Advertisement
ಬೆಂಗಳೂರು ನಗರದಲ್ಲಿ 5 ಹಾಗೂ ಗ್ರಾಮಾಂತರದಲ್ಲಿ 4 ತಹಶೀಲ್ದಾರ್ ಕಚೇರಿಗೆ ಮಧ್ಯಾಹ್ನ 12 ಗಂಟೆಗೆ ಏಕಕಾಲಕ್ಕೆ ದಾಳಿ ನಡೆದಿದೆ. ಜಿಲ್ಲಾ ನ್ಯಾಯಾಧೀಶರು, ಎಸ್‌ಪಿ, ಡಿವೈಎಸ್‌ಪಿ, ಇನ್‌ಸ್ಪೆಕ್ಟರ್ ಒಳಗೊಂಡ ಪ್ರತ್ಯೇಕ 9 ತಂಡ ರಚಿಸಿ ದಾಳಿ ನಡೆಸಲಾಗಿದೆ. ಬೆಂಗಳೂರಿನ ಕಂದಾಯ ಭವನದಲ್ಲಿರುವ ಉತ್ತರ ಹಾಗೂ ದಕ್ಷಿಣ ತಹಶೀಲ್ದಾರ್ ಕಚೇರಿ, ಯಲಹಂಕ ತಹಶೀಲ್ದಾರ್ ಕಚೇರಿಗಳಿಗೆ ಖುದ್ದು ಲೋಕಾಯುಕ್ತ ನ್ಯಾ.ಬಿ.ಎಸ್ .ಪಾಟೀಲ್ ಭೇಟಿ ಕೊಟ್ಟು ಪರಿಶೀಲಿಸಿದ್ದಾರೆ. ಇನ್ನು ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ತಹಶೀಲ್ದಾರ್ ಕಚೇರಿ ಮೇಲೆ ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ನೇತೃತ್ವದ ತಂಡವು ದಾಳಿ ನಡೆಸಿದೆ.
Related Articles
Advertisement
ಏಕಾಏಕಿ ದಾಳಿ ಮಾಡಿದ್ದು ಏಕೆ? :
ತಾಲೂಕು ಕಚೇರಿಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅವ್ಯವಹಾರ, ಅಕ್ರಮಗಳ ಬಗ್ಗೆ ಸಾರ್ವಜನಿಕರು ಆಗಿಂದಾಗ್ಗೆ ಲೋಕಾಯುಕ್ತ ಸಂಸ್ಥೆಯ ಗಮನ ಸೆಳೆಯುತ್ತಿದ್ದರು. ತಾಲೂಕು ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಿದೆ ಎಂದು ಲೋಕಾಯುಕ್ತಕ್ಕೆ ಪದೇ ಪದೆ ದೂರುಗಳು ಬರುತ್ತಿದ್ದವು. ಲೋಕಾಯುಕ್ತರು ಸಂಸ್ಥೆಯ ಅಧಿಕಾರಿಗಳ ಮುಖಾಂತರ ಗೌಪ್ಯ ತನಿಖೆ ನಡೆಸಿ ಈ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ತನಿಖೆಯಲ್ಲಿ ಅಲ್ಲಿನ ಅಕ್ರಮಗಳು ಖಾತ್ರಿಯಾಗಿತ್ತು. ಲೋಕಾಯುಕ್ತ ಸಂಸ್ಥೆಯಲ್ಲಿಯೇ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ತಾಲೂಕು ಕಚೇರಿಗಳಿಗೆ ಸಂಬಂಧಿಸಿದಂತೆ 599 ಪ್ರಕರಣಗಳು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ತಾಲೂಕು ಕಚೇರಿಗಳಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ಈ ಪ್ರಕರಣಗಳು ಪುಷ್ಟಿಕರಿಸುತ್ತವೆ.
ಕಚೇರಿಗೆ ಬಾರದ ಅಧಿಕಾರಿಗೆ ತರಾಟೆ :
ಹಲವು ವರ್ಷಗಳಿಂದ ಖಾತಾ ಆಗಲಿಲ್ಲ, ಅರ್ಜಿ ವಿಲೇವಾರಿ ಮಾಡಲಿಲ್ಲ ಎಂಬ ಹತ್ತಾರು ದೂರುಗಳನ್ನು ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಬಳಿ ಸಂತ್ರಸ್ತರು ಹಂಚಿಕೊಂಡರು. ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್ ನೀಡಿ ಲೋಕಾಯುಕ್ತ ಕಚೇರಿಗೆ ಕರೆಯಿಸಿ ಈ ಬಗ್ಗೆ ವಿವರಣೆ ಪಡೆದು ಸಮಸ್ಯೆ ಬಗೆಹರಿಸುವುದಾಗಿ ನ್ಯಾ.ಬಿ.ಎಸ್.ಪಾಟೀಲ್ ಭರವಸೆ ನೀಡಿದ್ದಾರೆ. ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಲೋಕಾಯುಕ್ತ ನ್ಯಾ.ಬಿ.ಎಸ್ .ಪಾಟೀಲ್, ಕರ್ತವ್ಯ ಲೋಪ ಮಾಡಿರುವುದು ಕಂಡು ಬಂದರೆ ಕೂಡಲೇ ನಿಮ್ಮ ಅಮಾನತಿಗೆ ಶಿಫಾರಸು ಮಾಡುತ್ತೇನೆ. ಕಚೇರಿಗೆ ಬಾರದಿರುವುದು ಸೇರಿ ಸೂಕ್ತ ಕೆಲಸ ನಿರ್ವಹಿಸದಿದ್ದರೆ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.