ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಸರ್ಕಾರ ರಚನೆ ಕಸರತ್ತು ಒಳಗಿಂದೊಳಗೆ ನಡೆಯುತ್ತಿರುವ ಬೆನ್ನಲ್ಲೇ ಸೋಮವಾರ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಂಸದ ಶ್ರೀನಿವಾಸ ಪ್ರಸಾದ್ ಸಹಿತ ಅನೇಕ ನಾಯಕರು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ನಗರದ ಡಾಲರ್ ಕಾಲೋನಿಯಲ್ಲಿರುವ ಯಡಿ ಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಶ್ರೀನಿವಾಸ ಪ್ರಸಾದ್ ಅವರನ್ನು ಖುದ್ದು ಯಡಿಯೂರಪ್ಪ ಅವರೇ ಸ್ವಾಗತಿಸಿ ನಿವಾಸದೊಳಗೆ ಬರಮಾಡಿಕೊಂಡರು. ಇಬ್ಬರೂ ನಾಯಕರು ಕೇಂದ್ರದಲ್ಲಿ ಸಚಿವ ಸ್ಥಾನ ಸಿಗಬಹುದಾದ ಸಾಧ್ಯತೆ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು, ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಇದೇ ಮೊದಲ ಬಾರಿಗೆ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಬಹುದಾದ ಸಾಧ್ಯತೆ, ಚುನಾವಣೆ ಫಲಿತಾಂಶ ಕುರಿತು ಚರ್ಚೆ ನಡೆಸಿದರು. ಭೇಟಿ ನಂತರ ಮಾತನಾಡಿದ ಶ್ರೀನಿವಾಸ ಪ್ರಸಾದ್, ಕೇಂದ್ರ ಸಚಿವ ಸ್ಥಾನ ನೀಡುವುದು ಪಕ್ಷದ ವರಿಷ್ಠರ ಪರಮಾಧಿಕಾರ. ನಾನಾಗಿ ಸಚಿವ ಸ್ಥಾನ ಕೇಳಲ್ಲ. ಅವರಾಗಿಯೇ ನೀಡಿದರೆ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಹೇಳಿದರು.
ಸರ್ಕಾರದ ವಿರುದ್ಧ ಕಿಡಿ: ಮಾಜಿ ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋತು ಸುಣ್ಣವಾಗಿ, ಬಾದಾಮಿಗೆ ಓಡಿ ಹೋಗಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯ ಇಲ್ಲ. ಇಷ್ಟೆಲ್ಲಾ ಅವಾಂತರವಾಗಿದ್ದರೂ ಹೇಗೆ ಸರ್ಕಾರ ಮುಂದುವರಿಸುತ್ತಾರೆ? ಅತೃಪ್ತ ಶಾಸಕರಿಗೆ ಮಂತ್ರಿ ಸ್ಥಾನ ನೀಡುವ ಮೂಲಕ ಮತ್ತಷ್ಟು ಸಮಸ್ಯೆ ಮೈಮೇಲೆಳೆದುಕೊಳ್ಳುತ್ತಾರೆ ಎಂದು ಹೇಳಿದರು.
ಬಿಎಸ್‌ವೈಗೆ ಅಭಿನಂದನೆ: ಚುನಾವಣೆಯಲ್ಲಿ ಬಿಜೆಪಿಗೆ 25 ಸ್ಥಾನ ಸಿಕ್ಕಿರುವ ಹಿನ್ನೆಲೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದರು. ಮಾಜಿ ಶಾಸಕ ಎಸ್. ಮುನಿರಾಜು ನೇತೃತ್ವದಲ್ಲಿ ಆಗಮಿಸಿರುವ ನೂರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು, ನಿವಾಸದ ಎದುರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ನೂತನ ಶಾಸಕ ಡಾ.ಅವಿನಾಶ್ ಜಾಧವ್ ಅವರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕೆಲ ಕಾಲ ಚರ್ಚಿಸಿದರು.