ಉಡುಪಿ: ಮಂಗಳೂರು ಗ್ರೂಪ್ ಕಮಾಂಡರ್ ಕರ್ನಲ್ ಅನಿಲ್ ನೌಟಿಯಾಲ್ ಅವರು ಮಣಿಪಾಲ ಎಂಐಟಿ ಆವರಣದಲ್ಲಿರುವ ಎನ್‌ಸಿಸಿ ಘಟಕಕ್ಕೆ ಭೇಟಿ ನೀಡಿ ನಡೆಸಿ ಎನ್‌ಸಿಸಿ ಕೆಡೆಟ್‌ಗಳಿಂದ ಗೌರವ ರಕ್ಷೆ ಸ್ವೀಕರಿಸಿದರು. ಇವರೊಂದಿಗೆ ಕಮಾಂಡಿಂಗ್ ಆಫೀಸರ್ ಕರ್ನಲ್ ಸಾಗರ ಪಟ್‌ವರ್ಧನ್, ಟ್ರೈನಿಂಗ್ ಆಫೀಸರ್ ಲೈಫ್ಟಿನೆಂಟ್ ಕರ್ನಲ್ ಅಮಿತ್ ಆಶ್ರಿ ಆಗಮಿಸಿದ್ದರು.
ಬಳಿಕ ಎಂಐಟಿ ಜಂಟಿ ನಿರ್ದೇಶಕ ಡಾ| ಬಿ. ಎಚ್. ವಿ. ಪೈ ಮತ್ತು ಇತರ ಆಡಳಿತಾಧಿಕಾರಿಗಳನ್ನು ಭೇಟಿ ಮಾಡಿದರು.
ಎಂಐಟಿ ಕ್ಯಾಂಪಸ್‌ನಲ್ಲಿ ನೂತನವಾಗಿ ನಿರ್ಮಿಸಲಾದ ಎನ್‌ಸಿಸಿ ತರಬೇತಿ ಕ್ಯಾಂಪಸ್‌ಗೆ ಭೇಟಿ ನೀಡಿದ ಕರ್ನಲ್ ನೌಟಿಯಾಲ್, ತರಬೇತಿ ಸಂಸ್ಥೆಯಲ್ಲಿರುವ ಸೌಲಭ್ಯಗಳಿಗೆ ಮತ್ತು ಮೂಲಸೌಕರ್ಯ ಒದಗಿಸುವಲ್ಲಿ ಎಮ್‌ಐಟಿ, ಮಾಹೆಯ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಎನ್‌ಸಿಸಿಗೆ ಇಲ್ಲಿ ಒದಗಿಸಲಾಗಿರುವ ಮೌಲಸೌಕರ್ಯ ಜಿಲ್ಲೆಯಲ್ಲಿ ಎನ್‌ಸಿಸಿ ಬೆಳವಣಿಗೆಗೆ ಪೂರಕವಾಗಲಿದೆ ಎಂದರು.
ಟಿಎಂಎ ಪೈ ಪಾಲಿಟೆಕ್ನಿಕ್‌ನ ಶೈಕ್ಷಣಿಕ ಸಂಯೋಜಕ ಟಿ. ರಂಗ ಪೈ, ಮಾಹೆಯ ಸಾಮಾನ್ಯ ಸೇವೆಗಳ ನಿರ್ದೇಶಕ ನಿವೃತ್ತ ಕರ್ನಲ್ ಬಿ. ಪ್ರಕಾಶ್ ಚಂದ್ರ, ಯೋಜನಾ ನಿರ್ದೇಶಕ ಕ್ಯಾಪ್ಟನ್ ಎಂ.ಸಿ ಬೆಳ್ಳಿಯಪ್ಪ, ಎಂಐಟಿಯ ಮುಖ್ಯ ವಾರ್ಡನ್ ನಿವೃತ್ತ ಕರ್ನಲ್ ಸಿ.ಎಂ.ಎಸ್ ಕಾಲಕೋಟಿ, ಎಂಐಟಿಯ ಸಹ ನಿರ್ದೇಶಕ (ಅಭಿವೃದ್ಧಿ) ಡಾ| ಸೋಮಶೇಖರ ಭಟ್, ಸಹನಿರ್ದೇಶಕರಾದ (ವಿದ್ಯಾರ್ಥಿ ವ್ಯವಹಾರ) ಡಾ| ಕೆ. ನಾರಾಯಣ ಶೆಣೈ, ಡಾ| ಪ್ರವೀಣ್ ಶೆಟ್ಟಿ, ಕ್ಯಾಪ್ಟನ್ ಮಹೇಶ್ ಶೆಣೈ, ಪ್ರೊ| ದುಂಡೇಶ್ ಚಿನಿವಾರ್, ಅಶೋಕ್ ರಾವ್, ರತ್ನಾಕರ ಸಾಮಂತ್ ಉಪಸ್ಥಿತರಿದ್ದರು.