Advertisement

ಮೆಗ್ಗಾನ್‌ ಸೇರಿ ಸರ್ಕಾರಿ ಆಸ್ಪತ್ರೆಗಳ ದುಸ್ಥಿತಿ ಪ್ರತಿಧ್ವನಿ

12:01 PM Jun 07, 2017 | Harsha Rao |

ವಿಧಾನಸಭೆ: ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಇತ್ತೀಚೆಗೆ ಸ್ಟ್ರೆಚರ್‌ ಸಿಗದೆ ವಯೋವೃದ್ಧ ರೋಗಿಯನ್ನು ಅವರ
ಪತ್ನಿ ನೆಲದಲ್ಲಿ ಎಳೆದುಕೊಂಡು ಹೋದ ಪ್ರಕರಣ ಸೇರಿ ಸರ್ಕಾರಿ ಆಸ್ಪತ್ರೆಗಳ ದುಸ್ಥಿತಿ ಕುರಿತು ಸದನದಲ್ಲಿ ಗಂಭೀರ ಚರ್ಚೆ ನಡೆಯಿತಲ್ಲದೆ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿಗೂ ಎಡೆಮಾಡಿಕೊಟ್ಟಿತು.

Advertisement

ಶೂನ್ಯ ವೇಳೆಯಲ್ಲಿ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌, ಮೆಗ್ಗಾನ್‌ ಆಸ್ಪತ್ರೆ ಸಿಬ್ಬಂದಿ ಸ್ಟ್ರೆಚರ್‌ ಒದಗಿಸದ ಕಾರಣ ರೋಗಿಯೊಬ್ಬರನ್ನು ಅವರ ಪತ್ನಿ ಎಕ್ಸರೇಗಾಗಿ ನೆಲದಲ್ಲಿ ಎಳೆದುಕೊಂಡು ಹೋಗಿರುವ ವರದಿ ಬಗ್ಗೆ ಪ್ರಸ್ತಾಪಿಸಿ,
“ಇದಕ್ಕೆ ಯಾರು ಜವಾಬ್ದಾರಿ? ತಪ್ಪಿತಸ್ಥರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ’ ಎಂದು ಸರ್ಕಾರವನ್ನು ಪ್ರಶ್ನಿಸಿದರು.
ಬೌರಿಂಗ್‌ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಸರಿಯಾಗಿ ಚಿಕಿತ್ಸೆ ನೀಡದೆ ಅವರು ರಾತ್ರಿಯಿಡೀ ಆಸ್ಪತ್ರೆಯಲ್ಲಿ ಕಾಲ ಕಳೆದಿದ್ದು, ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಯೊಬ್ಬರಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷಿಸಿರುವುದು ಮುಂತಾದ ಘಟನೆಗಳನ್ನು ಪ್ರಸ್ತಾಪಿಸಿ, ಸರ್ಕಾರ ಜನರ ಮನೆಬಾಗಿಲಿಗೆ ಆರೋಗ್ಯ ಸೇವೆ ಒದಗಿಸುತ್ತೇವೆ, ತಜ್ಞ ವೈದ್ಯರನ್ನು ಕಳುಹಿಸುತ್ತೇವೆ ಎಂದು ಹೇಳುತ್ತಿದ್ದು, ಇದು ಜಾಹೀರಾತಿಗಷ್ಟೇ ಸೀಮಿತವಾಗಿದೆ.

ಬಹುತೇಕ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವೈದ್ಯಕೀಯ
ಶಿಕ್ಷಣ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌, ಮೆಗ್ಗಾನ್‌ ಆಸ್ಪತ್ರೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಹಲವರನ್ನು
ಅಮಾನತುಗೊಳಿಸಲಾಗಿದೆ. ಜವಾಬ್ದಾರಿ ಹೊಂದಿದ್ದ ವೈದ್ಯರಿಗೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಶೆಟ್ಟರ್‌ ಮಾಡಿದ ಟೀಕೆಗೆ ಸಚಿವರು ಆಕ್ಷೇಪಿಸಿ, ಯಾವುದೋ ಒಂದು ಘಟನೆಯನ್ನು ನೆಪ ಮಾಡಿಕೊಂಡು ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದರು.
ಇದರಿಂದ ಕೆರಳಿದ ಬಿಜೆಪಿಯ ಸಿ.ಟಿ. ರವಿ, ಬಸವರಾಜ ಬೊಮ್ಮಾಯಿ, ಡಿ.ಎನ್‌.ಜೀವರಾಜ್‌ ಮತ್ತಿತರರು, ನಾವು
ಸರ್ಕಾರದ ಬಗ್ಗೆ ಮಾತನಾಡುತ್ತಿಲ್ಲ. ಆಸ್ಪತ್ರೆಗಳ ಸಮಸ್ಯೆಗಳ ಬಗ್ಗೆ ಹೇಳುತ್ತಿದ್ದೇವೆ.

ಸಚಿವರು ಇದನ್ನು ಅರ್ಥ ಮಾಡಿಕೊಂಡು ಮಾತನಾಡಬೇಕೇ ಹೊರತು ಪ್ರತಿಪಕ್ಷಗಳು ಆಕ್ಷೇಪ ಎತ್ತಿದೆ ಎಂಬ ಕಾರಣಕ್ಕೆ ಸಮರ್ಥನೆ ಮಾಡಿಕೊಳ್ಳುವುದು ಸರಿಯಲ್ಲ ಎಂದರು. ಇದರಿಂದಾಗಿ ಸಚಿವ ಶರಣಪ್ರಕಾಶ್‌ ಪಾಟೀಲ್‌ ಮತ್ತು ಬಿಜೆಪಿ ಸದಸ್ಯರ ಮಧ್ಯೆ ವಾಗ್ವಾದ ನಡೆಯಿತು. ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಸೌಲಭ್ಯಗಳು ಸಿಗುತ್ತವೆ. ಬೇಕಿದ್ದರೆ ನೀವೂ ಜತೆಗೆ ಬನ್ನಿ, ಹೋಗಿ ಪರಿಶೀಲಿಸೋಣ ಎಂದು ಸಚಿವರು ಹೇಳಿದಾಗ, ಘಟನೆ ನಡೆದ ಬಳಿಕ ಇದುವರೆಗೆ ಮೆಗ್ಗಾನ್‌
ಆಸ್ಪತ್ರೆಗೆ ಭೇಟಿ ನೀಡದ ಸಚಿವರು ಈಗ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಹೋಗೋಣ ಎಂದು ಕರೆಯುತ್ತಿದ್ದಾರೆ. ಮೊದಲು ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಿ ಎಂದು ಬಿಜೆಪಿ ಸದಸ್ಯರು ಒತ್ತಾಯಿಸಿದರು. ಇಬ್ಬರ ಮಧ್ಯೆ ಸ್ವಲ್ಪ ಹೊತ್ತು ಮಾತಿನ ಚಕಮಕಿಯೂ ನಡೆಯಿತು.

ಸ್ಪೀಕರ್‌ ಕೆ.ಬಿ.ಕೋಳಿವಾಡ ಮಧ್ಯ ಪ್ರವೇಶಿಸಿ, ಸಚಿವರು ಮತ್ತು ಬಿಜೆಪಿ ಸದಸ್ಯರನ್ನು ಸಮಾಧಾನಿಸಲು ಯತ್ನಿಸಿದರೂ
ಪ್ರಯೋಜನವಾಗಲಿಲ್ಲ. ಇದರಿಂದ ಎದ್ದುನಿಂತ ಅವರು, “ನಾನು ಎದ್ದುನಿಂತ ಬಳಿಕವೂ ಮಾತು ಮುಂದುವರಿಸಿದರೆ ಅದನ್ನು ಅಶಿಸ್ತು ಎಂದು ಪರಿಗಣಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ ಬಳಿಕ ಗದ್ದಲ ತಹಬದಿಗೆ ಬಂತು.

Advertisement

ಖಾಸಗಿ ಆಸ್ಪತ್ರೆಗಳ ದಂಧೆ ಬಗ್ಗೆ ತುಟಿಬಿಚ್ಚುತ್ತಾರಾ?: ರಮೇಶ್‌ಕುಮಾರ್‌
ವಿಧಾನಸಭೆ: ಮೆಗ್ಗಾನ್‌ ಆಸ್ಪತ್ರೆ ಸೇರಿ ಕೆಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಇತ್ತೀಚೆಗೆ ಬೆಳಕಿಗೆ ಬಂದ ಕೆಲವು ಆಘಾತಕಾರಿ ಸಂಗತಿಗಳನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ. ಸರ್ಕಾರಿ ಆಸ್ಪತ್ರೆಗಳೆಲ್ಲವೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಹೇಳುವ ಧೈರ್ಯವೂ ನನಗಿಲ್ಲ. ಆದರೆ, ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಮಾತನಾಡುತ್ತಿರುವವರು ಖಾಸಗಿ
ಆಸ್ಪತ್ರೆಗಳಲ್ಲಿ ನಡೆಯುವ ಅವ್ಯವಹಾರಗಳ ಬಗ್ಗೆ ಯಾಕೆ ತುಟಿ ಬಿಚ್ಚುತ್ತಿಲ್ಲ! ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್‌
ಪಾಟೀಲ್‌ ಅವರು ಸರ್ಕಾರಿ ಆಸ್ಪತ್ರೆಗಳ ಕಾರ್ಯ ವೈಖರಿಯನ್ನು ಸಮರ್ಥಿಸಿಕೊಂಡ ಸಂದರ್ಭದಲ್ಲಿ ಆರೋಗ್ಯ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ಅವರು ಪ್ರತಿಕ್ರಿಯಿಸಿದ್ದು ಹೀಗೆ.

ಇಂಥ ವಿಚಾರಗಳಲ್ಲಿ ಆಡಳಿತ ಪಕ್ಷ, ಪ್ರತಿ ಪಕ್ಷಗಳ ಪ್ರಶ್ನೆ ಬರಬಾರದು. ಬಡವರು ಸರ್ಕಾರಿ ಆಸ್ಪತ್ರೆಯನ್ನೇ ನಂಬಿರುವಾಗ ನಾವು ಜಾಗ್ರತೆಯಿಂದ ಕೆಲಸ ನಿರ್ವಹಿಸಬೇಕು. ಅದಕ್ಕಾಗಿ ಕ್ರಾಂತಿಕಾರಕ ನಿರ್ಧಾರಗಳನ್ನು ಕೈಗೊಳ್ಳುವಾಗ ಎಲ್ಲರೂ ಬೆಂಬಲಿಸಬೇಕು ಎಂದರು. ಆರೋಗ್ಯ ಪರೀಕ್ಷೆ, ಚಿಕಿತ್ಸೆ, ಶಸ್ತ್ರಚಿಕಿತ್ಸೆ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳು ಜನರಿಂದ ಬೇಕಾಬಿಟ್ಟಿ ಹಣ ಪಡೆಯುತ್ತವೆ. ಅದಕ್ಕೆ ಕಡಿವಾಣ ಹಾಕಲು 2007ರಲ್ಲಿ ಕಾಯ್ದೆ ಜಾರಿಗೆ ತಂದರೂ ಅದನ್ನು ಸಮರ್ಪಕವಾಗಿ ಜಾರಿಗೊಳಿಸಲು ಸಾಧ್ಯವಾಗಿಲ್ಲ. ಇದರ ಅನುಕೂಲ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಗಳು ಇನ್ನಷ್ಟು ದಂಧೆ ಮಾಡುತ್ತಿವೆ. ಯಾರಾದರೂ ಆಸ್ಪತ್ರೆಯಲ್ಲಿ ಮೃತರಾದರೆ ಬಿಲ್‌ ಪಾವತಿಸದೆ ಮೃತದೇಹವನ್ನೂ ಕೊಡುವುದಿಲ್ಲ. ಈ ವಿಚಾರಗಳ ಬಗ್ಗೆ ಯಾರಾದರೂ ಬಾಯಿ ತೆರೆಯುತ್ತಾರೆಯೇ ಎಂದು ಪ್ರಶ್ನಿಸಿದರು.

ಸರ್ಕಾರಿ ಆಸ್ಪತ್ರೆಗಳ ಸುಧಾರಣೆಗೆ ಕೆಲವೊಂದು ಕ್ರಾಂತಿಕಾರಿ ನಿರ್ಧಾರ ತೆಗೆದುಕೊಳ್ಳಲು ಮುಂದಾದರೆ ಅದಕ್ಕೆ ಬೇರೆ ಬೇರೆ ರೀತಿಯ ಪ್ರತಿರೋಧ ಬರುತ್ತದೆ. ಸಾಕಷ್ಟು ವೇತನ ನೀಡುತ್ತೇವೆ ಎಂದು ಹೇಳಿದರೂ ವೈದ್ಯರು ಸರ್ಕಾರಿ ಸೇವೆಗೆ ಮುಂದೆಬಾರದ ಪರಿಸ್ಥಿತಿ ಇದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌ ಮತ್ತು ಬಿಜೆಪಿ ಸದಸ್ಯ ಬಸವರಾಜ ಬೊಮ್ಮಾಯಿ, ಆರೋಗ್ಯ ಇಲಾಖೆ ಸುಧಾರಣೆಗಾಗಿ ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಈ ವಿಚಾರದಲ್ಲಿ ನೀವು ಮುಂದುವರಿಯಿರಿ ಎಂದು ಸಲಹೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next