Advertisement

ಡಿಸೆಂಬರ್ ಅಂತ್ಯದೊಳಗೆ ಪೂರ್ವ ಮುಂಗಾರು ಹಂಗಾಮಿನ ಬೆಳೆ ವಿಮೆ ಪರಿಹಾರ ಇತ್ಯರ್ಥಕ್ಕೆ ಸೂಚನೆ

04:12 PM Nov 10, 2022 | Team Udayavani |

ಬೆಂಗಳೂರು: 2022-23ನೇ ಸಾಲಿನ ಪೂರ್ವ ಮುಂಗಾರು ಹಂಗಾಮಿನ ರೈತರ ಬೆಳೆ ವಿಮೆ ಪರಿಹಾರವನ್ನು ಡಿಸೆಂಬರ್ ಅಂತ್ಯದೊಳಗೆ ಇತ್ಯರ್ಥಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕೃಷಿ ಸಚಿವರೂ ಆಗಿರುವ ಚಿತ್ರದುರ್ಗ, ಗದಗ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Advertisement

ಇಂದು ವಿಕಾಸಸೌಧದ ಸಚಿವರ ಕಚೇರಿಯಲ್ಲಿ ಬೆಳೆವಿಮೆ ಪರಿಹಾರ ಇತ್ಯರ್ಥ ಸಂಬಂಧ ಅಧಿಕಾರಿಗಳೊಂದಿಗೆ ಸಚಿವರು ಸಭೆ ನಡೆಸಿದರು.

ಸಭೆಯಲ್ಲಿ 2022-23 ನೇ ಸಾಲಿನ‌ ಬೆಳೆ ವಿಮೆ ಇತ್ಯರ್ಥ ಸಂಬಂಧ ಕೈಗೊಂಡ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದುಕೊಂಡ ಸಚಿವರು ಯಾವುದೇ ಕಾರಣಕ್ಕೂ ಬೆಳೆವಿಮೆ ಪರಿಹಾರ ತಡವಾಗಬಾರದು. ರೈತರು ವಿಮೆಗಾಗಿ ಕಾದುಕುಳಿತಿರುತ್ತಾರೆ. ಸಂಬಂಧಿಸಿದ ಇನ್ಸೂರೆನ್ಸ್ ಕಂಪೆನಿಗಳೊಂದಿಗೆ ನಿರಂತರ ಸಂಪರ್ಕವನ್ನು ಕೃಷಿ ಅಧಿಕಾರಿಗಳು ಹೊಂದಿರಬೇಕು ಎಂದರು.

ಆಧಾರ್ ಕಾರ್ಡ್ ಲಿಂಕ್ ಆಗದ ಇನ್ನೂ ಹೆಚ್ಚಿನ ರೈತರು ಇರುವುದನ್ನು ಗಮನಿಸಿದ ಸಚಿವರು ಆದಷ್ಟು ಬೇಗ ರೈತರು ಆಧಾರ್ ಕಾರ್ಡ್ ಬೆಳೆವಿಮೆಗೆ ಸರಿಯಾಗಿ ಲಿಂಕ್ ಆಗಿದಿಯೇ ಎಂಬುದನ್ನು ಪರಿಶೀಲಿಸಬೇಕು. ಇನ್ಸೂರೆನ್ಸ್ ಕಂಪೆನಿಗಳೊಂದಿಗೆ ಆಧಾರ್‌ನಲ್ಲಿ ಏನಾದರೂ ತಿದ್ದುಪಡಿ ಆಗಿದ್ದಲ್ಲಿ ಅದನ್ನು ಜರೂರಾಗಿ ಗಮನಕ್ಕೆ ತರಬೇಕು. ಬೆಳೆವಿಮೆಗೆ ಇನ್ಸೂರೆನ್ಸ್ ಮಾಡಿಸಾಯಿತು ಎಂಬುದಷ್ಟನ್ನೇ ಗಮನಿಸದೇ ಸರಿಯಾಗಿ ಆಧಾರ್ ಕಾರ್ಡ್ ಮಾಹಿತಿ ಲಿಂಕ್ ಆಗಿದಿಯೇ, ಮಾಹಿತಿ ಸರಿಯಿದೆಯೇ ಇಲ್ಲವೇ ಎಂಬುದನ್ನು ರೈತರು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು.

ಇನ್ಸೂರೆನ್ಸ್ ಕಂಪೆನಿಗಳು ಇನ್ಸೂರೆನ್ಸ್ ಮಾಡಿಸಿಕೊಂಡು ಸುಮ್ಮನಾದರಷ್ಟೇ ಸಾಲದು. ರೈತನಿಗೆ ನಿಯಮಬದ್ಧವಾಗಿ ಬೆಳೆವಿಮೆ ಪರಿಹಾರ ಒದಗಿಸುವಲ್ಲಿ ನ್ಯಾಯವಾಗಿ ಕೆಲಸ ಮಾಡಬೇಕು. ಒಂದುವೇಳೆ ಆಧಾರ್ ಅಥವಾ ಇನ್ಯಾವುದೇ ಮಾಹಿತಿ ರೈತರಿಂದಾಗಲೀ ಅಥವಾ ಅಧಿಕಾರಿಗಳಿಂದಾಗಲೀ ಕಣ್ತಪ್ಪಿನಿಂದಲೋ ಅಥವಾ ಇನ್ಯಾವುದಾದರೂ ಕಾರಣಕ್ಕೆ ತಪ್ಪಿದ್ದಲ್ಲಿ ಅದನ್ನು ಪಡೆಯುವ ಕೆಲಸ ಮಾಡಬೇಕು. ಇನ್ಸೂರೆನ್ಸ್ ಮಾಡಿಸಿಕೊಂಡರಾಯಿತಷ್ಟೇ ಎನ್ನುವ ಅಸಡ್ಡೆಯನ್ನು ಯಾವ ಇನ್ಸೂರೆನ್ಸ್ ಕಂಪೆನಿಗಳೂ ಮಾಡಬಾರದು. ಸರಿಯಾಗಿ ಬೆಳೆ ವಿಮೆ‌ಪರಿಹಾರ ಇತ್ಯರ್ಥವಾಗುವಂತೆ ಕೃಷಿ ಅಧಿಕಾರಿಗಳೊಂದಿಗೆ ಕೈಜೋಡಿಸಬೇಕೆಂದು ಬಿಸಿಪಿ‌ ತಾಕೀತು ಮಾಡಿದರು.

Advertisement

ಮುಂಗಾರು ಹಂಗಾಮಿನ ಬೆಳೆಗಳಿಗೆ ಜನವರಿಯಲ್ಲಿ ವಿಮೆ‌ಪರಿಹಾರ ಇತ್ಯರ್ಥಪಡಿಸಲು ಪ್ರಕ್ರಿಯೆ ಆರಂಭಿಸುವಂತೆ ಸಭೆಯಲ್ಲಿ ಸಚಿವರು ಸೂಚಿಸಿದರು.

ಸಭೆಯಲ್ಲಿ ಕೃಷಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಶಿವಯೋಗಿ ಕಳಸದ, ಆಯುಕ್ತ ಶರತ್ ಪಿ., ಬೆಳೆ ವಿಮೆ ‌ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ ಸೇರಿದಂತೆ ಮತ್ತಿತ್ತರ ಪ್ರಮುಖ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next