ನೆಲಮಂಗಲ: ನಗರದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಸೋಮ ವಾರ 11ಗಂಟೆಗೆ ರೈತರು ಹಾಗೂ ರೈತ ಸಂಘಟನೆ ಮುಖಂಡರಿಗೆ ರೈತರ ಕುಂದುಕೊರತೆ ಸಭೆಗೆ ಹಾಜರಾಗುವಂತೆ ಆಹ್ವಾನಿಸಲಾಗಿತ್ತು. ಆದರೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಸಭೆಯಿದೆ ಎಂಬ ಕಾರಣಹೇಳಿ ತಹಶೀಲ್ದಾರ್ ರೈತರ ಸಭೆ ರದ್ದು ಮಾಡಿದ್ದು, ಈ ವಿಚಾರ ರೈತರಿಗೆ ಹಾಗೂ ರೈತ ಪರ ಸಂಘಟನೆಗಳ ಮುಖಂಡರಿಗೆ ತಿಳಿಸದಿರುವ ಕಾರಣ ಸಭೆಗೆ ಹಾಜರಾಗಿದ್ದ ರೈತ ಮುಖಂಡರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಅರುಣ್‌ಕುಮಾರ್ ಮಾತನಾಡಿ,ಅನೇಕ ತಿಂಗಳ ನಂತರ ರೈತರನ್ನು ಕುಂದುಕೊರತೆ ಸಭೆಗೆ ಕರೆದಿದ್ದಾರೆ ಎಂಬ ಸಂತೋಷವಾಗಿತ್ತು. ಆದರೆ ಸಭೆ ರದ್ದು ಮಾಡಿರುವ ಬಗ್ಗೆ ರೈತರಿಗೆ ಮಾಹಿತಿ ನೀಡದೇ ಅಧಿಕಾರಿಗಳು ಗೈರಾದರೆ ನಾವು ಸಭೆಗೆ ಬಂದು ಏನು ಮಾಡುವುದು. ರೈತರನ್ನು ಸಂಪೂರ್ಣವಾಗಿ ಕಡೆಗಣಿಸುತಿದ್ದು, ಗ್ರಾಮಲೆಕ್ಕಾಧಿ ಕಾರಿಗಳು, ರಾಜಸ್ವನಿರೀಕ್ಷಕರು ಮಾಹಿತಿ ನೀಡಲು ಮುಂದಾಗುತಿಲ್ಲ ಎಂದು ಆರೋಪಿಸಿದರು.
ಹೊಲದ ಕೆಲಸ ಬಿಟ್ಟು ಸಭೆಗೆ ಬಂದಿದ್ದೇವೆ. ಇದೇ ರೀತಿ ಮಾಡಿದರೆ ನಮ್ಮ ದನಕರುಗಳನ್ನು ತಂದು ತಾಲೂಕು ಕಚೇರಿ ಮುಂದೆ ಧರಣಿ ಮಾಡುತ್ತೇವೆ. ತಾಲೂಕು ಕಚೇರಿಯಲ್ಲಿ ರೈತರನ್ನು ಸುಲಿಗೆ ಮಾಡುವ ಅಧಿಕಾರಿಗಳು ಹುಟ್ಟುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಿಸಾನ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಪ್ರದೀಪ್ ಮಾತನಾಡಿ, ರೈತರು ತಾಲೂಕು ಕಚೇರಿಯಲ್ಲಿ ಕೆಲಸಕ್ಕೆ ಬಂದರೆ ಅಧಿಕಾರಿಗಳು ಕಡೆಗಣಿಸುತ್ತಾರೆ. ಇದೇ ರೀತಿ ಅಧಿಕಾರಿಗಳು ವರ್ತನೆ ತೋರಿದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತೀಯ ಕಿಸಾನ್ ಸಂಘದ ಜಿಲ್ಲಾ ಕಾರ್ಯದರ್ಶಿ ಜಯರಾ ಮಯ್ಯ, ತಾಲೂಕು ಅಧ್ಯಕ್ಷ ನಾಗೇಶ್, ಪ್ರಧಾನ ಕಾರ್ಯದರ್ಶಿ ಹರೀಶ್, ಪರಿಸರ ಪ್ರೇಮಿ ಗಂಗಣ್ಣ, ಮಾಜಿ ಸೈನಿಕ ಮಿಲ್ಟ್ರಿಮೂರ್ತಿ, ರೈತರಾದ ಲಕ್ಷಣಪ್ಪ, ಶಿವಗಂಗಯ್ಯ, ಜಗದೀಶ್, ಲಕ್ಷ್ಮೀ ಕಾಂತ್, ಪಾಪೇಗೌಡ, ಉಮೇಶ್ ಮತ್ತಿತರರಿದ್ದರು.