ಶಿಡ್ಲಘಟ್ಟ: ಚಿಕ್ಕಬಳ್ಳಾಪುರ ನಗರದಲ್ಲಿ ಪ್ರತಿನಿತ್ಯ 50 ಮನೆಗಳಿಗೆ ಖುದ್ದಾಗಿ ನೋಡಲ್ ಅಧಿಕಾರಿಗಳು ಭೇಟಿ ನೀಡಿ ಮನೆಯ ಸದಸ್ಯರ ದಿನನಿತ್ಯದ ಆರೋಗ್ಯದ ಮಾಹಿತಿ ಪಡೆದುಕೊಳ್ಳಬೇಕು. ಕೋವಿಡ್ ದಿಂದ ಯಾವುದೇ ವ್ಯಕ್ತಿ ಸಾವನ್ನಪ್ಪಿದರೆ ಅಲ್ಲಿನ ಅಧಿಕಾರಿಯನ್ನು ಹೊಣೆಗಾರರನ್ನಾಗಿಸಿಕೊಂಡು ಅವರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ಜಿಲ್ಲಾಧಿಕಾರಿ ಆರ್. ಲತಾ ಅಧಿಕಾರಿಗಳಿಗೆ ಎಚ್ಚರಿಸಿದರು.
ಚಿಕ್ಕಬಳ್ಳಾಪುರ ನಗರಸಭೆಯ ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಕೋವಿಡ್ ನಿಯಂತ್ರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರದಲ್ಲಿ ಕೋವಿಡ್ ಪ್ರಕರಣ ಇರುವುದರಿಂದ ಎಲ್ಲಾ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಮುಖ್ಯವಾಗಿ ಸಾರ್ವಜನಿಕರು ತಮ್ಮ ಮನೆಗಳ ಮುಂದೆ ಸ್ವಚ್ಛತೆ ಕಾಪಾಡಬೇಕು. ಮನೆಯ ಕಸವನ್ನು ಹಸಿ ಹಾಗೂ ಒಣಕಸವನ್ನಾಗಿ ಬೇರ್ಪಡಿಸಿ ಹಾಕಬೇಕು ಎಂದರು.
ಹಿರಿಯರ ಬಗ್ಗೆ ಕಾಳಜಿ ವಹಿಸಿ: ಜಿಲ್ಲೆಯಲ್ಲಿ ಕೋವಿಡ್ ದಿಂದ ಸಾವು ಸಂಭವಿಸುತ್ತಿದೆ. ಕೋವಿಡ್ ಬಂದಿರುವ ವ್ಯಕ್ತಿಗಳು ತಮಗೆ ಕೊರೊನಾ ಲಕ್ಷಣ ಗೋಚರಿಸಿದಾಗ ಯಾವುದೋ ಒಂದು ಮಾತ್ರೆ ಸೇವಿಸಿ ಸುಮ್ಮನಾಗುತ್ತಾರೆ. ತೀರಾ ಆರೋಗ್ಯದ ಸ್ಥಿತಿ ಹದಗೆಟ್ಟಾಗ ಆಸ್ಪತ್ರೆ ಬಳಿ ಬರುತ್ತಾರೆ. ಚಿಕಿತ್ಸೆ ಫಲಕರಿಸದೆ ಸಾವನ್ನಪ್ಪುತ್ತಿದ್ದಾರೆ. ಆದ್ದರಿಂದ ಪ್ರತಿಯೊಂದು ಮನೆಗಳಲ್ಲಿನ 60 ವರ್ಷ ಮೇಲ್ಪಟ್ಟವರನ್ನು ಸೂಕ್ಷ್ಮವಾಗಿ ನೋಡಿ ಕೊಳ್ಳಬೇಕೆಂದರು. ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಭಾಸ್ಕರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಣುಕಾ, ನಗರಸಭೆ ಪೌರಾಯುಕ್ತ ಲೋಹಿತ್ ಸೇರಿದಂತೆ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು. ನಂದಿ ಗಿರಿಧಾಮ ವಿಶೇಷಾಧಿಕಾರಿ ಎನ್.ಗೋಪಾಲ್, ಪ್ರವಾಸೋದ್ಯಮ ವ್ಯವಸ್ಥಾಪಕ ಮಂಜೇಗೌಡ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಣುಕಾ, ನಗರಸಭೆ ಪೌರಾಯುಕ್ತ ಲೋಹಿತ್ ಉಪಸ್ಥಿತರಿದ್ದರು.