Advertisement

ಪ್ರಜಾಪ್ರಭುತ್ವ ರಕ್ಷಣೆಗಾಗಿ ಪ್ರತಿಪಕ್ಷಗಳ ಸಭೆ: ಕೆ. ಸಿ. ವೇಣುಗೋಪಾಲ್‌

10:04 PM Jul 17, 2023 | Team Udayavani |

ಬೆಂಗಳೂರು: “ದೇಶದಲ್ಲಿ ಪ್ರಜಾಪ್ರಭುತ್ವ ರಕ್ಷಣೆ, ಸಾಂವಿಧಾನಿಕ ಹಕ್ಕುಗಳು ಹಾಗೂ ಸ್ವಾಯತ್ತ ಸಂಸ್ಥೆಗಳ ರಕ್ಷಣೆಯ ಸದುದ್ದೇಶದಿಂದ 26 ಪ್ರತಿಪಕ್ಷಗಳು ಒಂದಾಗಿ ಕಾರ್ಯನಿರ್ವಹಿಸಲು ಮುಂದೆ ಬಂದಿವೆ’ ಎಂದು ಎಐಸಿಸಿಯ ಸಂಘಟನಾ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್‌ ಹೇಳಿದ್ದಾರೆ.

Advertisement

“ಯುನೈಟೆಡ್‌ ವಿ ಸ್ಟಾಂಡ್‌’ ಎಂಬ ಘೋಷವಾಕ್ಯದೊಂದಿಗೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರದವರೆಗೆ ನಡೆಯಲಿರುವ ಬಿಜೆಪಿ ವಿರೋಧಿ ಪಕ್ಷಗಳ ಸಭೆಗೆ ಪೂರ್ವಭಾವಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನಾವು ಅಧಿಕಾರ ಪಡೆಯಲು ಸಭೆ ಸೇರುತ್ತಿಲ್ಲ. ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಭೆ ನಡೆಸುತ್ತಿದ್ದೇವೆ ಎಂದು ಹೇಳಿದರು.

ಇದು ವಿರೋಧ ಪಕ್ಷಗಳ ಎರಡನೇ ಸಭೆಯಾಗಿದ್ದು, ಮುಂದಿನ ದಿನಗಳಲ್ಲಿ ಯಾವ ರೀತಿ ಹೋರಾಟ ಮಾಡಬೇಕು ಎಂಬುದರ ಬಗ್ಗೆ ಚರ್ಚಿಸಲಾಗುವುದು. ಜುಲೈ 20ರಿಂದ ಸಂಸತ್‌ ಅಧಿವೇಶನ ಆರಂಭವಾಗಲಿದ್ದು, ಅಲ್ಲಿ ಯಾವ ರೀತಿ ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂಬ ತಂತ್ರಗಾರಿಕೆ ರೂಪಿಸಲಾಗುವುದು ಎಂದು ವೇಣುಗೋಪಾಲ್‌ ತಿಳಿಸಿದರು.

ವಿರೋಧ ಪಕ್ಷಗಳನ್ನು ಏಕಾಂಗಿಯಾಗಿ ಎದುರಿಸಬಲ್ಲೆವು ಎಂದು ಬೀಗುತ್ತಿದ್ದ ಬಿಜೆಪಿ ಈಗ ಬೇರೆ ಪಕ್ಷಗಳ ಜೊತೆ ಮೈತ್ರಿಗೆ ಮುಂದಾಗಿದೆ. ಇದು ವಿರೋಧ ಪಕ್ಷಗಳ ಒಗ್ಗಟ್ಟಿನ ಮೊದಲ ಯಶಸ್ಸಾಗಿದೆ. ಬೆಂಗಳೂರು ಸಭೆಯು ಗೇಮ್‌ ಚೆಂಜರ್‌ ಆಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್‌ಗೆ ಪ್ರತ್ಯೇಕ ಆಹ್ವಾನದ ಅಗತ್ಯವಿಲ್ಲ: ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ಧುರೀಣ ಜೈರಾಮ್‌ ರಮೇಶ್‌ ಅವರಲ್ಲಿ ಸಭೆಗೆ ಜೆಡಿಎಸ್‌ ಅನ್ನು ಆಹ್ವಾನಿಸಿದ್ದೀರಾ ಎಂದು ಕೇಳಿದಾಗ, ಈ ಸರ್ಕಾರದ ವಿರುದ್ಧ ಹೋರಾಡುವ ಧೈರ್ಯ ಇರುವವರು ನಮ್ಮ ಜೊತೆ ಬರುತ್ತಾರೆ. ಅವರಿಗೆ ಆಹ್ವಾನ ಅಗತ್ಯವಿಲ್ಲ ಎಂದು ತಿಳಿಸಿದರು.

Advertisement

ದೇಶದ ಭವಿಷ್ಯ ರೂಪಿಸುವ ಸಭೆ: ಡಿಕೆಶಿ
ಬೆಂಗಳೂರು: ಜತೆಗೂಡುವುದು ಆರಂಭ, ಜತೆಗೂಡಿ ಆಲೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂದು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ ಹೇಳಿದ್ದಾರೆ. ಕಾಂಗ್ರೆಸ್‌ ಮತ್ತದರ ಮಿತ್ರಪಕ್ಷಗಳ ಸಭೆಗೆ ಪೂರ್ವಭಾವಿಯಾಗಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಹಿತಾಸಕ್ತಿ ಕಾಯಲು ವಿರೋಧ ಪಕ್ಷಗಳು ಒಂದುಗೂಡುತ್ತಿರುವುದು ಉತ್ತಮ ಆರಂಭ. ದೇಶದ ಭವಿಷ್ಯವನ್ನು ಹೇಗೆ ರೂಪಿಸಬೇಕು ಎಂಬುದರ ಬಗ್ಗೆ ಮಂಗಳವಾರ ದೊಡ್ಡ ಮಟ್ಟದ ಸಭೆ ನಡೆಯಲಿದೆ ಎಂದು ತಿಳಿಸಿದರು. ಸಭೆಗೆ ಹೆಚ್ಚಿನ ಭದ್ರತೆ ನೀಡಲಾಗಿದ್ದು, ನಿಯೋಜಿತ ನಾಯಕರ ಹೊರತಾಗಿ ಬೇರೆ ಯಾವುದೇ ನಾಯಕರು ಸಭೆ ನಡೆಯುವ ಹೋಟೆಲ್‌ ಹಾಗೂ ಬೇರೆ ಪಕ್ಷಗಳ ನಾಯಕರ ಆಹ್ವಾನಕ್ಕೆ ವಿಮಾನ ನಿಲ್ದಾಣಗಳಿಗೆ ಬರಬೇಡಿ. ಕೆಲವು ಸಚಿವರು ಹಾಗೂ ನಾಯಕರಿಗೆ ಮಾತ್ರ ಅನುಮತಿ ನೀಡಲಾಗಿದ್ದು, ಅನುಮತಿ ಇಲ್ಲದವರು ಹೋಟೆಲ್‌ಗೆ ಬರಬೇಡಿ ಎಂದು ಶಿವಕುಮಾರ್‌ ಮನವಿ ಮಾಡಿದ್ದಾರೆ.

ವಿರೋಧ ಪಕ್ಷಗಳ ಒಗ್ಗಟ್ಟು ಮೋದಿಗೆ ಆತಂಕ-ಖರ್ಗೆ
ಬೆಂಗಳೂರು: ವಿರೋಧ ಪಕ್ಷಗಳ ಒಗ್ಗಟ್ಟಿನ ಬಲವನ್ನು ಕಂಡು ಆತಂಕಗೊಂಡಿರುವ ಪ್ರಧಾನಿ ಮೋದಿ ಅವರು ಸಣ್ಣಪುಟ್ಟ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ವಿರೋಧ ಪಕ್ಷಗಳ ಸಭೆಗೆ ಮುಂಚಿತವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಪ್ರಧಾನಿ ಮೋದಿ ಅವರು ಇಡೀ ವಿರೋಧ ಪಕ್ಷಗಳಿಗಿಂತ ಬಲಿಷ್ಠರಾಗಿದ್ದೇ ಆದರೆ ಈಗ ಏಕೆ 30 ಪಕ್ಷಗಳ ಸಭೆ ಕರೆಯುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಬಿಜೆಪಿಗೆ ಹೀನಾಯ ಸೋಲು: ಸಮಾಜವಾದಿ ಪಕ್ಷದ ನಾಯಕ ಅಖೀಲೇಶ್‌ ಯಾದವ್‌ ಮಾತನಾಡಿ, ದೇಶದ ಮೂರನೇ ಎರಡರಷ್ಟು ಮತದಾರರು ಈ ಬಾರಿ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಲಿದ್ದಾರೆ. ಬಿಜೆಪಿ ಬಗ್ಗೆ ಜನಾಕ್ರೋಶ ಸೃಷ್ಟಿಯಾಗಿದೆ. ಈ ಜನರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಸ್ಟಾಲಿನ್‌ರಿಂದ ಕನ್ನಡದಲ್ಲಿ ನಮಸ್ಕಾರ!
ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಜೊತೆ ಸದಾ ತಗಾದೆ ತೆಗೆಯುವ ತಮಿಳುನಾಡು ಸಿಎಂ ಎಂ. ಕೆ. ಸ್ಟಾಲಿನ್‌, ಬೆಂಗಳೂರು ಸಭೆಯಲ್ಲಿ ಭಾಗಿಯಾಗುವ ಸಂತಸವನ್ನು ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದಾರೆ. ಟ್ವೀಟ್‌ನ ಆರಂಭದಲ್ಲಿ ನಮಸ್ಕಾರ ಕರ್ನಾಟಕ! ಎಂದು ಕನ್ನಡದಲ್ಲೇ ಬರೆದಿದ್ದಾರೆ. ಟ್ವೀಟ್‌ ಮುಂದುವರಿಸಿರುವ ಅವರು, “ಪಾಟ್ನಾದ ಬಳಿಕ ಜಾತ್ಯತೀತ‌ ಮತ್ತು ಪ್ರಜಾಪ್ರಭುತ್ವದ ಶಕ್ತಿಗಳಾದ ನಾವೆಲ್ಲ ಸುಂದರ ಬೆಂಗಳೂರಿನಲ್ಲಿ ಪ್ರಜಾಪ್ರಭುತ್ವದ ಉಳಿವಿಗಾಗಿ ಸೇರಿದ್ದೇವೆ. ಬಿಜೆಪಿಯ ಪ್ರತಿಗಾಮಿ ರಾಜಕೀಯವನ್ನು ಮಣಿಸಿ ಕರ್ನಾಟಕದ ಜನ ಶಕ್ತಿಶಾಲಿಯಾದ ಮಾದರಿಯನ್ನು ನೀಡಿದ್ದಾರೆ. ಇದನ್ನು ದೇಶಾದ್ಯಂತ ಪುನರಾವರ್ತಿಸೋಣ’ ಎಂದು ಹೇಳಿದ್ದಾರೆ.

ಈ ಸಭೆಯಲ್ಲಿ ಕೆಲ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. ಕಳೆದ ಬಾರಿ ಪಾಟ್ನಾದಲ್ಲಿ ನಡೆದಿದ್ದ ಸಭೆ ಸಾಮಾನ್ಯ ಸಭೆಯಾಗಿತ್ತು. ಬೆಂಗಳೂರು ಸಭೆಗೆ ವಿಶೇಷ ಮಹತ್ವವಿದೆ.
– ಒಮರ್‌ ಅಬ್ದುಲ್ಲಾ, ಜಮ್ಮು-ಕಾಶ್ಮೀರದ ಮಾಜಿ ಸಿಎಂ

ಬಿಜೆಪಿ ಮಿತ್ರಪಕ್ಷಗಳಿಗೆ ಸೋಲು ಖಚಿತ: ಸಿಎಂ
ಬೆಂಗಳೂರು: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಿಗೆ ಸೋಲು ಖಚಿತವಾಗಿದ್ದು , ಯುಪಿಎ ಮಿತ್ರ ಪಕ್ಷಗಳು ಬಹುಮತ ಪಡೆದು ವಿಪಕ್ಷಗಳ ಒಕ್ಕೂಟ ಗೆಲುವು ಸಾಧಿಸಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಪಕ್ಷಗಳ ಒಕ್ಕೂಟದ ಎರಡನೇ ಸಭೆಯಾಗಿದ್ದು, ಸುಮಾರು 24 ಪಕ್ಷದ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಎಲ್ಲ ವಿಪಕ್ಷಗಳ ನಾಯಕರು ಲೋಕಸಭಾ ಚುನಾವಣೆಯಲ್ಲಿ ಒಗ್ಗೂಡಿ ಚುನಾವಣೆ ಎದುರಿಸುವುದೇ ಈ ಸಭೆಯ ಮುಖ್ಯ ಉದ್ದೇಶವಾಗಿದೆ ಎಂದು ಸಿಎಂ ವಿವರಿಸಿದರು.

ಮೋದಿ ಅವರನ್ನು ಎದುರಿಸಲು ಎಲ್ಲ ಪಕ್ಷಗಳು ಒಟ್ಟಾಗುತ್ತಿವೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕದಲ್ಲಿ ಮೋದಿಯವರನ್ನು ಸಮರ್ಥವಾಗಿ ಎದುರಿಸಿದ್ದೇವೆ. ವಿಧಾನಸಭಾ ಚುನಾವಣಾ ವೇಳೆ ಮೋದಿಯವರು 28 ಕಡೆ ಪ್ರವಾಸ ಕೈಗೊಂಡಿದ್ದು, ಅವರು ಬಂದ ಕಡೆಗಳೆಲ್ಲಾ ಕಾಂಗ್ರೆಸ್‌ ಗೆಲುವು ಸಾಧಿಸಿದೆ. ಕರ್ನಾಟಕದಿಂದಲೇ ಬಿಜೆಪಿಯ ಅವನತಿ ಪ್ರಾರಂಭವಾಗಿದೆ ಎಂದರು.

ಜೆಡಿಎಸ್‌ಗೆ ಸಿದ್ಧಾಂತವೇ ಇಲ್ಲ. ಬಿಜೆಪಿಗೆ ಬೆಂಬಲ ಸೂಚಿಸಿದ ನಂತರ ಅವರ ಜಾತ್ಯತೀತತೆ ಏನಾಯಿತು? ಪಕ್ಷವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅವರು ಸಿದ್ಧಾಂತವನ್ನು ಬಲಿ ಕೊಡುತ್ತಿದ್ದಾರೆ ಎಂದರ್ಥ.
-ಸಿದ್ದರಾಮಯ್ಯ, ಸಿಎಂ

ಯಾರ ಕಣ್ಣು, ಯಾವ ಹುದ್ದೆ ಮೇಲೆ?
ರಾಹುಲ್‌ ಗಾಂಧಿ
– ಪ್ರಧಾನಿ ಹುದ್ದೆ ಪ್ರಮುಖ ಆಕಾಂಕ್ಷಿ
– ಸ್ವಂತ ಬಲದಿಂದ ದೇಶಾದ್ಯಂತ ಗೆಲ್ಲುವುದು ಅಸಾಧ್ಯ
– ಬಿಜೆಪಿ ಸೋಲಿಸುವ ಪ್ರಮುಖ ಉದ್ದೇಶ

ನಿತೀಶ್‌ ಕುಮಾರ್‌
– 2005ರಿಂದಲೂ ಬಿಹಾ ರದ ಸಿಎಂ
– ಈಗ ಪ್ರಧಾನಿ ಹುದ್ದೆ ಮೇಲೆ ಕಣ್ಣು
– ಒಕ್ಕೂ ಟದ ಮುಖ್ಯಸ್ಥ /ಸಂಚಾಲಕನಾಗುವ ಬಯಕೆ

ಮಮತಾ ಬ್ಯಾನರ್ಜಿ
– ಸತತ ಮೂರನೇ ಬಾರಿಗೆ ಪಶ್ಚಿಮ ಬಂಗಾಳ ಸಿಎಂ
– ದೇಶದ ಮೊದಲ 2ನೇ ಮಹಿಳಾ ಪ್ರಧಾನಿಯಾ ಗ ಬೇಕು ಎಂಬ ಇಚ್ಚೆ
– ಬಂಗಾಳದಲ್ಲಿ ಬಲಗೊಳ್ಳುತ್ತಿರುವ ಬಿಜೆಪಿ ಮಣಿಸಲು ಯತ್ನ

ಅರವಿಂದ ಕೇಜ್ರಿವಾಲ್‌
– ಸತತ ಮೂರನೇ ಬಾರಿಗೆ ದೆಹಲಿ ಮುಖ್ಯ ಮಂತ್ರಿ
– ಹಿಂದಿನಿಂದಲೂ ಪ್ರಧಾನಿಯಾಗಬೇಕು ಎಂಬ ಆಸೆ
– ದೆಹಲಿಯಲ್ಲಿ ಅಧಿಕಾರ ಹೆಚ್ಚಿಸಿಕೊಳ್ಳಲು ಇತರೆ ಪಕ್ಷಗಳ ಸಹಾಯಯಾಚನೆ

ಶರದ್‌ ಪವಾರ್‌
– ಪ್ರಧಾನಿ ಹುದ್ದೆಗಿಂತ ಮಗಳಿಗೆ ಉತ್ತಮ ಭವಿಷ್ಯ ಕಟ್ಟಿ ಕೊಡುವ ಬಯಕೆ
– ಸದ್ಯ ತಮ್ಮನ ಮಗನ ಬಂಡಾಯದಿಂದ ಏರುಪೇರು
– ಇತರೆ ಪಕ್ಷಗಳ ನೆರವಿನಿಂದ ಎನ್‌ಸಿಪಿ ಗಟ್ಟಿ ಗೊಳಿಸಿಕೊಳ್ಳುವ ಇಚ್ಚೆ

ಅಖೀಲೇಶ್‌ ಯಾದವ್‌

– ಮೋದಿ, ಯೋಗಿ ಅಲೆಯ ಅಬ್ಬರಕ್ಕೆ ನಲು ಗಿರುವ ಎಸ್‌ಪಿ
– ಉತ್ತ ರ ಪ್ರದೇಶದಲ್ಲಿನ ಸಣ್ಣಪುಟ್ಟ ಪಕ್ಷಗಳ ನೆರವಿನಿಂದ ಸಣ್ಣಪುಟ್ಟ ಜಾತಿಗಳ ಸೆಳೆಯುವ ಯತ್ನ
– ಸದ್ಯ ಯುಪಿಯಲ್ಲಿ ಸರ್ಕಾರ ರಚಿಸಬೇಕು ಎಂಬು ದಷ್ಟೇ ಮಹಾನ್‌ ಉದ್ದೇಶ

Advertisement

Udayavani is now on Telegram. Click here to join our channel and stay updated with the latest news.

Next