Advertisement

ದೇವೇಗೌಡರ 3ನೇ ತಲೆಮಾರು ರಾಜಕೀಯ ಪ್ರವೇಶ ತಡೆಗೆ ಮೆಗಾಪ್ಲಾನ್‌

12:53 AM Feb 06, 2019 | Team Udayavani |

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೂರನೇ ತಲೆಮಾರು ಸಕ್ರಿಯ ರಾಜಕಾರಣ ಪ್ರವೇಶ ತಡೆಯೊಡ್ಡುವ ಜತೆಗೆ ಗೌಡರ ಕುಟುಂಬವನ್ನು ಹಾಸನ ಹಾಗೂ ರಾಮನಗರ ಜಿಲ್ಲೆಗೆ ಸೀಮಿತಗೊಳಿಸಲು ಕಾಂಗ್ರೆಸ್‌ ಹಾಗೂ ಬಿಜೆಪಿಯ ಕೆಲ ನಾಯಕರು ಕಾರ್ಯತಂತ್ರ ಹಣೆದಿದ್ದಾರೆ.

Advertisement

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ನಿಖೀಲ್‌ ಹಾಗೂ ಹಾಸನದಲ್ಲಿ ಪ್ರಜ್ವಲ್‌ ಸ್ಪರ್ಧಿಸದಂತೆ ನೋಡಿಕೊಳ್ಳುವುದು, ದೇವೇಗೌಡರು ಹಾಸನದಲ್ಲೇ ಸ್ಪರ್ಧಿಸುವ ಅನಿವಾರ್ಯತೆ ಸೃಷ್ಟಿಸುವ ಪ್ರಯತ್ನ ತೆರೆಮರೆಯಲ್ಲಿ ನಡೆಯುತ್ತಿದ್ದು, ಅದರ ಭಾಗವಾಗಿಯೇ ಮಂಡ್ಯದಲ್ಲಿ ಸುಮಲತಾ ಹೆಸರು ಚಾಲ್ತಿಗೆ ಬಂದು, ಹಾಸನದಲ್ಲಿ ದೇವೇಗೌಡರೇ ಸ್ಪರ್ಧೆ ಮಾಡಿದರಷ್ಟೇ ನಮ್ಮ ಬೆಂಬಲ ಎಂಬ ಕಾಂಗ್ರೆಸ್‌ ನಾಯಕರ ಹೇಳಿಕೆ ಹೊರಬಿದ್ದಿದೆ.

ತುಮಕೂರು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಹೇಳಿರುವುದರ ಹಿಂದೆಯೂ ಅಲ್ಲಿಂದಲೂ ಸ್ಪರ್ಧೆ ಮಾಡುವ ಬಗ್ಗೆಯೂ ದೇವೇಗೌಡರು ಯೋಚಿಸಬಾರದೆಂಬ ಉದ್ದೇಶವಿದೆ ಎಂದು ಹೇಳಲಾಗಿದೆ.

ದೇವೇಗೌಡರು ಸ್ಪರ್ಧೆ ಮಾಡಬಹುದೆಂದು ಹೇಳಲಾಗುತ್ತಿರುವ ಬೆಂಗಳೂರು ಉತ್ತರದಲ್ಲಿ ಕಾಂಗ್ರೆಸ್‌ನಿಂದ ನಾನೂ ಟಿಕೆಟ್ ಆಕಾಂಕ್ಷಿ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಹೇಳುತ್ತಿದ್ದರೆ, ಮತ್ತೂಂದೆಡೆ ಬಿಜೆಪಿಯಲ್ಲೂ ಅನಿವಾರ್ಯವಾದರೆ ಎಸ್‌.ಎಂ.ಕೃಷ್ಣ ಅವರನ್ನು ಕಣಕ್ಕಿಳಿಸುವ ಮಾತುಗಳು ಕೇಳಿಬರುತ್ತಿವೆ.

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ದೇವೇಗೌಡರು ಸ್ಪರ್ಧೆ ಮಾಡುವುದನ್ನು ತಪ್ಪಿಸುವ ಪ್ರಯತ್ನ ಇದಾಗಿದೆ. ಗೊಂದಲ ಉಂಟಾದರೆ ಗೌಡರು ಅಂತಿಮವಾಗಿ ಹಾಸನ ಆಯ್ಕೆ ಮಾಡಿಕೊಳ್ಳಬಹುದು ಎನ್ನಲಾಗಿದೆ.

Advertisement

ಹಾಸನ ಹಾಗೂ ರಾಮನಗರ ಜಿಲ್ಲೆಗಳಲ್ಲಿ ದೇವೇಗೌಡರ ಪ್ರಾಬಲ್ಯವಿದ್ದು, ಮಂಡ್ಯ, ಬೆಂಗಳೂರು ಉತ್ತರ, ತುಮಕೂರು, ಮೈಸೂರು ಕ್ಷೇತ್ರಗಳಲ್ಲಿ ಗೌಡರು ಅಥವಾ ಅವರ ಕುಟುಂಬ ಸದಸ್ಯರು ಸ್ಪರ್ಧಿಸಿದರೆ ಆ ಜಿಲ್ಲೆಗಳಲ್ಲೂ ಪ್ರಾಬಲ್ಯ ಹೆಚ್ಚಾಗಲಿದೆ ಎಂಬ ಆತಂಕ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರಲ್ಲಿದೆ.

ಅದರಲ್ಲೂ ಮೈಸೂರು ಕ್ಷೇತ್ರ ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ತಮ್ಮ ರಾಜಕೀಯ ಅಸ್ತಿತ್ವಕ್ಕೆ ಧಕ್ಕೆ ಬರಬಹುದೆಂಬ ಯೋಚನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದು. ಅದೇ ರೀತಿಯ ಯೋಚನೆ ತುಮಕೂರು, ಮಂಡ್ಯ, ಬೆಂಗಳೂರು ಉತ್ತರ ಭಾಗದ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರದು. ಹೀಗಾಗಿ, ಗೌಡರ ಕುಟುಂಬದ ಮೂರನೇ ತಲೆಮಾರು ಸ್ಪರ್ಧೆ ಮಾಡದಂತೆ ನಾನಾ ಕಸರತ್ತುಗಳಲ್ಲಿ ತೊಡಗಿದ್ದಾರೆಂದು ಹೇಳಲಾಗಿದೆ.

ಈ ಮಧ್ಯೆ, ಮಂಡ್ಯದಲ್ಲಿ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಬಿಜೆಪಿ ಅಭ್ಯರ್ಥಿ ಕಣಕ್ಕಿಳಿಸದೆ ಬೆಂಬಲ ಘೋಷಿಸುವ ಸಾಧ್ಯತೆಯೂ ಇದ್ದು, ಜೆಡಿಎಸ್‌ ಜತೆ ಮೈತ್ರಿ ಬಯಸದ ಕಾಂಗ್ರೆಸ್‌ ನಾಯಕರು ಬೆಂಬಲದ ಭರವಸೆ ನೀಡಿದ್ದಾರೆಂದು ಮಾತುಗಳು ಕೇಳಿಬರುತ್ತಿವೆ. ಈ ಬೆಳವಣಿಗೆ ನಂತರವೇ ಚಿತ್ರರಂಗವೂ ಸುಮಲತಾ ಬೆಂಬಲಕ್ಕೆ ನಿಂತಿದ್ದು, ನಟರಾದ ದರ್ಶನ್‌ ಹಾಗೂ ಯಶ್‌ ತಾವೇ ಚುನಾವಣಾ ಉಸ್ತುವಾರಿ ವಹಿಸಿಕೊಳ್ಳುವುದಾಗಿ ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ತೆಲುಗು ಚಿತ್ರರಂಗದ ಚಿರಂಜೀವಿ, ಮೋಹನ್‌ಬಾಬು ಸೇರಿ ಹಲವರು ಸುಮಲತಾ ಅವರ ಮೇಲೆ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡ ಹೇರುತ್ತಿದ್ದಾರೆ.

ಗೌಡರ ಗರಂ; ರಾಹುಲ್‌ ಸಾಂತ್ವನ

ಹಾಸನದಲ್ಲಿ ಪ್ರಜ್ವಲ್‌, ಮಂಡ್ಯದಲ್ಲಿ ನಿಖೀಲ್‌ ಸ್ಪರ್ಧೆಗೆ ಭೂಮಿಕೆ ಸಿದ್ಧವಾಗುತ್ತಿದ್ದ ಸಂದರ್ಭದಲ್ಲೇ ಅಪಸ್ವರ ಎದ್ದಿರುವುದು ಹಾಗೂ ಮಂಡ್ಯ, ಹಾಸನ, ಬೆಂಗಳೂರು ಉತ್ತರ, ಮೈಸೂರು, ತುಮಕೂರಿನಲ್ಲೂ ಕಾಂಗ್ರೆಸ್‌ ನಾಯಕರ ಹೇಳಿಕೆಗಳ ಬಗ್ಗೆ ಸಿಡಿಮಿಡಿಗೊಂಡಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ರಾಹುಲ್‌ ಗಾಂಧಿಯವರಿಗೆ ದೂರವಾಣಿ ಕರೆ ಮಾಡಿ ಇನ್ನೂ ಸೀಟು ಹಂಚಿಕೆ ಅಂತಿಮಗೊಂಡಿಲ್ಲ. ಆಗಲೇ ಕಾಂಗ್ರೆಸ್‌ ನಾಯಕರು ತಕರಾರು ತೆಗೆದಿದ್ದಾರೆ, ಹೀಗಾದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ರಾಹುಲ್‌ ಗಾಂಧಿ, ರಾಜ್ಯ ನಾಯಕರ ಜತೆ ಮಾತನಾಡುತ್ತೇನೆ. ನೀವು ಬೇಸರ ಮಾಡಿಕೊಳ್ಳಬೇಡಿ ಎಂದು ಸಮಾಧಾನ ಮಾಡಿದ್ದಾರೆ ಎಂದು ಹೇಳಲಾಗಿದೆ.

ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next