ಭಾಲ್ಕಿ: ಪಟ್ಟಣದ ವಿವಿಧ ವಸತಿ ಶಾಲೆ ಹಾಗೂ ವಸತಿ ನಿಲಯಗಳಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಆರ್. ರಾಘವೇಂದ್ರ ಬುಧವಾರ ದಿಢೀರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು.
ರಾಜ್ಯ ಕಾನೂನು ಸೇವಾ ಸಮಿತಿ ನಿರ್ದೇಶನದ ಮೇರೆಗೆ ಪಟ್ಟಣದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ, ಬಾಲಕಿಯರ ವಸತಿ ನಿಲಯ ಸೇರಿದಂತೆ ವಿವಿಧ ವಸತಿ ನಿಲಯಗಳಿಗೆ ಭೇಟಿ ನೀಡಿ ಅಡುಗೆ ಮನೆ, ಶೌಚಾಲಯ, ಕುಡಿಯುವ ನೀರು, ಸೋಲಾರ್ ದೀಪದ ವ್ಯವಸ್ಥೆ, ಸ್ನಾನ ಗೃಹ, ಆಟದ ಮೈದಾನ, ವಸತಿ ಹಾಗೂ ತರಗತಿ ಕೋಣೆ ಪರಿಶೀಲಿಸಿದರು.
ಶಾಹು ನಗರ ಬಡಾವಣೆಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ ನ್ಯಾಯಾಧೀಶರು ಅಲ್ಲಿನ ಅಸುರಕ್ಷಿತ ಶೌಚಾಲಯ, ಅಡುಗೆ ಮನೆಯಲ್ಲಿನ ಆಹಾರ ಸಾಮಗ್ರಿ, ಶುದ್ಧ ಕುಡಿಯುವ ನೀರಿನ ಯಂತ್ರ ಹಾಳಾಗಿರುವುದು, ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ ಇಲ್ಲದಿರುವುದು ಮತ್ತು ವಿದ್ಯಾರ್ಥಿಗಳ ಅಸುರಕ್ಷಿತತೆ ಕಂಡು ದಂಗಾದರು. ವಿದ್ಯಾರ್ಥಿನಿಯರ ಕೋಣೆಗಳಿಗೆ ಭೇಟಿ ನೀಡಿ ಅಲ್ಲಿ ವಿದ್ಯಾರ್ಥಿನಿಯರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದಿರುವುದಕ್ಕೆ ಪ್ರಾಚಾರ್ಯ, ವಾರ್ಡ್‌ನಗಳಿಗೆ ತರಾಟೆಗೆ ತೆಗೆದುಕೊಂಡರು.
ನಂತರ ಹುಮನಾಬಾದ್ ರಸ್ತೆಯಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿ ಅಡುಗೆ ಮನೆಯಲ್ಲಿನ
ವ್ಯವಸ್ಥೆ ಹಾಗೂ ಸ್ಟಾಕ್ ಕೊಠಡಿಯಲ್ಲಿನ ಆಹಾರ ಪದಾರ್ಥ ಪರಿಶೀಲಿಸಿದರು. ಬಳಿಕ ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನ್ಯಾಯಾಧೀಶರು, ರಾಜ್ಯ ಕಾನೂನು ಸೇವಾ ಪ್ರಾಧಿಕಾರ
ನಿರ್ದೇಶನ ಮೇರೆಗೆ ವಸತಿ ಶಾಲೆ, ನಿಲಯಗಳಲ್ಲಿನ ವ್ಯವಸ್ಥೆ ಪರಿಶೀಲಿಸಿ ವಾಸ್ತವ ವರದಿ ಸಲ್ಲಿಸಲಾಗುತ್ತದೆ ಎಂದು
ತಿಳಿಸಿದರು.