ಸಾಗರ: ಸೆ. 9ರಂದು ಜೋಗ ಜಲಪಾತದ ಸಮಗ್ರ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಜೋಗದಲ್ಲಿ ಸಂಸದರು, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೆಪಿಸಿ ಸೇರಿದಂತೆ ಅತ್ಯುನ್ನತ ಅಧಿಕಾರಿಗಳ ಸಭೆ ಕರೆಯುವ ಸಿದ್ಧತೆ ನಡೆಸಲಾಗಿದೆ ಎಂದು ಶಾಸಕ ಎಚ್. ಹಾಲಪ್ಪ ಹರತಾಳು ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಪರಿಸರಕ್ಕೆ ಹಾನಿಯುಂಟಾಗದಂತೆ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಿದ್ದು, ಈ ಸಂಬಂಧ ಪರಿಸರವಾದಿಗಳು ಹಾಗೂ ತಜ್ಞರ ಜೊತೆ ಸಹ ಸಭೆ ನಡೆಸಲಾಗುತ್ತದೆ. ಮುಖ್ಯಮಂತ್ರಿಗಳು ಜೋಗ ಅಭಿವೃದ್ಧಿಗೆ ತಮ್ಮದೇ ಆಲೋಚನೆ ಇರಿಸಿಕೊಂಡಿದ್ದಾರೆ. ಮುಖ್ಯಮಂತ್ರಿಗಳು 200 ಕೋಟಿ ರೂ. ಅನುದಾನ ನೀಡುವ ಭರವಸೆ ನೀಡಿದ್ದರು. ಮೊದಲ ಹಂತದಲ್ಲಿ 120 ಕೋಟಿ ರೂ. ಲಭಿಸಿದೆ ಎಂದರು.
ಯೋಜನೆಯಡಿ ಈಜುಕೊಳ ಅಭಿವೃದ್ಧಿ, ಜಿಪ್ ವೇ, ವೇವ್ ಪೂಲ್, ವರ್ಷಪೂರ್ತಿ ಜಲಪಾತ ವೀಕ್ಷಣೆಗೆ ಅಗತ್ಯ ಸೌಲಭ್ಯ, ವಾಚ್ ಟವರ್, ಕಾರಂಜಿ, ಕೇಬಲ್ ಕಾರ್, ದೋಣಿ ವಿಹಾರ ಸೇರಿದಂತೆ ವಿವಿಧ ಕೆಲಸಗಳು ನಡೆಯಲಿವೆ. ಜೋಗದ ಸಮಗ್ರ ಅಭಿವೃದ್ಧಿಗೆ ಸುಮಾರು 250 ಕೋಟಿ ರೂ. ವೆಚ್ಚದ ಯೋಜನೆ ಹಮ್ಮಿಕೊಳ್ಳಲಾಗಿದ್ದು, ಪ್ರತಿ ವರ್ಷ 100 ಕೋಟಿ ರೂ. ಸರ್ಕಾರದಿಂದ ಅನುದಾನ ತರುವ ಉದ್ದೇಶ ಹೊಂದಲಾಗಿದೆ. ಜೋಗವನ್ನು ಸಂಪರ್ಕಿಸುವ ಗ್ರಾಮೀಣ ರಸ್ತೆಗಳನ್ನು ಉತ್ತಮಪಡಿಸಲಾಗುತ್ತದೆ. ಮುಪ್ಪಾನೆಯಿಂದ ಸಿಗಂದೂರು ತಲುಪುವ ಹಿನ್ನೀರಿನ ಮಾರ್ಗದಲ್ಲಿ ಅತ್ಯಾಧುನಿಕ ಲಾಂಚ್ ಸೌಲಭ್ಯ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಜೋಗ ಪ್ರದೇಶದಲ್ಲಿ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳು 2 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿವೆ ಎಂದರು.
ಗಣಪತಿ ಕೆರೆ ಅಂಗಳದಲ್ಲಿ ಸ್ಥಾಪಿಸಿರುವ ಬೃಹತ್ ಧ್ವಜಸ್ತಂಭದ ಧ್ವಜಾರೋಹಣವನ್ನು ಮುಖ್ಯ ಮಂತ್ರಿಗಳ ಕೈನಿಂದ ಮಾಡಿಸಲು ಉದ್ದೇಶ ಹೊಂದಲಾಗಿದೆ. ಇದು ರಾಜ್ಯದಲ್ಲಿಯೇ ಎರಡನೇ ಅತಿದೊಡ್ಡ ಧ್ವಜಸ್ತಂಭವಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಸಮಯ ಕೇಳಲಾಗಿದೆ. ಮುಖ್ಯಮಂತ್ರಿಗಳನ್ನು ಕಾರ್ಯಕ್ರಮಕ್ಕೆ ಕರೆಸುವ ಮೂಲಕ ಬಿಎಚ್ ರಸ್ತೆಯಲ್ಲಿ ಚತುಷ್ಪಥ ರಸ್ತೆಯಾಗಿ ಪರಿವರ್ತಿಸುವುದು ಸೇರಿದಂತೆ ವಿವಿಧ ಯೋಜನೆಗೆ ಅನುದಾನದ ಬೇಡಿಕೆ ಇಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಶರಾವತಿ ಭೂಗರ್ಭ ಯೋಜನೆ ಸರ್ವೇ ಮಾತ್ರ ನಡೆದಿದೆ. ಅದು ಅನುಷ್ಠಾನಗೊಳ್ಳುವುದು ನಮ್ಮ ಕಾಲದಲ್ಲಿ ಸಾಧ್ಯವಿಲ್ಲ. ಸರ್ವೇ ಕಾರ್ಯಕ್ಕೆ ಮಾತ್ರ ಹಣ ಬಿಡುಗಡೆಯಾಗಿದೆ ಎನ್ನಲಾಗಿದೆ. ಸರ್ವೇ ಮುಗಿದು, ಯೋಜನೆ ಆರಂಭಿಸುವುದು ಸಾಧ್ಯವಿಲ್ಲದ ಕಾರಣ ಇದು ಸಾಧುವಲ್ಲದ ಯೋಜನೆ ಎಂದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ತಾಲೂಕು ಅಧ್ಯಕ್ಷ ಲೋಕನಾಥ್ ಬಿಳಿಸಿರಿ, ನಗರ ಅಧ್ಯಕ್ಷ ಗಣೇಶಪ್ರಸಾದ್, ಪ್ರಮುಖರಾದ ಸಂತೋಷ್ ಶೇಟ್, ಸತೀಶ್ ಮೊಗವೀರ, ಗೌತಮ್, ವಿನಾಯಕ ರಾವ್, ಬಿ.ಟಿ. ರವೀಂದ್ರ, ಸಂತೋಷ್ ಕೆ.ಜಿ. ಇನ್ನಿತರರು ಇದ್ದರು.