ಆಕಾಶದಿಂದಿಳಿದ ಮೇಘ ಮಯೂರಿ ಈಕೆ. ಬರೀ ಒಂದೇ ವರ್ಷದಲ್ಲಿ ತಮಿಳು ಚಿತ್ರರಂಗಕ್ಕೆ ಮೋಡಿ ಮಾಡಿ ಈಗ ನೇರವಾಗಿ ಬಾಲಿವುಡ್ ಅಂಗಳಕ್ಕೆ ಜಿಗಿದು ಬಂದಿದ್ದಾಳೆ. ಈಕೆಯೇ ಮೇಘಾ ಆಕಾಶ್. ಕಳೆದ ವರ್ಷವಷ್ಟೇ ಮೇಘಾ ಲೈ ಎಂಬ ತಮಿಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ್ದಳು. ಅದೃಷ್ಟ ಅವಳ ಕಡೆಗಿರುವುದರಿಂದ ಒಂದೇ ಚಿತ್ರದ ಮೂಲಕ ಆಕೆ ತಮಿಳು ಚಿತ್ರರಂಗದಲ್ಲಿ ಪ್ರಸಿದ್ಧಳಾದಳು. ಇದರ ಬೆನ್ನಿಗೆ ಸಾಲು ಸಾಲು ಚಿತ್ರಗಳು ಬರತೊಡಗಿದವು. ಈ ವರ್ಷವೊಂದರಲ್ಲಿ ಮೇಘಾ ತಮಿಳು ಮತ್ತು ತೆಲುಗು ಸೇರಿ ನಾಲ್ಕು ಚಿತ್ರಗಳಲ್ಲಿ ನಟಿಸುತ್ತಿದ್ದಾಳೆ. ಇಷ್ಟು ಮಾತ್ರವಲ್ಲ ಮುಂದಿನ ಎರಡು ವರ್ಷ ಬಿಡುವಿಲ್ಲದೆ ದುಡಿಯುವಷ್ಟು ಚಿತ್ರಗಳು ಅವಳ ಕೈಯಲ್ಲಿವೆ. ಈ ನಡುವೆಯೇ ಬಾಲಿವುಡ್ ಅವಳನ್ನು ಕೈಬೀಸಿ ಕರೆದಿದೆ. ಟಿ-ಸಿರೀಸ್ ಮತ್ತು ಸಿನೆ 1 ಸ್ಟುಡಿಯೋಸ್ ಜತೆಯಾಗಿ ನಿರ್ಮಿಸುತ್ತಿರುವ ಬಿಗ್ ಬಜೆಟ್ ಚಿತ್ರ ಸೆಟಲೈಟ್ ಶಂಕರ್‌ಗೆ ಮೇಘಾ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ. ಸೂರಜ್ ಪಾಂಚೋಲಿ ಈ ಚಿತ್ರದ ನಾಯಕ. ಸೂರಜ್‌ಗೆ ಇದರಲ್ಲಿ ಸೈನಿಕನ ಪಾತ್ರ. ಹತ್ತು ರಾಜ್ಯಗಳಲ್ಲಿ ಚಿತ್ರೀಕರಿಸಲ್ಪಡುವ ಚಿತ್ರ ಎಂಬ ಹಿರಿಮೆಯೂ ಇದಕ್ಕಿದೆ. ದೊಡ್ಡ ಬಜೆಟ್, ದೊಡ್ಡ ಹೀರೊ, ದೊಡ್ಡ ನಿರ್ದೇಶಕ- ಹೀಗೆ ಎಲ್ಲವೂ ದೊಡ್ಡದಾಗಿರುವ ಚಿತ್ರದ ನಾಯಕಿ ಯಾರು ಎನ್ನುವ ಕುತೂಹಲ ಕಡೆತನಕ ಇತ್ತು. ಅದು ಮೇಘಾ ಆಕಾಶ್ ಎಂದು ಘೋಷಣೆಯಾದಾಗ ಯಾರೀ ಅದೃಷ್ಟವಂತೆ ಎಂದು ಹುಬ್ಬೇರಿಸಿದವರೇ ಹೆಚ್ಚು. ಏಕೆಂದರೆ ಅಷ್ಟರ ತನಕ ಬಹುತೇಕ ಮಂದಿ ಬಾಲಿವುಡ್‌ನಲ್ಲಿ ಈ ಹುಡುಗಿಯ ಹೆಸರು ಕೇಳಿರಲಿಲ್ಲ. ಮೇಘಾಳ ಅದೃಷ್ಟ ಇಲ್ಲಿಗೆ ಮುಗಿದಿಲ್ಲ. ರಜನೀಕಾಂತ್ ನಾಯಕನಾಗಿರುವ ಪೆಟ್ಟ ಎಂಬ ತಮಿಳು ಚಿತ್ರಕ್ಕೂ ಅವಳು ಆಯ್ಕೆಯಾಗಿದ್ದಾಳೆ. ಹೀಗೆ ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿದ್ದಾಳೆ ಮೇಘಾ.