ಬೆಂಗಳೂರು: ವಿಧಾನಸಭೆ ಚುನಾವಣೆಗೆ ದಿನಗಳು ಸಮೀಪಿಸುತ್ತಿರುವಂತೆ ಆಯೋಗದ ಸಿದ್ಧತಾ ಚಟುವಟಿಕೆಗಳು ಚುರುಕು ಗೊಂಡಿದ್ದು, ಜ.31 ಹಾಗೂ ಫೆ.1ರಂದು ಖುದ್ದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರು ರಾಜ್ಯಕ್ಕೆ ಭೇಟಿ ನೀಡಿ ಚುನಾವಣಾ ಸಿದ್ಧತೆಗಳನ್ನು ಪರಿಶೀಲಿಸಲಿದ್ದಾರೆ.
ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್, ಚುನಾವಣಾ ಆಯುಕ್ತರಾದ ಸುನೀಲ್ ಅರೋರ ಹಾಗೂ ಅಶೋಕ್ ಲಾವಸಾ ನೇತೃತ್ವದಲ್ಲಿ ಪೂರ್ಣ ಆಯೋಗ (ಫುಲ್ ಕಮಿಷನ್) ಎರಡು ದಿನಗಳ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಚುನಾವಣಾ ಸಿದ್ಧತೆಗಳ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸಲಿದೆ.
ವಿಕಾಸಸೌಧದಲ್ಲಿ ನಡೆಯಲಿರುವ ಚುನಾವಣಾ ಸಿದಟಛಿತೆಗಳ ಪರಿಶೀಲನೆ ವೇಳೆ ಜಿಲ್ಲಾ ಚುನಾವಣಾಧಿಕಾರಿಗಳು, ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳ ಜೊತೆಗೆ ಸಭೆ, ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿರುವ ಇತರ ಎಲ್ಲಾ ಅಧಿಕಾರಿಗಳ ಸಭೆ ನಡೆಸಿ ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯ, ಚುನಾವಣೆ ಸಂಬಂಧಿತ ವಿಷಯಗಳು, ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲಿದೆ. ಜೊತೆಗೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಕಾನೂನು-ಸುವ್ಯವಸ್ಥೆ, ಪೊಲೀಸ್ ಇಲಾಖೆಯ ಸಮಸ್ಯೆಗಳು ಮತ್ತು ಬೇಡಿಕೆಗಳ ಬಗ್ಗೆ ಪರಿಶೀಲನೆ ನಡೆಸಲಿದೆ. ಇದೇ ವೇಳೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜೊತೆಗೂ ಆಯೋಗ ಸಮಾಲೋಚನೆ ನಡೆಸಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಮಾಹಿತಿ ನೀಡಿದೆ.
ಜ.9 ಮತ್ತು 10ರಂದು ಉಪ ಚುನಾವಣಾ ಆಯುಕ್ತ ಉಮೇಶ್ ಸಿನ್ಹಾ ನೇತೃತ್ವದ ಕೇಂದ್ರ ಚುನಾವಣಾ ಆಯೋಗದ 6 ಮಂದಿ ಹಿರಿಯ ಅಧಿಕಾರಿಗಳ ತಂಡ ರಾಜ್ಯ ಭೇಟಿ ಕೊಟ್ಟು ಚುನಾವಣಾ ಸಿದ್ಧತೆಗಳ ಬಗ್ಗೆ ಪ್ರಾಥಮಿಕ ಹಂತದ ಪರಿಶೀಲನೆ ನಡೆಸಿತ್ತು. ಇದೀಗ ಪೂರ್ಣ ಕೇಂದ್ರ ಚುನಾವಣಾ ಆಯೋಗ 2 ದಿನಗಳ ಭೇಟಿಗೆ ರಾಜ್ಯಕ್ಕೆ ಆಗಮಿಸುತ್ತಿದೆ.