ಪಾಟ್ನಾ : ನಿರ್ಣಾಯಕ ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದ ನಂತರ ಪಾಟ್ನಾದಲ್ಲಿ ಪ್ರತಿಪಕ್ಷ ನಾಯಕರ ಸಭೆ ನಡೆಯಬಹುದು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶನಿವಾರ ಸುಳಿವು ನೀಡಿದ್ದಾರೆ. ಹಲವು ಪ್ರಮುಖ ನಾಯಕರು ಕರ್ನಾಟಕದಲ್ಲಿ ಚುನಾವಣ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ಸಭೆಯಲ್ಲಿ ಪ್ರತಿಪಕ್ಷಗಳ ಒಗ್ಗಟ್ಟಿನ ರಚನೆಗೆ ಸಂಬಂಧಿಸಿದ ವಿಷಯಗಳು ಹೊರಬೀಳುವ ನಿರೀಕ್ಷೆಯಿದೆ ಎಂದು ಜೆಡಿ (ಯು) ವರಿಷ್ಠರು ಹೇಳಿದ್ದಾರೆ.
2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ವಿರೋಧ ಪಕ್ಷಗಳ ಮೈತ್ರಿಕೂಟ ರಚನೆಗೆ ಸಂಬಂಧಿಸಿದಂತೆ ನಾವು ಖಂಡಿತವಾಗಿಯೂ ಒಟ್ಟಿಗೆ ಕುಳಿತು ಚರ್ಚಿಸುತ್ತೇವೆ. ಕರ್ನಾಟಕ ಚುನಾವಣೆ ಮುಗಿದ ನಂತರ, ನಾವು ನಮ್ಮ ಸಭೆಯ ಸ್ಥಳವನ್ನು ಅಂತಿಮಗೊಳಿಸುತ್ತೇವೆ. ಪ್ರತಿಪಕ್ಷ ನಾಯಕರ ಸಭೆಯ ಮುಂದಿನ ಸ್ಥಳವಾಗಿ ಪಾಟ್ನಾವನ್ನು ಸರ್ವಾನುಮತದಿಂದ ನಿರ್ಧರಿಸಿದರೆ, ಅದನ್ನು ಇಲ್ಲಿಯೇ ನಡೆಸಲಾಗುವುದು ಎಂದು ಕುಮಾರ್ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಎ 24 ರಂದು ಕೋಲ್ಕತಾದಲ್ಲಿ ನಿತೀಶ್ ಕುಮಾರ್ ಮತ್ತು ಆರ್ ಜೆಡಿ ನಾಯಕ, ಬಿಹಾರ ಡಿಸಿಎಂ ತೇಜಸ್ವಿ ಯಾದವ್ ಅವರನ್ನು ಭೇಟಿಯಾದ ನಂತರ, ಮುಂಬರುವ ಲೋಕಸಭೆ ಚುನಾವಣೆಗಾಗಿ ಪಾಟ್ನಾದಲ್ಲಿ ಎಲ್ಲಾ ಬಿಜೆಪಿಯೇತರ ಪಕ್ಷಗಳ ಸಭೆಯನ್ನು ಆಯೋಜಿಸಲು ಪ್ರತಿಪಕ್ಷಗಳಿಗೆ ಮನವಿ ಮಾಡಿರುವುದನ್ನು ಸ್ಮರಿಸಬಹುದು.
“ನಾನು ನಿತೀಶ್ ಕುಮಾರ್ ಅವರಿಗೆ ಒಂದೇ ಒಂದು ವಿನಂತಿಯನ್ನು ಮಾಡಿದ್ದೇನೆ. ಜಯಪ್ರಕಾಶರ ಆಂದೋಲನ ಆರಂಭವಾದದ್ದು ಬಿಹಾರದಿಂದ. ನಾವು ಬಿಹಾರದಲ್ಲಿ ಸರ್ವಪಕ್ಷ ಸಭೆ ನಡೆಸಿದರೆ, ನಾವು ಮುಂದೆ ಎಲ್ಲಿಗೆ ಹೋಗಬೇಕು ಎಂಬುದನ್ನು ನಾವು ನಿರ್ಧರಿಸಬಹುದು ಎಂದು ಕೋಲ್ಕತಾದಲ್ಲಿ ಕುಮಾರ್ ಅವರೊಂದಿಗಿನ ಸಭೆಯ ನಂತರ ಬ್ಯಾನರ್ಜಿ ಹೇಳಿದ್ದರು.
‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ದೇಶದಲ್ಲಿ ಹೆಚ್ಚು ಹೆಚ್ಚು ಪಕ್ಷಗಳನ್ನು ಒಗ್ಗೂಡಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ನಾನು ಇತ್ತೀಚೆಗೆ ಹಲವಾರು ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗಿದ್ದೆ. ಈಗ ನಾನು ಇತರ ಬಿಜೆಪಿಯೇತರ ಪಕ್ಷಗಳೊಂದಿಗೆ ಮಾತನಾಡುತ್ತೇನೆ … ಸಾರ್ವತ್ರಿಕ ಚುನಾವಣೆಗೆ ಮುನ್ನ ವಿರೋಧ ಪಕ್ಷಗಳನ್ನು ಒಗ್ಗೂಡಿಸುವುದು ನನ್ನ ಗುರಿಯಾಗಿದೆ ಎಂದು ಅವರು ಹೇಳಿದ್ದರು.