Advertisement
ಬೆಂಗಳೂರಿನ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಬುಧವಾರ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತೀಯವಾದಿಗಳು ಇರುವವರೆಗೆ ಕೋಮುಗಲಭೆ ಇರುತ್ತದೆಂದು ಹೇಳಿದರು.
ಪೊಲೀಸರ ಕೆಲಸ ಬಹಳ ಕಠಿಣವಾದ ಕೆಲಸ. ಪೊಲೀಸರ ಮೇಲೆ ಹಲ್ಲೆ ನಡೆಸುವವರು ಮತೀಯವಾದಿಗಳು, ಕೋಮುವಾದಿಗಳೇ ಹೊರತು ಬೇರೆ ಯಾರೂ ಅಲ್ಲ. ಅಂತಹ ವ್ಯಕ್ತಿಯ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಿದ್ದೇನೆ ಎಂದು ಸಿಎಂ ಹೇಳಿದರು.
Related Articles
ಮಂಗಳೂರಿನಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ ಗುಪ್ತಚರ ದಳದ ವೈಫಲ್ಯ ಇರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ದೀಪಕ್‌ರಾವ್ ಮತ್ತು ಬಷೀರ್ ಕೊಲೆಗೆ ಮುಂಜಾಗ್ರತೆ ವಹಿಸಿದ್ದರೆ ಕಾನೂನು ಕ್ರಮಕೈಗೊಳ್ಳಬಹುದಿತ್ತು. ಆದರೆ, ಗುಪ್ತಚರ ಇಲಾಖೆಯ ವೈಫಲ್ಯದಿಂದ ಈ ವ್ಯಾಪ್ತಿಯಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿವೆ. ಈ ಹಿನ್ನೆಲೆಯಲ್ಲಿ ಮಂಗಳೂರು ಸೇರಿ ಕೆಲ ಸೂಕ್ಷ್ಮಪ್ರದೇಶಗಳಲ್ಲಿ ಗುಪ್ತಚರ ದಳ ಸಕ್ರಿಯವಾಗಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ ಎಂದರು.
Advertisement
ಗುಪ್ತಚರಕ್ಕೆ ಪ್ರತ್ಯೇಕ ನೇಮಕಾತಿಇತ್ತೀಚಿನ ದಿನಗಳಲ್ಲಿ ರಾಜ್ಯ ಗುಪ್ತಚರ ದಳದ ಕಾರ್ಯವೈಖರಿ ಬಗ್ಗೆ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಇದಕ್ಕಾಗಿಯೇ ಪ್ರತ್ಯೇಕ ನೇಮಕಾತಿ ಪ್ರಕ್ರಿಯೆ ನಡೆಸಿ ಅವರಿಗೆ ವಿಶೇಷ ತರಬೇತಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಸಿಎಂ ಸಿದ್ದರಾಮಯ್ಯನವರೇ ಈ ಬಗ್ಗೆ ಮಾಹಿತಿ ನೀಡಿದ್ದು, ಈಗಾಗಲೇ ನೇಮಕಾತಿಯೂ ಆರಂಭವಾಗಿದೆ ಎಂದಿದ್ದಾರೆ. ಅಲ್ಲದೆ ಗುಪ್ತಚರ ವಿಭಾಗದಲ್ಲಿ ಲೋಪದೋಷ ಇರುವುದನ್ನು ಒಪ್ಪಿಕೊಂಡಿರುವ ಅವರು, ಇದನ್ನು ಸರಿಪಡಿಸಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿರುವುದಾಗಿ ಹೇಳಿದರು. ಮಾದಕ ವಸ್ತು ಮಾರಾಟ ಜಾಲ ಪತ್ತೆಗೆ ಸೂಚನೆ
ಮಾದಕ ವಸ್ತುಗಳ ಮಾರಾಟ ವಿದ್ಯಾರ್ಥಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಮಾದಕ ವಸ್ತು ಮಾರಾಟಗಾರರನ್ನು ಬಂಧಿಸುವುದರ ಜತೆಗೆ ಅದು ಎಲ್ಲಿಂದ ಸರಬರಾಜು ಆಗುತ್ತಿದೆ ಎಂಬುದನ್ನು ಪತ್ತೆಹಚ್ಚುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಾದಕ ವಸ್ತುಗಳ ಮಾರಾಟದ ಮೂಲಬೇರು ಪತ್ತೆ ಹಚ್ಚಿ ಕಡಿವಾಣ ಹಾಕುವಂತೆಯೂ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು. ರಾಜ್ಯದಲ್ಲಿ 2016ಕ್ಕೆ ಹೋಲಿಸಿದರೆ 2017ರಲ್ಲಿ ಅಪರಾಧಗಳ ಸಂಖ್ಯೆ ಕೊಂಚ ಇಳಿಮುಖವಾಗಿದೆ. ರಾಜ್ಯದಲ್ಲಿ ಶೇ.1ರಷ್ಟು, ರಾಷ್ಟ್ರೀಯ ಮಟ್ಟದಲ್ಲಿ ಶೇ.6ರಷ್ಟು ಕಡಿಮೆಯಾಗಿದೆ. ಇನ್ನೂ ಗಣನೀಯವಾಗಿ ಕಡಿಮೆ ಮಾಡಲು ಕ್ರಮಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಈ ವೇಳೆ ಗೃಹ ಸಚಿವ ರಾಮಲಿಂಗಾರೆಡ್ಡಿ, ಸರ್ಕಾರದ ಮುಖ್ಯಕಾರ್ಯದರ್ಶಿ ರತ್ನಪ್ರಭಾ, ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು, ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ, ಮುಖ್ಯಮಂತ್ರಿಯರ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಸೇರಿ ಹಿರಿಯ ಮತ್ತು ಕಿರಿಯ ಐಪಿಎಸ್ ಅಧಿಕಾರಿಗಳು ಇದ್ದರು. ಗುಪ್ತದಳ ವಿಭಾಗಕ್ಕೆಂದೇ ಪ್ರತ್ಯೇಕ ನೇಮಕಾತಿ ಪ್ರಕ್ರಿಯೆ ನಡೆಸಲು ಆದೇಶಿಸಲಾಗಿದೆ. ಅದರಂತೆ ಸಂದರ್ಶನ ಪ್ರಕ್ರಿಯೆ ನಡೆಯುತ್ತಿದೆ. ನೇಮಕ ಪ್ರಕ್ರಿಯೆ ವಿಶೇಷವಾಗಿ ನಡೆಯುತ್ತಿದೆ. ನೇಮಕಗೊಂಡ ಸಿಬ್ಬಂದಿಗೆ ಅತ್ಯಾಧುನಿಕ ತರಬೇತಿ ನೀಡಿ ಸಮರ್ಥರನ್ನಾಗಿ ರೂಪಿಸಲಾಗುವುದು ಎಂದು ಹೇಳಿದರು. ಗುಪ್ತಚರ ದಳಕ್ಕೆ ವರ್ಗಾವಣೆ ಎಂದರೆ ಅದೊಂದು ಶಿಕ್ಷೆ ಎಂಬ ಮಾತು ಇಲಾಖೆಯಲ್ಲಿದೆ. ಕೆಲವೊಮ್ಮೆ ಸಾಮಾನ್ಯ ಪೊಲೀಸ್ ವಿಭಾಗದಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಪೊಲೀಸರನ್ನು ಗುಪ್ತಚರ ವಿಭಾಗಕ್ಕೆ ವರ್ಗಾವಣೆ ಮಾಡುವುದೂ ಇದೆ. ಈ ಸಮಸ್ಯೆ ತಪ್ಪಿಸಿ ಗುಪ್ತಚರ ವಿಭಾಗವನ್ನು ಶಕ್ತಿಯುತವಾಗಿ ರೂಪಿಸಲು ಪ್ರತ್ಯೇಕ ನೇಮಕಾತಿ ನಡೆಸಲಾಗುತ್ತಿದೆ. ಒಮ್ಮೆ ಗುಪ್ತಚರ ದಳಕ್ಕೆ ನೇಮಕಗೊಂಡರೆ ನಿವೃತ್ತಿವರೆಗೆ ಅಲ್ಲೇ ಕಾರ್ಯನಿರ್ವಹಿಸಬೇಕು ಎಂದರು. ಗುಪ್ತಚರ ದಳ ಸಮರ್ಥವಾಗಿ ಕೆಲಸ ನಿರ್ವಹಿಸಿದರೆ ದೊಡ್ಡ ಮಟ್ಟದ ಅಪರಾಧಗಳನ್ನು ತಡೆಯಬಹುದು. ಪ್ರಮುಖವಾಗಿ ಗುಪ್ತಚರ ದಳದ ಅಪರಾಧ ವಿಭಾಗ ಬಲಪಡಿಸಿ, ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗಬೇಕು. ದರೋಡೆ, ಕಳ್ಳತನ, ಸರಗಳ್ಳತನ, ಮತೀಯವಾದ, ಗೂಂಡಾಗಿರಿಗೆ ಕಾರಣರಾಗುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕು. ಅದರ ಬದಲು ಅಪರಾಧಗಳು ಹೆಚ್ಚಾದರೆ ಆಯಾ ಪೊಲೀಸ್ ಠಾಣಾಧಿಕಾರಿ ಹಾಗೂ ಜಿಲ್ಲಾ ವರಿಷ್ಠಾಧಿಕಾರಿಗಳು ಹೊಣೆಯಾಗುತ್ತಾರೆ ಎಂದು ಎಚ್ಚರಿಸಿದರು.