ಕಲಬುರಗಿ: ಗ್ರಾಪಂ ಚುನಾವಣೆ ಪ್ರಚಾರಕ್ಕೆ ಐದಕ್ಕಿಂತ ಹೆಚ್ಚಿನ ಜನ ಸೇರಬಾರದು. ಬೈಕ್ ರ್ಯಾಲಿ ಮಾಡುವಂತಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಚುನಾವಣೆ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅಧಿಕಾರಿಗಳಿಗೆ ಸೂಚಿಸಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಕಂದಾಯ, ಪೊಲೀಸ್, ಅಬಕಾರಿ ಸೇರಿದಂತೆ ಇನ್ನಿತರ ಇಲಾಖೆ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಅವರು ಮಾತನಾಡಿದರು.
ಶಾಂತಿಯುತ ಚುನಾವಣೆ, ಅಕ್ರಮ ಚಟುವಟಿಕೆ ನಿಯಂತ್ರಿಸಲು ರಾಜ್ಯ ಚುನಾವಣೆ ಆಯೋಗ ಜಾರಿಗೊಳಿಸಿರುವ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಬೇಕು. ಮತದಾನಕ್ಕಾಗಿ ಮುಂಜಾಗ್ರತಾ ಕ್ರಮವಾಗಿ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತ ಗಟ್ಟೆಗಳ ಕುರಿತು ಪೊಲೀಸ್ ಅಧಿಕಾರಿಗಳು, ತಹಶೀಲ್ದಾರರು ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕು ಎಂದು ಹೇಳಿದರು.
ಜಿಲ್ಲೆಯ ಗಡಿ ಭಾಗದಲ್ಲಿ ಸೆಕ್ಟರ್ ಅಧಿಕಾರಿಗಳು, ಎಂಸಿಸಿ ಅಧಿಕಾರಿಗಳ ತಂಡದ ಸಹಕಾರದೊಂದಿಗೆ ಅಬಕಾರಿ ಇಲಾಖೆ ಅಧಿಕಾರಿಗಳು ಅಕ್ರಮ ಮದ್ಯ ಸಾಗಾಣಿಕೆಯಾಗದಂತೆ ಕಟ್ಟೆಚ್ಚರ ವಹಿಸಬೇಕು. ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕೆ ಪರವಾನಗಿ ಹೊಂದಿರುವ ಅಂಗಡಿಗಳು, ದಾಸ್ತಾನು, ಮಾರಾಟದ ಸಂಪೂರ್ಣ ಅಂಕಿ-ಅಂಶವುಳ್ಳ ಮಾಹಿತಿ ನೀಡಬೇಕು ಎಂದು ಅಬಕಾರಿ ಇಲಾಖೆ ಪ್ರಭಾರಿ ಉಪ ಆಯುಕ್ತೆ ಶಶಿಕಲಾ ಒಡೆಯರ್ ಅವರಿಗೆ ಸೂಚಿಸಿದರು.
ಜಿ.ಪಂ ಸಿಇಒಗಳಾದ ಎಂಸಿಸಿ ನೋಡಲ್ ಅಧಿಕಾರಿ ಡಾ| ರಾಜಾ ಪಿ. ಮಾತನಾಡಿ, ಆಯೋಗದ ಮಾರ್ಗಸೂಚಿಗಳ ಅನ್ವಯ ಈಗಾಗಲೇ ಚಾಲನೆಯಲ್ಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದರೆ, ಅವುಗಳನ್ನು ಮುಂದುವರಿಸಬೇಕು. ಹೊಸದಾಗಿ ಯಾವುದೇ ಕಾಮಗಾರಿಗಳನ್ನು ಆರಂಭಿಸುವಂತಿಲ್ಲ.ಅಲ್ಲದೇ ಹೊಸದಾಗಿ ನೇಮಕಾತಿ ಆದೇಶ ನೀಡುವಂತಿಲ್ಲ ಎಂದರು. ಎಸ್‌ಪಿ ಡಾ| ಸಿಮಿ ಮರಿಯಂ ಜಾರ್ಜ್, ಡಿಸಿಪಿ ಕಿಶೋರ ಬಾಬು, ಸಹಾಯಕ ಆಯುಕ್ತರಾದ ರಾಮಚಂದ್ರ ಗಡಾದೆ, ರಮೇಶ ಕೋಲಾರ ಹಾಗೂ ಜಿಲ್ಲೆಯ ತಹಶೀಲ್ದಾರರು ಹಾಜರಿದ್ದರು.
ಮತಪೆಟ್ಟಿಗೆ ಮೂಲಕ ಚುನಾವಣೆ ನಡೆಸಬೇಕಿರುವ ಕಾರಣ ಬ್ಯಾಲೆಟ್ ಪೇಪರ್ ಸಿದ್ಧಪಡಿಸಬೇಕು. ಮಸ್ಟರಿಂಗ್ ಮತ್ತು ಡೀ-ಮಸ್ಟರಿಂಗ್ ಕಾರ್ಯ ಸಮರ್ಪಕವಾಗಿ ನಿರ್ವಹಿಸಬೇಕು.
–ವಿ.ವಿ. ಜ್ಯೋತ್ಸ್ನಾ, ಜಿಲ್ಲಾಧಿಕಾರಿ