ವಿಟ್ಲ: ಜಿಲ್ಲೆಯಾದ್ಯಂತ ಕೋಮು ಸೌಹಾರ್ದ ಹಾಗೂ ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ಬೇರೆ ಬೇರೆ ಆಯಾಮದಲ್ಲಿ ಬೇರೆ ಬೇರೆ ಜಾತಿಯ ಮುಖಂಡರ ಜತೆಗೆ ನಿರಂತರವಾಗಿ ಸಭೆಗಳನ್ನು ನಡೆಸಲಾಗುತ್ತಿದೆ. ಇನ್ನು ಮುಂದೆಯೂ ಸಭೆಗಳನ್ನು ನಡೆಸಲಾಗುವುದು. ಪ್ರತಿಯೊಂದು ಜಾತಿಯವರಲ್ಲೂ ಸೌಹಾರ್ದ ಹಾಗೂ ಶಾಂತಿ ಕಾಪಾಡುವ ಜವಾಬ್ದಾರಿಯ ಬಗ್ಗೆ ಮನದಟ್ಟು ಮಾಡಲಾಗುತ್ತಿದೆ ಎಂದು ಪೊಲೀಸ್ ಮಹಾನಿರ್ದೇಶಕ ಆರ್.ಕೆ. ದತ್ತ ತಿಳಿಸಿದರು.
ಅವರು ಶುಕ್ರವಾರ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳ ವಿಶೇಷ ಸಭೆಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು.
ಪೊಲೀಸ್ ವ್ಯವಸ್ಥೆ ಮೂಲಕ ಶಾಂತಿಯುತ ವಾತಾವರಣ ಸೃಷ್ಟಿಸುವ ಆಶ್ವಾಸನೆಯನ್ನು ನೀಡಲಾಗುತ್ತಿದೆ. ಪ್ರತಿಯೊಬ್ಬರೂ ಗಲಭೆಗೆ ಸಂಬಂಧಿಸಿ ಯಾವುದೇ ರೀತಿಯ ಹೇಳಿಕೆಗಳನ್ನು ನೀಡಬಾರದು. ಹಾಗೆ ನೀಡುವುದರಿಂದ ಕೋಮು ಸೌಹಾರ್ದತೆಗೆ ಧಕ್ಕೆಯಾಗುವ ಸಾಧ್ಯತೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕರೋಪಾಡಿ ಗ್ರಾ.ಪಂ. ಉಪಾಧ್ಯಕ್ಷ ಎ. ಅಬ್ದುಲ್ ಜಲೀಲ್ ಕೊಲೆ ಪ್ರಕರಣದಲ್ಲಿ ಯಾವುದೇ ಗೊಂದಲಗಳು ಬೇಡ. ಅವರ ಹತ್ಯೆ ನಡೆಸಿದ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಹೆಚ್ಚುವರಿ ಆಯಾಮದಲ್ಲಿ ತನಿಖೆ ನಡೆಯುತ್ತಿದ್ದು, ಬಳಿಕ ಬೇರೆಯವರ ಪಾಲ್ಗೊಳ್ಳುವಿಕೆಯ ಹಾಗೂ ಬಂಧನದ ಬಗ್ಗೆ ಕ್ರಮ ಕೈಗೊಳ್ಳಲಾಗುವುದೆಂದರು.
ಇಲಾಖೆಯಲ್ಲಿ ಬಹಳ ವರ್ಷದ ನೇಮಕಾತಿ ಪ್ರಕ್ರಿಯೆ ನಡೆಯದ ಹಿನ್ನೆಲೆ ಯಲ್ಲಿ ಸಿಬಂದಿ ಕೊರತೆ ರಾಜ್ಯದಲ್ಲಿ ಇದೆ. 2013ರ ಬಳಿಕ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಹೆಚ್ಚಿನ ಸಿಬಂದಿ ಇದ್ದರೆ ಮೇಲಧಿಕಾರಿಗಳ ಗಮನಕ್ಕೆ ತಂದು ಕೊರತೆ ಇರುವ ಪೊಲೀಸ್ ಠಾಣೆಗಳಿಗೆ ಕಳುಹಿಸಬೇಕು. ಪೊಲೀಸ್ ಠಾಣೆಯಲ್ಲಿ ಯಾವುದೇ ಕೊರತೆ ಇರದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಕರೋಪಾಡಿ ಗ್ರಾ.ಪಂ.ಉಪಾಧ್ಯಕ್ಷರ ಕೊಲೆ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತ ಅವರು ವಿಟ್ಲ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.