ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಒಂದೇ ಟಿಕೆಟ್ ನೀಡಿರುವುದಕ್ಕೆ ಸಮುದಾಯದಲ್ಲಿ ಅಸಮಾಧಾನ ಮನೆ ಮಾಡಿದ್ದು, ಪಕ್ಷದ ಈ ಧೋರಣೆಯಿಂದ ಬೇಸತ್ತಿರುವ ಮುಸ್ಲಿಂ ಸಮುದಾಯದ ಮುಖಂಡರು ಶನಿವಾರ ಸಭೆ ಕರೆದಿದ್ದಾರೆ.
ಸಭೆಯಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಿದ್ದಾರೆ.ಕಾಂಗ್ರೆಸ್‌ನ್ನು ಮುಸ್ಲಿಂ ಸಮುದಾಯ ನಿರಂತರವಾಗಿ ಬೆಂಬಲಿಸುತ್ತ ಬಂದಿದ್ದರೂ, ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡುವಲ್ಲಿ ಅನ್ಯಾಯ ಮಾಡಿದೆ. ಬೀದರ್, ಹಾವೇರಿ, ಬೆಂಗಳೂರು ಕೇಂದ್ರ ಹಾಗೂ ಮಂಗಳೂರು ಲೋಕಸಭಾ ಕ್ಷೇತ್ರಗಳಲ್ಲಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಮುಸ್ಲಿಂ ಮುಖಂಡರು ಕಾಂಗ್ರೆಸ್‌ನ ರಾಜ್ಯ ಹಾಗೂ ಹೈಕಮಾಂಡ್ ನಾಯಕರ ಮುಂದೆ ಮನವಿ ಸಲ್ಲಿಸಿದ್ದರು.
ಪ್ರತಿ ಬಾರಿ ಎರಡು ಅಥವಾ ಮೂರು ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುವ ಸಂಪ್ರದಾಯವನ್ನು ಕಾಂಗ್ರೆಸ್ ಮುಂದುವರಿಸಿಕೊಂಡು ಬಂದಿತ್ತು. ಅದೇ ಲೆಕ್ಕಾಚಾರದಲ್ಲಿ ಈ ಬಾರಿ ನಾಲ್ಕು ಕಡೆ ಟಿಕೆಟ್ ಕೇಳಿದ್ದರು. ಕೊನೆಪಕ್ಷ ಬೆಂಗಳೂರು ಕೇಂದ್ರ ಹಾಗೂ ಹಾವೇರಿಯಲ್ಲಿ ಟಿಕೆಟ್ ದೊರೆಯುತ್ತದೆ ಎಂಬ ಲೆಕ್ಕಾಚಾರದಲ್ಲಿ ಮುಸ್ಲಿಂ ಸಮುದಾಯದ ನಾಯಕರಿದ್ದರು. ಹಾವೇರಿ ಕ್ಷೇತ್ರದ ಟಿಕೆಟ್ ತಪ್ಪಿದ್ದರಿಂದ ಧಾರವಾಡದಲ್ಲಿ ಮಾಜಿ ಸಂಸದ ಐ.ಜಿ.ಸನದಿ ಅಥವಾ ಅವರ ಪುತ್ರ ಶಾಕೀರ್ ಸನದಿಗೆ ಸಾಮಾಜಿಕ ನ್ಯಾಯದ ಅಡಿಯಲ್ಲಿ ಟಿಕೆಟ್ ದೊರೆಯುವ ವಿಶ್ವಾಸದಲ್ಲಿದ್ದರು.
ಆದರೆ, ಧಾರವಾಡದಲ್ಲಿ ಟಿಕೆಟ್ ಕೈತಪ್ಪಿರುವುದರಿಂದ ಸಮುದಾಯದ ನಾಯಕರು ಬೇಸರಗೊಂಡಿದ್ದಾರೆ. ಈ ಬೆಳವಣಿಗೆ ನಂತರ ಸಮಾಜದ ಕೆಲವು ಉದ್ಯಮಿಗಳು, ಕಾಂಗ್ರೆಸ್‌ನ ಮುಸ್ಲಿಂ ಮುಖಂಡರನ್ನು ಭೇಟಿ ಮಾಡಿ, ಈ ಬಗ್ಗೆ ಕಾಂಗ್ರೆಸ್ ವರಿಷ್ಠರ ಗಮನ ಸೆಳೆಯುವಂತೆ ಒತ್ತಡ ಹೇರಿದ್ದರು ಎಂದು ತಿಳಿದು ಬಂದಿದೆ.
ಈಗಾಗಲೇ ಬೀದರ್‌ನಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿಲ್ಲ ಎನ್ನುವ ಕಾರಣಕ್ಕೆ ಸ್ಥಳೀಯ ಮುಸ್ಲಿಂ ಮುಖಂಡರು ಬಿಎಸ್‌ಪಿ ಜತೆ ಕೈ ಜೋಡಿಸಿ ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ್ದಾರೆ. ಕಲಬುರಗಿ ಹಾಗೂ ಕೋಲಾರದಲ್ಲಿಯೂ ಅಲ್ಪಸಂಖ್ಯಾತ ಮುಖಂಡರು ಕಾಂಗ್ರೆಸ್ ಧೋರಣೆಯಿಂದ ಬೇಸತ್ತು ಅಂತರ ಕಾಯ್ದುಕೊಳ್ಳಲು ಸ್ಥಳೀಯವಾಗಿ ನಿರ್ಧರಿಸಿದ್ದಾರೆಂದು ತಿಳಿದು ಬಂದಿದೆ. ಮಾಜಿ ಸಚಿವ ದಿ.ಜಾಫರ್ ಷರೀಫ್ ನಂತರ ರಾಜ್ಯದಿಂದ ಮುಸ್ಲಿಂ ಸಂಸದರು ಆಯ್ಕೆಯಾಗಿಲ್ಲ.
ಇವೆಲ್ಲದರ ಬಗ್ಗೆ ಚರ್ಚಿಸಲು ಶನಿವಾರ ಸಮುದಾಯದ ಮುಖಂಡರು, ಮೌಲ್ವಿಗಳು, ಉದ್ಯಮಿಗಳು ಹಾಗೂ ಕಾಂಗ್ರೆಸ್‌ನ ಕೆಲವು ಮುಸ್ಲಿಂ ಮುಖಂಡರು ಸಭೆ ಸೇರಲಿದ್ದಾರೆ. ಮುಂದಿನ ರಾಜಕೀಯ ನಡೆ ಬಗ್ಗೆ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.