ಬೆಂಗಳೂರು: ಕೋವಿಡ್ ಎರಡನೇ ಅಲೆ ಹಾವಳಿ ಮತ್ತಷ್ಟು ಕಡಿಮೆಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇನ್ನಷ್ಟು ನಿರ್ಬಂಧಗಳ ಸಡಿಲಿಕೆಗೆ ಸರ್ಕಾರ ಚಿಂತನೆ ನಡೆದಿದ್ದು, ರಾತ್ರಿ 8ರವರೆಗೆ ವ್ಯಾಪಾರ-ವಹಿವಾಟಿಗೆ ಅವಕಾಶ ನೀಡುವ ಸಾಧ್ಯತೆ ಇದೆ.
ಈ ಸಂಬಂಧ ಶನಿವಾರ ಸಂಜೆ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಚಿವರು ಮತ್ತು ಅಧಿಕಾರಿಗಳು ಭಾಗವಹಿಸಲಿದ್ದಾರೆ. ಅಲ್ಲಿ ಮೂರನೇ ಹಂತದ ಸಡಿಲಿಕೆ ಬಗ್ಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ. ವ್ಯಾಪಾರ-ವಾಣಿಜ್ಯ ಚಟುವಟಿಕೆಗಳಿಗೆ ಪ್ರಸ್ತುತ ಬೆಳಗ್ಗೆ 6ರಿಂದ ಸಂಜೆ 5ರವರೆಗೆ ಅವಕಾಶಮಾಡಿಕೊಡಲಾಗಿದೆ. ಈ ಅವಧಿಯನ್ನು ರಾತ್ರಿ 8 ಗಂಟೆಯವರೆಗೆ ವಿಸ್ತರಣೆ ಜತೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ವ್ಯಾಪಾರ-ವಹಿವಾಟಿಗೆ ಅನುಮತಿ ನೀಡುವ ಯೋಚನೆ ಇದೆ. ಅಲ್ಲದೆ, ಈ ಬಾರಿಯ ಅನ್ ಲಾಕ್‌ನಲ್ಲಿ ಮದುವೆ ಸೇರಿದಂತೆ ಮತ್ತಿತರ ಸಭೆ-ಸಮಾರಂಭಗಳನ್ನು ಸಭಾಂಗಣಗಳಲ್ಲಿ ಸೀಮಿತ ಜನರ ಉಪಸ್ಥಿತಿಯೊಂದಿಗೆ ಅನುಮತಿ ನೀಡಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಗಮನ ಸೆಳೆದ ಗ್ರಾಮ ಭಾರತ : ಗರಿಗೆದರಿದ ದೇವರಬಾಳು-ಕಟ್ಟಿನಾಡಿಗೆ ಸಂಪರ್ಕ ಸೇತು ನಿರೀಕ್ಷೆ
ರಾಜಧಾನಿಯಲ್ಲಿ ಸಿನಿಮಾ ಮಂದಿರಗಳು, ಮಾಲ್‌ಗಳು, ವಾಣಿಜ್ಯ ಸಂಕಿರ್ಣಗಳು ಸ್ಥಗಿತಗೊಂಡಿವೆ. ಒಟ್ಟಾರೆ ಸಾಮರ್ಥ್ಯದಲ್ಲಿ ಶೇ.50 ಗ್ರಾಹಕರೊಂದಿಗೆ ಪುನಾರಂಭಕ್ಕೆ ಅನುಮತಿ ನೀಡುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮನವಿ ಮಾಡಿದೆ. ಇದಕ್ಕೂ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ.
ಆದರೆ, ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಕರ್ಫ್ಯೂ ಮಾತ್ರ ಮುಂದುವರಿಸುವ ಚಿಂತನೆ ಇದೆ. ಹಾಗಾಗಿ, ಜನರಿಗೆ ವಾರಾಂತ್ಯದ ರಜಾ-ಮಜಾಕ್ಕೆ ಅವಕಾಶ ಕಡಿಮೆ. ಅದೇ ರೀತಿ, ಧಾರ್ಮಿಕ ಕೇಂದ್ರಗಳಲ್ಲೂ ಭಕ್ತರಿಗೆ ದರ್ಶನ ಭಾಗ್ಯ ಸಾಧ್ಯತೆ ಅನುಮಾನ ಎಂದೂ ಮೂಲಗಳು ತಿಳಿಸಿವೆ. ಎರಡನೇ ಹಂತದ ಅನ್‌ಲಾಕ್ ಅವಧಿಯು ಜುಲೈ 5ರಂದು ಬೆಳಿಗ್ಗೆ ಅಂತ್ಯಗೊಳ್ಳಲಿದೆ