ಬೀದರ: ರೈತರ ಆದಾಯ ಇಮ್ಮಡಿ ಆಗಬೇಕಾದರೆ ಮಾರುಕಟ್ಟೆ ಮತ್ತು ರಫ್ತು ಅಗತ್ಯತೆ ಇದೆ. ಹೀಗಾಗಿ ದಕ್ಷಿಣ ಭಾರತ ಮಟ್ಟದ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ರಫ್ತುದಾರರು, ಉದ್ಯಮಿಗಳು ಹಾಗೂ ತಜ್ಞರ ಸಭೆಯನ್ನು ಸೆ. 22 ರಂದು ಬೆಂಗಳೂರಿನಲ್ಲಿ ನಡೆಸಲಾಗುತ್ತಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ತಾಲೂಕಿನ ಆಣದೂರ ಗ್ರಾಮದ ಪಿಕೆಪಿಎಸ್‌ನಲ್ಲಿ ಎಂಎಸ್‌ಪಿ ದರದಲ್ಲಿ ಉದ್ದು ಮತ್ತು ಹೆಸರು ಖರೀದಿ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕೃಷಿ ಉತ್ಪಾದನೆಯಲ್ಲಿ ಒಂದೊಂದು ರಾಜ್ಯ ವಿಶೇಷತೆ ಹೊಂದಿದೆ. ದೇಶದಲ್ಲಿ ಕೋವಿಡ್ ನಡುವೆಯೂ ಬೆಳೆ ಉತ್ಪಾದನೆ ಪ್ರಮಾಣ ಹೆಚ್ಚಾಗಿದ್ದು, ಹೆಚ್ಚುವರಿ ಬೆಳೆಯನ್ನು ಹೇಗೆ ರಫ್ತು ಮಾಡಬೇಕೆಂಬ ಚಿಂತನೆ ನಡೆದಿದೆ. ಈ ದಿಸೆಯಲ್ಲಿ ದೇಶದ ಒಳಗಿನ ಮಾರುಕಟ್ಟೆ, ವಿದೇಶದಲ್ಲಿ ಯಾವುದಕ್ಕೆ ಬೇಡಿಕೆ ಇದೆ. ಇದರ ಆಧಾರದ ಮೇಲೆ ರೈತರು ಯಾವುದನ್ನು ಬೆಳೆಯಬೇಕು, ಹೇಗೆ ಮಾರುಕಟ್ಟೆ ಮಾಡಬೇಕು, ಜತೆಗೆ ಕೃಷಿಕರ ಅಪೇಕ್ಷೆಗಳ ಕುರಿತಂತೆ ಸಮಗ್ರವಾಗಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಕೃಷಿ ಅಭಿವೃದ್ಧಿಗಾಗಿ ಪ್ರಧಾನಿ ಮೋದಿ ಅವರು ಒಂದು ಲಕ್ಷ ಕೋಟಿ ರೂ. ಅನುದಾನ ಮೀಸಲಿಟ್ಟಿದ್ದಾರೆ. ಸಣ್ಣ ಸಣ್ಣ ರೈತರು ಒಟ್ಟಾಗಿ ಬೆಳೆಯಲು ಉತ್ಪಾದಕರ ಸಂಘಗಳ ರಚನೆ ಮಾಡುವುದು ಮತ್ತು ಎಣ್ಣೆ ಕಾಳು ಹೆಚ್ಚಾಗಿ ಬೆಳೆಯಬೇಕೆಂಬುದು ಪ್ರಧಾನಿಗಳ ಮನವಿ ಆಗಿದೆ. ದೇಶದಲ್ಲಿ ಶೇ. 70ರಷ್ಟು ಖ್ಯಾದ್ಯ ತೈಲಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಎಣ್ಣೆ ಕಾಳು ಕೃಷಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ರೈತರಿಗೆ ಉಚಿತ ಕಿಟ್, ಬೀಜ ವಿತರಣೆ ಚಿಂತನೆ ನಡೆದಿದೆ ಎಂದು ಹೇಳಿದರು.
ರೈತರ ಬೇಡಿಕೆ ಮತ್ತು ಮಾರುಕಟ್ಟೆಯಲ್ಲಿ ಬೆಳೆ ದರ ಹೆಚ್ಚಳವಾಗಲಿ ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರದ ಎಂಎಸ್‌ಪಿ ದರದಲ್ಲಿ ಉದ್ದು ಹಾಗೂ ಹೆಸರು ಖರೀದಿಗೆ ಚಾಲನೆ ನೀಡಲಾಗಿದೆ. ಪ್ರತಿ ಟನ್ ಹೆಸರು ಬೆಳೆಗೆ ೭೨೭೫ ರೂ. ದರ ನಿಗದಿ ಮಾಡಿದ್ದು, ೩೦ ಸಾವಿರ ಮಿ.ಟನ್ ಖರೀದಿ ಮತ್ತು ಟನ್ ಉದ್ದು ಬೆಳೆಗೆ ೬೩೦೦ ರೂ.ಯಂತೆ ೧೦ ಸಾವಿರ ಮಿ.ಟನ್ ಖರೀದಿಗೆ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಪ್ರತಿ ರೈತರಿಂದ ೨೦ ಕ್ವಿಂ. ಉದ್ದು ಮತ್ತು ಹೆಸರು ಬೆಳೆ ಖರೀದಿ ಮಾಡುವುದು ಮತ್ತು ತೊಗರಿ ಎಂಎಸ್‌ಪಿ ದರ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ರೈತರು ಸಲ್ಲಿಸಿದ್ದಾರೆ. ಈ ಕುರಿತು ಸಂಬಂಧಪಟ್ಟ ಸಚಿವರು, ಅಧಿಕಾರಿಗಳ ಜತೆ ಚರ್ಚಿಸಿ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ಸಚಿವೆ ಶೋಭಾ ಕರಂದ್ಲಾಜೆ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಪ್ರಭು ಚವ್ಹಾಣ, ಶಾಸಕ ಬಂಡೆಪ್ಪ ಖಾಶೆಂಪುರ್, ಕೆಎಸ್‌ಐಐಡಿಸಿ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ಬುಡಾ ಅಧ್ಯಕ್ಷ ಬಾಬು ವಾಲಿ, ಜಿಪಂ ಸದಸ್ಯೆ ಶಕುಂತಲಾ ಬೆಲ್ದಾಳೆ, ಜಿಪಂ ಸಿಇಒ ಜಹೀರಾ ನಸೀಮ್, ಉಪ ವಿಭಾಗಾಧಿಕಾರಿ ಗರೀಮಾ ಪನ್ವಾರ್, ಕೃಷಿ ಜಂಟಿ ನಿರ್ದೇಶಕಿ ತಾರಾಮಣಿ ಇದ್ದರು.