲ್ಲಿ ಸಂತೋಷ ಮನೆ ಮಾಡಿದೆ. ಅದಕ್ಕೆಕಾರಣ ಮನೆಗೆ ಬಂದಿರುವ ಚಿರು-ಮೇಘನಾ ದಂಪತಿಯ ಮಗು. ಚಿರಂಜೀವಿ ಸರ್ಜಾ ನಿಧನದ ಬಳಿಕ ದುಃಖಕ್ಕೆ ಜಾರಿದ್ದ ಎರಡೂ ಕುಟುಂಬದಲ್ಲಿ ಜೂನಿಯರ್ ಚಿರು ಆಗಮನ ಸಹಜವಾಗಿಯೇ ಖುಷಿ ತಂದಿದೆ. ಹೀಗಾಗಿ ಈ ಖುಷಿಯನ್ನು ಹಂಚಿಕೊಳ್ಳಲು ಮೇಘನಾ ರಾಜ್‌ಕುಟುಂಬ, ಮಗುವಿನ ತೊಟ್ಟಿಲು ಶಾಸ್ತ್ರದ ಸಂಭ್ರಮದ ವೇಳೆಯಲ್ಲಿ, ಮಾಧ್ಯಮಗಳನ್ನು ಮನೆಗೆ ಆಹ್ವಾನಿಸಿತ್ತು. ಈ ವೇಳೆ ಮಾತನಾಡಿದ ಮೇಘನಾ ರಾಜ್, “ತುಂಬ ದಿನಗಳ ನಂತರ ಮಾಧ್ಯಮದ ಮುಂದೆ ಬರ್ತಿದ್ದೀನಿ. ಈ ಸಮಯದಲ್ಲಿ ನಾನು ಹಳೆಯದ್ದನ್ನೆಲ್ಲ ನೆನಪು ಮಾಡೋದಿಲ್ಲ. ಇಂದು ನನ್ನ ಮಗನಿಗೆ ತೊಟ್ಟಿಲು ಶಾಸ್ತ್ರ. ಮನೆಯಲ್ಲಿ ಹೊಸ ಖುಷಿ ಮನೆ ಮಾಡಿದೆ. ನಾನು ಸ್ಟ್ರಾಂಗ್ ಇದೀನೋ, ಇಲ್ವೋ ಅನ್ನೋದು ನನಗೆ ಗೊತ್ತಿಲ್ಲ. ಕೆಲವು ಘಟನೆಗಳು ನಡೆದಾಗ ನಾನು ಸಂಪೂರ್ಣ ಬ್ಲಾಂಕ್ ಆಗಿ ಹೋದೆ’ ಎನ್ನುತ್ತಾ ಭಾವುಕರಾದರು.
ತಮ್ಮ ಮಗುವಿನ ಬಗ್ಗೆ ಮಾತನಾಡಿದ ಮೇಘನಾ, “ನನಗೆ ಹೆಣ್ಣು ಮಗು ಬೇಕು ಅಂತಿದ್ದೆ. ಆದ್ರೆ ಚಿರು ಅದಕ್ಕೆ, ನನ್ಗೆ ಗಂಡು ಮಗುನೇ ಹುಟ್ಟೋದು ಅಂತ ಹೇಳ್ತಿದ್ರು. ಈಗ ಮಗು ನೋಡಿದವರೆಲ್ರೂ ಚಿರು ಜೆರಾಕ್ಸ್‌ಕಾಪಿ ಅಂತಾರೆ. ನನ್ನ ಮಗನಿಗೆ ಅಪ್ಪನ ಬುದ್ಧಿಯೇ ಬಂದಿದೆ. ಅಳುವುದು ತುಂಬಾ ಕಡಿಮೆ. ಯಾವಾಗಲೂ ನಗ್ತಾ ಇರ್ತಾನೆ. ಚಿರುಕೂಡ ಹಾಗೆಯೇ, ಸಿನಿಮಾದಲ್ಲಿ ಸ್ಯಾಡ್ ಸೀನ್ಸ್ ಬಂದ್ರೆ ಅದನ್ನ ಕೂಡಲೇ ಫಾರ್ವಡ್ ಮಾಡ್ತಿದ್ರು. ನನ್ನ ಮಗ ಸ್ಟಾರ್ ಆಗುವುದಕ್ಕಿಂತ ಎಲ್ಲರೂ ಮೆಚ್ಚುವಂತಾಗಬೇಕು’ ಎಂದರು.
ಇನ್ನು ತಮ್ಮ ತಾಯ್ತನದ ಬಗ್ಗೆ ಮಾತನಾಡಿರುವ ಮೇಘನಾ, “ಮಗ ಬಂದ ಮೇಲೆ ನನಗೆ ಜವಾಬ್ದಾರಿ ಜಾಸ್ತಿ ಆಗಿದೆ. ನನ್ನ ಶಕ್ತಿ ಅಂದ್ರೆ ಅದು ನನ್ನ ಮಗ. ತವರು ಮನೆ ಕಡೆಯಿಂದ ತೊಟ್ಟಿಲು ಶಾಸ್ತ್ರವನ್ನು ಮಾಡಿದ್ದಾರೆ.
ಆದಷ್ಟು ಬೇಗ ಮಗನ ನಾಮಕರಣವನ್ನು ಮಾಡ್ತೀವಿ. ಚಿರು ಮಗ ಆಗಿರೋದ್ರಿಂದ ಜಾತಕ ನೋಡಿಕೊಂಡು ಸ್ಪೆಷಲ್ ಹೆಸರು ಇಡ್ಬೇಕು ಅಂತ ಆಸೆ ಇದೆ. ನಾವು ಇಡುವ ಹೆಸರು ಅವ್ರಿಗೆ ಒಳ್ಳೆಯದಾಗುವ ರೀತಿ ಇರಬೇಕು’ ಎಂದರು. “ನನ್ನ ಮತ್ತು ಚಿರುನ ಎಲ್ರೂ ಮನೆ ಮಕ್ಕಳ ಥರಕಂಡ್ರು. ಚಿರು ತೀರಿ ಹೋದಾಗ ಯಾರೂ ಸ್ಟಾರ್ ಅಂತ ಬರಲಿಲ್ಲ. ಒಬ್ಬ ಮಗ ಅಂತ ಬಂದು ಸಾಂತ್ವಾನ ಹೇಳಿದ್ರು. ಈಗಲೂ ನನ್ನ ಪಿಲ್ಲರ್ ಆಫ್ ಸ್ಟ್ರೆಂಥ್ ಅಂದ್ರೆ ಅದು ನನ್ನ ತಾಯಿ-ತಂದೆ. ಕಳೆದ ಐದು ತಿಂಗಳಿನಿಂದ ಮನೆಯಲ್ಲಿ ನನ್ನ ಸ್ನೇಹಿತರೂ ಇರುತ್ತಿದ್ದರು ಎಲ್ಲರೂ ಧೈರ್ಯ ತುಂಬುತ್ತಿದ್ದರು.ಕನ್ನಡ ಸಿನಿಮಾ ಇಂಡಸ್ಟ್ರಿ ನನ್ನಕುಟುಂಬಕ್ಕೆ ಧೈರ್ಯ ತುಂಬಿದೆ. ಎಲ್ಲರಿಗೂ ಈ ಸಮಯದಲ್ಲಿ ಧನ್ಯವಾದ ಅರ್ಪಿಸುತ್ತೇನೆ’ ಎಂದರು.
“ಚಿರು ಬದುಕಿದ್ದಾಗಕೆಲ ಸಿನಿಮಾಗಳನ್ನ ಮಾಡ್ಬೇಕು ಅಂತ ನಾನು ಚಿರು ಮಾತನಾಡಿಕೊಂಡಿದ್ವಿ. ಅದು ಮುಂದುವರಿಯುತ್ತೆ. ಆದ್ರೆ ಸದ್ಯ ನನ್ನ ಗಮನ ನನ್ನ ಮಗನ ಕಡೆ ಇದೆ’ ಎಂದಿದ್ದಾರೆ ಮೇಘನಾ.
-ಜಿ. ಎಸ್. ಕಾರ್ತಿಕ ಸುಧನ್