ಮೂಡಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಜು. 6ರಂದು ‘ಆಳ್ವಾಸ್ ಪ್ರಗತಿ 2018’-10ನೇ ವರ್ಷದ ಬೃಹತ್ ಉದ್ಯೋಗ ಮೇಳವು ವಿದ್ಯಾಗಿರಿಯ ಆಳ್ವಾಸ್ ಕಾಲೇಜಿನ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯಲಿದೆ. 600 ಹೆಸರಾಂತ ಕಂಪೆನಿಗಳು ಭಾಗವಹಿಸಲಿವೆ. 2 ಸಾವಿರಕ್ಕೂ ಅಧಿಕ ಉದ್ಯೋಗಾವಕಾಶಗಳಿವೆ. ನೋಂದಣಿ ಉಚಿತ. ಆಯ್ಕೆ ಪ್ರಕ್ರಿಯೆ ವ್ಯವಸ್ಥಿತ, ಅತ್ಯಂತ ಪಾರದರ್ಶಕವಾಗಿ ನಡೆಯಲಿದ್ದು ವಿವಿಧ ಜಿಲ್ಲೆಗಳಿಂದ 12 ಸಾವಿರ ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಐಟಿಐ, ಪಿಯುಸಿ, SSLC ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದೆಲ್ಲ ಉದ್ಯೋಗಾಂಕ್ಷಿಗಳಿಗೆ ಮಾತ್ರ ಆನ್ ಲೈನ್ ಮೂಲಕ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.
ನೋಂದಣಿ ಪ್ರಕ್ರಿಯೆಯು ಜುಲೈ 6ರವರೆಗೆ ಮಾತ್ರ ಚಾಲ್ತಿಯಲ್ಲಿದ್ದು ಜು.7ರಂದು ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮಾತ್ರ ನಡೆಯಲಿದೆ. ದೂರದ ಊರುಗಳಿಂದ ಆಗಮಿಸುವ ಉದ್ಯೋ ಗಾಕಾಂಕ್ಷಿಗಳಿಗೆ ಉಚಿತ ವಸತಿ ಸೌಕರ್ಯ ಏರ್ಪಡಿಸಿದೆ ಎಂದು ಹೇಳಿದರು.
ದ.ಕ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಉದ್ಯೋಗ ಮೇಳವನ್ನು ಉದ್ಘಾಟಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಉಮಾನಾಥ್ ಕೋಟ್ಯಾನ್, ಮಾಜಿ ಸಚಿವರಾದ ಕೆ. ಅಭಯಚಂದ್ರ, ಕೆ. ಅಮರನಾಥ್ ಶೆಟ್ಟಿ ಅತಿಥಿಗಳಾಗಿರುವರು. ಸಮಾರಂಭದಲ್ಲಿ ಐಟಿಸಿ ಲಿಮಿಟೆಡ್‌ನ ಸೀನಿಯರ್ ಮ್ಯಾನೇಜರ್ ಎಚ್.ಆರ್. ಶ್ರೀನಿವಾಸ ರೈ, ಎಂಫಸಿಸ್ ಕಂಪೆನಿಯ ಸೀನಿಯರ್ ಮ್ಯಾನೇಜರ್ ಎಚ್.ಆರ್. ವಿದ್ಯಾರಣ್ಯ ಕೊಲ್ಲಿಪಾಲ್, ಯುಎಇ ಎಕ್ಸ್‌ಚೇಂಜ್ ನ ಎಚ್.ಆರ್. ಗಣೇಶ್ ರವಿ ಮೂಡಬಿದಿರೆ ಅವರನ್ನು ಸಮ್ಮಾನಿಸಲಾಗುತ್ತಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಪ್ಲೇಸ್‌ಮೆಂಟ್ ಅಧಿಕಾರಿ ಸುಶಾಂತ್ ಅನಿಲ್ ಲೋಬೊ, ಆಳ್ವಾಸ್ ಪಿಆರ್‌ಒ ಡಾ| ಪದ್ಮನಾಭ ಶೆಣೈ, ಸಂಯೋಜಕ ಪ್ರಸಾದ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿದ್ದರು.
ಹೆಚ್ಚಿನ ಮಾಹಿತಿ / ನೋಂದಣಿಗಾಗಿ: //alvaspragati.com/Candidate RegistrationPage