Advertisement

ಮಳೆ ಹಾನಿ ಸ್ಥಳಗಳಿಗೆ ಮೇಯರ್‌ ಭೇಟಿ

12:38 PM May 30, 2017 | |

ಬೆಂಗಳೂರು: ಬೆಳ್ಳಂದೂರು ವಾರ್ಡ್‌ನ ಕಾಡುಬೀಸನಹಳ್ಳಿಯಲ್ಲಿ ಬಿರುಕುಬಿಟ್ಟಿದ್ದ ಯುಟೋಪಿಯಾ ಅಪಾರ್ಟ್‌ಮೆಂಟ್‌ ಹಾಗೂ ಜೆ.ಸಿ.ರಸ್ತೆಯ ಹಿಂಭಾಗದ ರಾಮಣ್ಣ ಕಾಲೋನಿಯಲ್ಲಿ ಮನೆ ಕುಸಿದಿರುವ ಪ್ರದೇಶಗಳಿಗೆ ಸೋಮವಾರ ಮೇಯರ್‌ ಜಿ.ಪದ್ಮಾವತಿ ಭೇಟಿ ನೀಡಿ ಪರಿಶೀಲಿಸಿದರು.

Advertisement

ಎರಡು ದಿನಗಳಿಂದ ಸುರಿದ ಮಳೆಯಿಂದ ಹಲವು ಕಟ್ಟಡಗಳು ಹಾನಿಯಾಗಿದ್ದು, ಯುಟೋಪಿಯಾ ಅಪಾರ್ಟ್‌ನ ಹಲವು ಭಾಗಗಳಲ್ಲಿ ಬಿರುಕು ಬಿಟ್ಟಿದೆ. ಇದರಿಂದಾಗಿ ಅಪಾರ್ಟ್‌ಮೆಂಟ್‌ಗೆ ಯಾವುದೇ ತೊಂದರೆಯಿಲ್ಲ. ಈಗಾಗಲೇ ಅಪಾರ್ಟ್‌ಮೆಂಟ್‌ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ ಎಂದು ತಿಳಿಸಿದರು.

ಈ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಟೆಕ್‌ಪಾರ್ಕ್‌ಗಾಗಿ ದೊಡ್ಡ ಗಾತ್ರದ ಕಲ್ಲುಗಳನ್ನು ಡೈನಾಮೆಟ್‌ ಮೂಲಕ ಒಡೆಯಲಾಗಿದ್ದು, ಇದರಿಂದ ಅಪಾರ್ಟ್‌ಮೆಂಟ್‌ಗೆ ತೊಂದರೆಯಾಗಿದೆ. 4-5 ಎಕರೆ ಪ್ರದೇಶದಲ್ಲಿ ಸಲರ್‌ಪುರಿಯ ಟೆಕ್‌ಪಾರ್ಕ್‌ ನಿರ್ಮಿಸುತ್ತಿದ್ದು, 40 ಅಡಿಯಷ್ಟು ಆಳದ ಮಣ್ಣು ತೆಗೆಯಲಾಗಿದೆ. ಅಧಿಕಾರಿಗಳಿಂದ ಮಾಹಿತಿ ಕೋರಿದ್ದು, ಕಾಮಗಾರಿಯ ವೇಳೆ ನಿಯಮ ಉಲ್ಲಂಘನೆಯಾಗಿದ್ದರೆ ಕ್ರಮಕೈಗೊಳ್ಳಲಾಗುವುದು ಎಂದರು.

ಇದರೊಂದಿಗೆ ರಾಮಣ್ಣ ಬಡಾವಣೆ ಪ್ರದೇಶದಲ್ಲಿ ಸೋಲಾಸ್‌ ಬಿಲ್ಡರ್‌ ಸಂಸ್ಥೆಯ ಕಟ್ಟಡ ನಿರ್ಮಾಣಕ್ಕೆ ನೆಲ ಅಗೆದಿರುವುದರಿಂದ ಪಕ್ಕದ ಮನೆಯಗಳಿಗೆ ಹಾನಿಯಾಗಿದ್ದು, ಬಿಲ್ಡರ್‌ಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದ ಅವರು ಮಾಹಿತಿ ನೀಡಿದರು.

ನಂತರ ಮೇಯರ್‌, ಕಿನೋ ಥಿಯೇಟರ್‌ ಬಳಿಯ ಕಾಮಗಾರಿ, ಡಾ.ರಾಜ್‌ಕುಮಾರ್‌ ರಸ್ತೆಯ ಕೆಳಸೇತುವೆಯನ್ನು ಪರಿಶೀಲಿಸಿದರು. ಈ ವೇಳೆ ವಿಶೇಷ ಆಯುಕ್ತ ಬಿ.ಎಂ.ವಿಜಯ್‌ ಶಂಕರ್‌, ಜಂಟಿ ಆಯುಕ್ತ ವಾಸಂತಿ ಅಮರ್‌ ಸೇರಿದಂತೆ ಪ್ರಮುಖರು ಹಾಜರಿದ್ದರು. 

Advertisement

ಕೆಳಸೇತುವೆ ಲೋಕಾರ್ಪಣೆ ಇಂದು
ಬಿಬಿಎಂಪಿ ವತಿಯಿಂದ ರಾಜ್‌ಕುಮಾರ್‌ ರಸ್ತೆಯಲ್ಲಿ ಸಿಗ್ನಲ್‌ ಮುಕ್ತ ಸಂಚಾರಕ್ಕಾಗಿ ವಿವೇಕಾನಂದ ಕಾಲೇಜು ಎದುರು ಅಂಡರ್‌ ಪಾಸ್‌ ನಿರ್ಮಾಣ ಮಾಡಲಾಗಿದ್ದು, ಮಂಗಳವಾರ ಮುಖ್ಯಮಂತ್ರಿಗಳು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಿದ್ದಾರೆ. 

2014ರ ಸೆಪ್ಟಂಬರ್‌ನಲ್ಲಿ ಆರಂಭವಾದ ಕಾಮಗಾರಿ  ಇದೀಗ ಮುಗಿದಿದ್ದು, 29.96 ಕೋಟಿ ರೂಪಾಯಿ ವೆಚ್ಚದಲ್ಲಿ ಕೆಳಸೇತುವೆಯನ್ನು ನಿರ್ಮಿಸಲಾಗಿದೆ. ಅಂಡರ್‌ ಪಾಸ್‌ ಕಾಮಗಾರಿ ವೇಳೆ ಜಲಮಂಡಳಿಯ ಕುಡಿಯುವ ನೀರು ಬೃಹತ್‌ ಪೈಪುಗಳು ಹಾಗೂ ಬೆಸ್ಕಾಂ ವಿದ್ಯುತ್‌ ಸಂಪರ್ಕ ಲೈನ್‌ಗಳ ಸ್ಥಳಾಂತರ ವಿಳಂಬವಾ¨ದ್ದ‌ರಿಂದ ಕಾಮಗಾರಿ ವಿಳಂಬವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತೆರಿಗೆ ವಿನಾಯಿತಿ ಜೂ.15ರವರೆಗೆ ವಿಸ್ತರಣೆ
ಬೆಂಗಳೂರು:
ಆನ್‌ಲೈನ್‌ ಆಸ್ತಿ ತೆರಿಗೆ ಪಾವತಿಯಲ್ಲಿ ಗೊಂದಲಗಳು ಉಂಟಾಗಿರುವ ಹಿನ್ನೆಲೆಯಲ್ಲಿ ತೆರಿಗೆ ಪಾವತಿ ವೇಳೆ ನೀಡುತ್ತಿದ್ದ ಶೇ.5ರ ವಿನಾಯಿತಿ ಕೊಡುಗೆಯನ್ನು ಜೂ.15ರವರೆಗೆ ವಿಸ್ತರಿಸಲಾಗಿದೆ ಎಂದು ಮೇಯರ್‌ ಜಿ.ಪದ್ಮಾವತಿ ತಿಳಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನ್‌ಲೈನ್‌ ತೆರಿಗೆ ಪಾವತಿ ವ್ಯವಸ್ಥೆಯಲ್ಲಿ ಉಂಟಾಗಿರುವ ಗೊಂದಲಗಳನ್ನು ಪೂರ್ಣಪ್ರಮಾಣದಲ್ಲಿ ಪರಿಹರಿಸಲು ಇನ್ನೂ ಸಾಧ್ಯವಾಗಿಲ್ಲ. ಇದರಿಂದ ಕೆಲವರು ತೆರಿಗೆ ಪಾವತಿಸಲು ಸಿದ್ಧವಿದ್ದರೂ ಸಾಧ್ಯವಾಗದ ಸ್ಥಿತಿ ಇರುವ ಕಾರಣ ವಿನಾಯಿತಿ ಅವಧಿ ವಿಸ್ತರಿಸಲಾಗಿದೆ. ಶೀಘ್ರವೇ ಅಧಿಕಾರಿಗಳು ಸಮಸ್ಯೆಗಳನ್ನು ಬಗೆಹರಿಸಲಿದ್ದಾರೆ ಎಂದರು.

ವಿನಾಯಿತಿ ನೀಡುವುದರಿಂದ ಪಾಲಿಕೆಗೆ ಸುಮಾರು 50 ಕೋಟಿ ರೂ. ನಷ್ಟವಾಗಲಿದೆ. ಆದರೂ ಜನರ ಅನುಕೂಲಕ್ಕಾಗಿ ಅವಧಿ ವಿಸ್ತರಿಸಲಾಗುತ್ತಿದೆ. ಈ ಕುರಿತು ಮಂಗಳವಾರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next